Advertisement

ಸಾಂತಾಕ್ರೂಜ್‌ ಪೇಜಾವರ ಮಠ ಪೇಜಾವರ ಶ್ರೀಗಳಿಗೆ ರಜತ ತುಲಾಭಾರ

02:44 PM Jun 27, 2019 | Vishnu Das |

ಮುಂಬಯಿ: ದೊಡ್ಡ ಯೋಜನಾ ಕಾರ್ಯಕ್ಕಾಗಿ, ಭಗವಂತನ ಸೇವೆಗಾಗಿ ಏರ್ಪಡಿಸಿದ ತುಲಾಭಾರ ಸೇವೆ ಇದಾಗಿದೆ. ಇದು ಕೃಷ್ಣನ ಮಂದಿರಕ್ಕಾಗಿ ಶ್ರೀಕೃಷ್ಣನ ತುಲಾಭಾರವಾಗಿದೆ. ಆದ್ದರಿಂದ ಕೃಷ್ಣನ ಭಕ್ತರೆಲ್ಲರ ಈ ತುಲಾಭಾರ ಇದು ನನ್ನದಲ್ಲ, ಭಗವಂತನ ಸೇವಾ ತುಲಾಭಾರವಾಗಿದೆ. ಕೃಷ್ಣನ ಸೇವೆ ಎಂಬ ರೂಪದಿಂದ ಕೃಷ್ಣನ ಭಕ್ತರೆಲ್ಲರೂ ಸೇರಿ ಮಾಡಿದ ತುಲಾಭಾರ. ಜನರಿಂದ ಜನರಿಗಾಗಿ ಜನರ ಕಾರ್ಯ ಕೃಷ್ಣನೇ ಮಾಡಿಸುವ ಸೇವೆ ಇದಾಗಿದೆ. ಆದ್ದರಿಂದ ನನಗಿದು ಭಾರವೇ ಅಲ್ಲ. ಯಾಕೆಂದರೆ ಇದು ನನಗಲ್ಲ ಕೃಷ್ಣನಿಗೆ ಸಂದ ಸೇವೆಯಾಗಿದೆ. ನನಗೆನೇ ಅಂತ ಮಾಡುತ್ತಿದ್ದರೆ ನನಗೆ ಖಂಡಿತ ಭಾರವಾಗುತ್ತಿತ್ತು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.

