ಭಾರತದಲ್ಲಿ ಸಂತ ಪರಂಪರೆಗೆ ಬೃಹತ್ ಇತಿಹಾಸವಿದೆ. ಸಂತ ತುಕಾರಾಮ್, ಸಂತ ಕಬೀರ, ಸಂತ ನಾಮದೇವ, ಸಂತ ರವಿದಾಸ್ ಹೀಗೆ ಹಲವು ಮಹಾನ್ ವ್ಯಕ್ತಿಗಳಿದ್ದಾರೆ. ಆದರೆ ಸಂತ ಗಾಡ್ಗೆ ಮಹಾರಾಜ್ ಬಗ್ಗೆ ಕೇಳಿದ್ದೀರಾ?
ಇದನ್ನೂ ಓದಿ:ಮಗಳ ಮದುವೆಗೆ ಸಾಲ; ಸವಣೂರಿನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಸಂತ ಗಾಡ್ಗೆ ಮಹಾರಾಜ್ ಭಾರತೀಯ ಚಿಂತಕ, ಸಂತ, ಸಮಾಜ ಸುಧಾರಕರಾಗಿದ್ದಾರೆ. ಸಂತ ಗಾಡ್ಗೆ ಅವರು ಸಮಾಜ ಸುಧಾರಕರಾಗಿದ್ದು, ಅವರು ತಮ್ಮ ಕೆಲಸಗಳಿಗೆ ವೈಜ್ಞಾನಿಕ ಸ್ಪರ್ಶ ನೀಡಿದ್ದರು. ಸಮಾಜದಲ್ಲಿ ತುಳಿತಕ್ಕೊಳಗಾದವರು, ಶೋಷಣೆಗೊಳಗಾದವರ ಸೇವೆಗಾಗಿ ಅವರು ತಮ್ಮ ಜೀವನದುದ್ದಕ್ಕೂ ಅವಿರತವಾಗಿ ಶ್ರಮಿಸಿದ್ದ ಮಹಾನ್ ಕಾಯಕ ಜೀವಿ ಅವರಾಗಿದ್ದರು. ಸಾಮಾಜಿಕ ಕಟ್ಟುಪಾಡು ಮತ್ತು ಸಂಪ್ರದಾಯಗಳನ್ನು ಟೀಕಿಸಲು ಅವರು ಕೀರ್ತನೆಯನ್ನು ಬಳಸಿ, ಸಮಾಜಕ್ಕೆ ಉಪದೇಶ ನೀಡಿದ್ದರು. ಜೊತೆಗೆ ಶಿಕ್ಷಣದ ಮಹತ್ವದ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಿದ್ದರು.
ಸ್ವಯಂಪ್ರೇರಿತರಾಗಿ ಬಡತನದಲ್ಲೇ ಬದುಕಿದ್ದರು:
Related Articles
ಸಂತ ಗಾಡ್ಗೆ ಅವರ ಮೂಲ ಹೆಸರು ದೇಬುಜಿ ಜಿಂಗ್ರಾಜಿ ಜರ್ನೋಕರ್ ಎಂಬುದಾಗಿತ್ತು. ಅವರು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಇಂದಿನ ಅಂಜನಗಢ್ ಸುರ್ಜಿ ತಾಲೂಕಿನ ಶೆಂಡಾಗಾಂವ್ ಗ್ರಾಮದ ಧೋಬಿ ಕುಟುಂಬದಲ್ಲಿ (1876ರ ಫೆಬ್ರುವರಿ 23) ಜನಿಸಿದ್ದರು.
ಸಂತ ಗಾಡ್ಗೆ ಬಾಬಾ ಅವರು ಸಾಮಾಜಿಕ ನ್ಯಾಯ ಮತ್ತು ಸಮಾಜ ಸುಧಾರಣೆಗಾಗಿ ಒಂದು ಹಳ್ಳಿಯಿಂದ, ಮತ್ತೊಂದು ಹಳ್ಳಿಗೆ ತಿರುಗಾಡುತ್ತಿದ್ದರು. ಇಂದಿಗೂ ಕೂಡಾ ಗಾಡ್ಗೆ ಅವರು ವಿವಿಧ ರಾಜಕೀಯ ಪಕ್ಷಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪ್ರೇರಣೆಯಾಗಿದ್ದಾರೆ ಎಂಬುದು ಅತಿಶಯೋಕ್ತಿಯಾಗಲಾರದು.
ಸ್ವಚ್ಛತೆಗಾಗಿ ಅಂದೇ ಪಣತೊಟ್ಟಿದ್ದರು!
