Advertisement

ಸಂಸ್ಕೃತ ಶಾಲೆಯೇ ಕನ್ನಡ ಮಾಧ್ಯಮ ಸರಕಾರಿ ಶಾಲೆಯಾಯಿತು

09:56 AM Nov 20, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1903 ಶಾಲೆ ಆರಂಭ
ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿದ್ದ “ಉತ್ತಮ ಶಾಲೆ’

ವಿಟ್ಲ: ಬಂಟ್ವಾಳ ತಾ|ನ ಸಾಲೆತ್ತೂರಿನಲ್ಲಿ ವಿದ್ಯಾಭಿಮಾನಿಗಳ ಶ್ರಮದ ಫಲವಾಗಿ ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ 1903ರಲ್ಲಿ ಸಂಸ್ಕೃತ ಶಾಲೆ ಆರಂಭಗೊಂಡು ಕಾಲಕ್ರಮೇಣ ಕಾಡುಮಠದಿಂದ ಕುಂಡೈಮೂಲೆಗೆ ಸ್ಥಳಾಂತರಗೊಂಡಿತು. ಬಳಿಕ ಸರಕಾರಿ ಶಾಲೆಯಾಗಿ ಊರ್ಜಿತವಾಯಿತು ಎಂಬ ಐತಿಹ್ಯವಿದೆ. ಆರಂಭದಲ್ಲಿ ಮಣ್ಣಿನ ಗೋಡೆ, ಮುಳಿಹುಲ್ಲಿನ ಛಾವಣಿಯಿದ್ದ ಶಾಲೆಗೆ 1942ರಲ್ಲಿ ವ್ಯವಸ್ಥಿತ ಕಟ್ಟಡ ರಚನೆಯಾಯಿತು. 1968ರಲ್ಲಿ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೇರಿತು. ಅಗರಿ ಲಕ್ಕಪ್ಪ ರೈ, ಕುಳಾಲು ಅಣ್ಣಪ್ಪ ಭಂಡಾರಿ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ “ಹಿಸ್ಟರಿ ಆಫ್‌ ತುಳುವ’ ಕೃತಿ ಖ್ಯಾತಿಯ ಪ್ರೊ| ಬಿ.ಎ. ಸಾಲೆತ್ತೂರು ಅವರ ಆದರ್ಶಗಳ ನಡುವೆ ಈ ಶಾಲೆ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳನ್ನು ರಾಷ್ಟ್ರಕ್ಕೆ ಅರ್ಪಿಸಿದೆ.

ಉತ್ತಮ ಶಾಲೆ
1994ರಲ್ಲಿ ಉತ್ತಮ ಶಾಲೆ ಎಂದು ಗುರುತಿ ಸಲ್ಪಟ್ಟಿತ್ತು. ಮುಖ್ಯ ಅಧ್ಯಾಪಕರಾಗಿದ್ದ ಬಾಬು ಮುಗೇರ, ಸಹಶಿಕ್ಷಕಿಯಾಗಿದ್ದ ವಿಜಯಾ ಶೆಟ್ಟಿ ಸಾಲೆತ್ತೂರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶತ್ತಿ, ಮುಖ್ಯ ಶಿಕ್ಷಕಿಯಾಗಿದ್ದ ಶಶಿಕಲಾ ತಾ| ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ.
ಇಲ್ಲಿನ ಮಕ್ಕಳು ಹಲವು ಬಾರಿ ಖೋ ಖೋ ದಲ್ಲಿ ರಾಜ್ಯಮಟ್ಟಕ್ಕೆ, ಚಂದನ ವಾಹಿನಿ “ಥಟ್‌ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಶಾಲೆಗೆ 1.80 ಎಕ್ರೆ ಜಾಗವಿದ್ದು, ಸಂಯುಕ್ತ ಪ್ರೌಢಶಾಲೆಯಾಗಿ ಆರಂಭಗೊಂಡ ಸರಕಾರಿ ಪ್ರೌಢಶಾಲೆ ಇದೀಗ ಪ್ರತ್ಯೇಕ ಅಸ್ತಿತ್ವ ಹೊಂದಿದೆ.