Advertisement

ಜೂ. 24 ರಂದು ಸಂಜೆ ಸಾಂತಾಕ್ರೂಜ್‌ ಪೇಜಾವರ ಮಠದಲ್ಲಿ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ ಗೋಕುಲ, ಬಿಎಸ್‌ಕೆಬಿ ಅಸೋಸಿಯೇಶನ್‌ ಮುಂಬಯಿ ಹಾಗೂ ಶ್ರೀ ಕೃಷ್ಣ ಭಕ್ತಾದಿಗಳು ಮತ್ತು ಶ್ರೀ ಪೇಜಾವರ ಮಠಾಧೀಶರ ಅಭಿಮಾನಿಗಳು ಇದೇ ಪ್ರಪ್ರಥಮ ಬಾರಿಗೆ ಮುಂಬಯಿ ಹಾಗೂ ಉಪನಗರಗಳಲ್ಲಿ ಆಯೋಜಿಸಿರುವ ಪೇಜಾವರ ಶ್ರೀಗಳ ರಜತ ತುಲಾಭಾರ ಸಪ್ತಾಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಮಧ್ವಾಚಾರ್ಯರು ವರ್ಣಿಸಿದಂತೆ ಕೃಷ್ಣ ಅಂದರೆ ದೊಡ್ಡ ಸಮುದ್ರ, ಏಕ ಸಾಗರ ಎಂದರ್ಥ. ಆ ಸಮುದ್ರದಲ್ಲಿ ಜಲವಿದೆ. ಆದರೆ ಕೃಷ್ಣನಲ್ಲಿ ತುಂಬಿದ್ದು ಜಲವಲ್ಲ ಬಲ. ಸಾಗರದಲ್ಲಿ ಬೇಕಾದಷ್ಟು ರತ್ನಗಳಿದ್ದರೆ ಕೃಷ್ಣನಲ್ಲಿ ಬೇಕಾದಷ್ಟು ಗುಣಗಳಿವೆ. ಇಂತಹ ಕೃಷ್ಣನಲ್ಲಿ ಯೋಗಿಗಳು, ಧ್ಯಾನಿಗಳು, ಗೋವುಗಳು, ಗೋಪಾಲಗರೂ, ಗೋಪಿಕಾ ಸ್ತ್ರೀಯರು ಸೇರಿದಂತೆ ಎಲ್ಲರೂ ಕೂಡಾ ಕೃಷ್ಣನತ್ತ ಧಾವಿಸಿ ಬರುತ್ತಾರೆ. ಎಲ್ಲರನ್ನೂ ಸೆಳೆಯುವ ಆಕರ್ಷಣೆಯ ಶಕ್ತಿ ಶ್ರೀಕೃಷ್ಣನಿಗಿದೆ. ಬರೇ ಭಾರತೀಯರು ಮಾತ್ರವಲ್ಲ ವಿದೇಶಿಯರೂ ಶ್ರೀಕೃಷ್ಣನ ನಾಮಸ್ಮರಣೆಗೈಯುವುವಾಗ ಕುಣಿಯುತ್ತಾ ಆತನಲ್ಲಿ ಆಕರ್ಷಿತರಾಗುತ್ತಾರೆ. ಶ್ರೀ ಕೃಷ್ಣನ ಆಕರ್ಷಣಾ ಶಕ್ತಿ ಅತ್ಯದ್ಭುತವಾದುದು. ಜಡವಾದ ಈ ಭೂಮಿಯ ಆಕರ್ಷಣಾಶಕ್ತಿ ಮೇಲಿದ್ದದ್ದನ್ನು ಕೆಳಕ್ಕೆ ತಳ್ಳುವಂತಿದ್ದರೆ, ಶ್ರೀಕೃಷ್ಣನ ಶಕ್ತಿ ಕೆಳಗಿದ್ದದ್ದನ್ನು ಮೇಲಕ್ಕೆ ಎತ್ತುವ ಆಕರ್ಷಣಾ ಶಕ್ತಿಯಾಗಿದೆ. ಎಲ್ಲರ ಉದ್ಧಾರಕ ಕೃಷ್ಣನ ಶಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಕಾಗದು. ಕೃಷ್ಣ ರಜತ ಪೀಠವಾಸಿಯಾಗಿದ್ದು ಆತನಿಗೆ ರಜತ ತುಲಾಭಾರ ಸಂದಂತಾಯಿತು. ಅಂತೆಯೇ ಗೋಪಾಲಕೃಷ್ಣ ಪಬ್ಲಿಕ್‌ ಟ್ರಸ್ಟ್‌ನವರು ರೂಪಿಸಲು ಉದ್ದೇಶಿರುವ ಶ್ರೀಕೃಷ್ಣನ ಮಂದಿರವೂ ಶಿಲಾಮಯವಾಗಿ ಶಾಶ್ವತಮಯವಾಗಿ ರೂಪುಗೊಳ್ಳಲಿ ಎಂದು ಹಾರೈಸಿದರು.