ಗಾಡ್ಗೆ ಬಾಬಾ ಅವರು ಒಂದು ಹಳ್ಳಿಯನ್ನು ಪ್ರವೇಶಿಸಿದ ಕೂಡಲೇ ಗ್ರಾಮದ ಕೊಳಚೆ ಮತ್ತು ರಸ್ತೆಗಳನ್ನು ಗುಡಿಸಲು ಪ್ರಾರಂಭಿಸುತ್ತಿದ್ದರಂತೆ. ಮತ್ತು ತನ್ನ ಕೆಲಸವಾಗುವವರೆಗೂ ತಾನು ನಿಮಗೆ ಅಭಿನಂದನೆ ಹೇಳುವವರೆಗೆ ಕಾಯಬೇಕು ಎಂದು ತಿಳಿಸುತ್ತಿದ್ದರಂತೆ. ಇವರ ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರು ಹಣವನ್ನು ನೀಡುತ್ತಿದ್ದು, ಅವರು ಅದನ್ನು ಸಮಾಜದ ಏಳಿಗೆಗಾಗಿ ಬಳಸಿದ್ದರು. ಆ ಹಿನ್ನೆಲೆಯಲ್ಲಿ ಗಾಡ್ಗೆ ಮಹಾರಾಜ್ ಅವರು ಶಿಕ್ಷಣ ಸಂಸ್ಥೆ, ಧರ್ಮಶಾಲೆ, ಗೋಶಾಲೆ ಹಾಗೂ ಆಸ್ಪತ್ರೆಗಳನ್ನು ಕಟ್ಟಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು.
ಸಂತ ತುಕಾರಾಮ್ ಅವರಂತೆಯೇ ಸಂತ ಗಾಡ್ಗೆ ಅವರು ಕೀರ್ತನೆಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಗಾಡ್ಗೆ ಬಾಬಾ ಅವರು ರಾತ್ರಿ ಊಟವಾದ ನಂತರ ಎಲ್ಲಾ ಜಾತಿಯ ಜನರು ಒಟ್ಟು ಸೇರುವಂತೆ ಮಾಡುತ್ತಿದ್ದರು. ಸ್ವಯಂ ಬಡತನದಲ್ಲಿ ಬದುಕಿದ ಗಾಡ್ಗೆ ಬಾಬಾ ಅವರು ಸಂತರಂತೆ ಬದುಕಿದ್ದರು. ಅವರು ಹರಿದ ಬಟ್ಟೆಯನ್ನು ಧರಿಸುತ್ತಿದ್ದು, ಸ್ವಂತ ಮನೆ ಕೂಡಾ ಇದ್ದಿರಲಿಲ್ಲವಾಗಿತ್ತು.
20ನೇ ಶತಮಾನದ ಪ್ರಸಿದ್ಧ ಧಾರ್ಮಿಕ ಮುಖಂಡ ಮೆಹರ್ ಬಾಬಾ ಅವರನ್ನು ಗಾಡ್ಗೆ ಅವರು ಹಲವಾರು ಬಾರಿ ಭೇಟಿಯಾಗಿದ್ದರು. ಗಾಡ್ಗೆ ಬಾಬಾ ಅವರು ತನ್ನ ಅತೀ ಪ್ರಿಯ ಸಂತರಲ್ಲಿ ಒಬ್ಬರಾಗಿದ್ದಾರೆ ಎಂದು ಮೆಹರ್ ಬಾಬಾ ಹೇಳಿದ್ದರು. 1954ರ ನವೆಂಬರ್ 6ರಂದು ಮೆಹರ್ ಬಾಬಾ ಅವರನ್ನು ಗಾಡ್ಗೆ ಅವರು ಪಂಡರಾಪುರಕ್ಕೆ ಆಹ್ವಾನಿಸಿದ್ದರು, ಅವರು ಈ ಇಬ್ಬರು ಸಂತರ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದರು.
ಗಾಡ್ಗೆ ಮಹಾರಾಜ್ ಅವರು 1956ರ ಡಿಸೆಂಬರ್ 20ರಂದು ಅಮರಾವತಿಗೆ ತೆರಳುತ್ತಿರುವಾಗ ವಾಲ್ಗಾಂವ್ ಸಮೀಪದ ಪೆಢೀ ನದಿ ಪ್ರದೇಶದಲ್ಲಿ ಇಹಲೋಕ ತ್ಯಜಿಸಿದ್ದರು. ಆದರೆ ಗಾಡ್ಗೆ ಅವರ ಚಿಂತನೆ ಮತ್ತು ದೂರದೃಷ್ಟಿ ಇಂದಿಗೂ ಎಲ್ಲರಿಗೂ ಆದರ್ಶಪ್ರಾಯವಾಗಿದೆ.