ಶ್ರೀ ಅಂಬಿಕಾ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್‌ ಇದರ ಪ್ರದಾನ ಅರ್ಚಕ ವಿದ್ವಾನ್‌ ಪೆರ್ಣಂಕಿಲ ಹರಿದಾಸ್‌ ಭಟ್‌ ಸಂಯೋಜನೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಬಿಎಸ್‌ಕೆಬಿಎ ಮತ್ತು ಜಿಪಿಟಿ ಸಂಸ್ಥೆಗಳ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು ಮತ್ತು ವಿಜಯಲಕ್ಷ್ಮೀ ಎಸ್‌. ರಾವ್‌ ದಂಪತಿ ಹಾಗೂ ಉಭಯ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಭಕ್ತರನ್ನೊಳಗೊಂಡು ವಿಶ್ವೇಶತೀರ್ಥರ ಪ್ರಥಮ ರಜತ ತುಲಾಭಾರವನ್ನು ನೆರವೇರಿಸಿದರು.

ಉಡುಪಿ ಶ್ರೀಕೃಷ್ಣನ ಆರಾಧಕ, ನಡೆದಾಡುವ, ಮಾತನಾಡುವ ಕೃಷ್ಣನೆಂದೇ ಪ್ರಸಿದ್ಧಿ ಪಡೆದ ಉಡುಪಿ ಅಷ್ಠಮಠಗಳಲ್ಲಿನ ಶ್ರೀ ಪೇಜಾವರ ಮಠಾಧೀಶ ವಿಶ್ವೇಶ ಶ್ರೀಗಳು ಪಟ್ಟದ ದೇವರು ಶ್ರೀರಾಮ ವಿಠಲ ದೇವರಿಗೆ ಪೂಜೆ ನೆರವೇರಿಸಿದರು. ಡಾ| ಸುರೇಶ್‌ ರಾವ್‌ ಸ್ವಾಗತಿಸಿ ಪ್ರಸ್ತಾವನೆಗೈದು ಗೋಕುಲವು ಮುಂಬಯಿಯ ಉಡುಪಿಯಾಗಿದೆ. ಒಂದು ಗಂಟೆಯೇ ಒಂದೆಡೆ ಇರದ ಶ್ರೀಗಳ ವಾರದ ಮುಂಬಯಿ ಮೊಕ್ಕಾಂ ಅಭಿನಂದನೀಯ ಎಂದು ನುಡಿದು, ಸಯಾನ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕೃಷ್ಣ ಮಂದಿರದ ರೂಪುರೇಷೆ, ಕಾಮಗಾರಿ ಯೋಜನೆಯನ್ನು ಸ್ಲೆ$çಡ್‌ಶೋ ಮುಖಾಂತರ ವಿವರಿಸಿದರು.

ಈ ಸಂದರ್ಭದಲ್ಲಿ ಬಿಎಸ್‌ಕೆಬಿಎ ಸಂಸ್ಥೆಯ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಶೈಲಿನಿ ರಾವ್‌, ಗೌರವ ಪ್ರಧಾನ ಕಾರ್ಯದರ್ಶಿ ಎ. ಪಿ. ಕೆ ಪೋತಿ, ಗೌರವ ಕೋಶಾಧಿಕಾರಿ ಸಿಎ ಹರಿದಾಸ್‌ ಭಟ್‌, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್‌ ರಾವ್‌, ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಕುಸುಮಾ ಶ್ರೀನಿವಾಸ್‌, ಮಹಿಳಾ ವಿಭಾಗಧ್ಯಕ್ಷೆ ಐ. ಕೆ. ಪ್ರೇಮಾ ಎಸ್‌. ರಾವ್‌, ಜಿಪಿಟಿ ವಿಶ್ವಸ್ಥ ಮಂಡಳಿ ಗೌ| ಪ್ರ| ಕಾರ್ಯದರ್ಶಿ ಎ. ಎಸ್‌. ರಾವ್‌, ವಿಶ್ವಸ್ಥ ಸದಸ್ಯರುಗಳಾದ ಬಿ. ರಮಾನಂದ ರಾವ್‌ ಬಡನಿಡಿಯೂರು, ಕೃಷ್ಣ ಆಚಾರ್ಯ ಮತ್ತು ಎ. ಎನ್‌. ಉಡುಪ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ವಿಷ್ಣುಮೂರ್ತಿ ಆಚಾರ್ಯ ಉಡುಪಿ, ವಿಕ್ರಾಂತ್‌ ಉರ್ವಾಳ್‌, ಡಾ| ಸುಧೀರ್‌ ಆರ್‌.ಎಲ್‌ ಶೆಟ್ಟಿ, ಡಾ| ಎಂ. ಎಸ್‌. ಶೆಟ್ಟಿ, ಪೇಜಾವರ ಮಠದ ಮುಂಬಯಿ ಶಾಖೆಯ ಆಡಳಿತಾಧಿಕಾರಿ ವಿದ್ವಾನ್‌ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ್‌ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್‌ ಪುತ್ತಿಗೆ, ನಿರಂಜನ್‌ ಗೋಗೆr ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

Advertisement

ಆರಂಭದಲ್ಲಿ ವಿಶ್ವಪ್ರಸಿದ್ಧ ಡ್ರಮ್‌ವಾದಕ ಪದ್ಮಶ್ರೀ ಆನಂದನ್‌ ಶಿವಮಣಿ ಅವರಿಂದ ಸಂಗೀತವಾದನ ಕಾರ್ಯಕ್ರಮ ನಡೆಯಿತು. ಮಧ್ಯಾಂತರದಲ್ಲಿ ತೊಟ್ಟಿಲು ಪೂಜಾ ಸೇವೆ ನಡೆಯಿತು. ಪುರೋಹಿತರು ವೇದಘೋಷಗೈದರು. ವಿದ್ವಾನ್‌ ಪೆರ್ಣಂಕಿಲ ಹರಿದಾಸ್‌ ಭಟ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರೀ ಕೃಷ್ಣ ಮಂದಿರ ನಿರ್ಮಾಣ ದೇಣಿಗೆಯ ಕೈಪಿಡಿಯನ್ನು ಶ್ರೀಗಳು ಬಿಡುಗಡೆಗೊಳಿಸಿ ಯೋಜನೆ ಶೀಘ್ರವೇ ಪೂರ್ಣಗೊಳ್ಳಲಿ ಎಂದು ಶುಭಹಾರೈಸಿದರು.

ಜೂ. 26 ರಂದು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜರಿಮರಿ, ಜೂ. 27 ರಂದು ಶ್ರೀ ಸುಬ್ರಹ್ಮಣ್ಯ ಮಠ, ಛೆಡ್ಡಾ ನಗರ್‌ ಚೆಂಬೂರು, ಜೂ. 28 ರಂದು “ಆಶ್ರಯ’ ನೆರೂಲ್‌ ನವಿಮುಂಬಯಿ, ಜೂ. 29 ಮತ್ತು ಜೂ. 30 ರಂದು ಶ್ರೀ ಪೇಜಾವರ ಮಠ ಸಾಂತಾಕ್ರೂಜ್‌ ಪೂರ್ವ ಇಲ್ಲಿ ನಡೆಯಲಿದೆ. ಜೂ. 30 ರಂದು ಬೆಳಗ್ಗೆ 10 ರಿಂದ ಗೋಕುಲ ನಿವೇಶನ ಸಾಯನ್‌ ಇಲ್ಲಿ ಪೇಜಾವರ ಶ್ರೀಗಳಿಂದ ಶ್ರೀ ಕೃಷ್ಣ ಮಂದಿರದ ಶಿಲಾನ್ಯಾಸ ಹಾಗೂ ಶ್ರೀಪಾದಂಗಳವ‌ರಿಗೆ ಪಟ್ಟದ ದೇವರ ಸಹಿತ ತುಲಾಭಾರ ಸೇವೆಯೊಂದಿಗೆ ಸಂಜೆ ಸಾಂತಾಕ್ರೂಜ್‌ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ತುಲಾಭಾರ ಸಪ್ತಾಹ ಸಮಾರೋಪ ನಡೆಯಲಿದೆ.

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next