ಹಳೆ ವಿದ್ಯಾರ್ಥಿಗಳು
ಅಧ್ಯಾಪಕರಾಗಿದ್ದ “ಪರಡೆ ಕಲಿ ಗಂಗಸರ’ ಖ್ಯಾತಿಯ ದಿ| ನರ್ಕಳ ಮಾರಪ್ಪ ಶೆಟ್ಟರು, ನಿವೃತ್ತ ಐಎಎಸ್‌ ಅಧಿಕಾರಿ ಅಗರಿ ವಿಟ್ಟಲ ರೈ, ಕರ್ಣಾಟಕ ಬ್ಯಾಂಕಿನ ನಿವೃತ್ತ ಮಹಾಪ್ರಬಂಧಕ ಜಿ.ಕೆ. ಭಟ್‌, ಡಾ| ಶ್ರೀಧರ ಭಟ್‌ ಮಾವೆ, ಡಾ| ಅಗರಿ ವಿಟ್ಟಲ ಅಡ್ಯಂತಾಯ, ಶಿವರಾಮ ಅಡ್ಯಂತಾಯ, ಮುಂಬಯಿ ಹೈಕೋರ್ಟ್‌ ನ್ಯಾಯಾಧೀಶ ಕೊಲ್ಲಾಡಿ ಬಾಲಕೃಷ್ಣ ಅಡ್ಯಂತಾಯ, ಭದ್ರಾವತಿ ಪರಿಮಳ ಆಯಿಲ್‌ ಇಂಡಸ್ಟ್ರಿ ಮಾಲಕ
ಪಡೆಕುಂಜ ಜಗನ್ನಾಥ ನಾೖಕ್‌, ರಾಮಣ್ಣ ಆಳ್ವರು ಇಲ್ಲಿನ ಹಳೆ ವಿದ್ಯಾರ್ಥಿಗಳು.

Advertisement

ಹಿಂದಿನ ಮುಖ್ಯ ಶಿಕ್ಷಕರು
ಮುಖ್ಯ ಶಿಕ್ಷಕರಾಗಿ ಪಿ. ವೆಂಕಟರಮಣಯ್ಯ, ತನಿಯಪ್ಪ ಮೂಲ್ಯ, ಶಂಕರ ಪುರುಷ, ಮುಕುಂದ ರಾವ್‌ ಕೆ., ಎನ್‌. ನಾರಾಯಣ ಗೌಡ, ಎಂ. ನಾರಾಯಣ ರೈ, ಕೆ. ಕೃಷ್ಣ ರಾವ್‌, ಮಾವೆ ಸೀತಾರಾಮ ಭಟ್‌(ಪ್ರ.), ಬಾಬು ಮುಗೇರ ಎಂ., ಶಶಿಕಲಾ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ 280 ವಿದ್ಯಾರ್ಥಿಗಳಿದ್ದು, 10 ಮಂದಿ ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕರಿದ್ದಾರೆ. ಈ ವರ್ಷದಿಂದ ಆಂಗ್ಲ ಮಾಧ್ಯಮದಲ್ಲಿ ಎಲ್‌ಕೆಜಿ ತೆರೆಯಲಾಗಿದೆ. ಎಸ್‌ಡಿಎಂಸಿಯವರ ಸಹಕಾರದಿಂದ ಶಾಲೆಯ ಎಲ್ಲ ಕೆಲಸಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿದ್ದು, ಶಾಲಾ ಪ್ರವಾಸ, ವಾರ್ಷಿಕೋತ್ಸವಗಳು ನಡೆಯುತ್ತಿವೆ.

ಶತಮಾನ ದಾಟಿದ ಶಾಲೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಪಂ.ನ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದ ಸಂಸ್ಥೆ ಉತ್ತಮವಾಗಿ ಮುನ್ನಡೆಯುತ್ತಿದೆ.
-ರಮಣಿ, ಮುಖ್ಯ ಶಿಕ್ಷಕಿ

1ರಿಂದ 5ನೇ ತರಗತಿವರೆಗೆ ಈ ಶಾಲೆಯಲ್ಲಿ ಓದಿದ್ದೆ. ಆಗ ಮೂವರು ಶಿಕ್ಷಕರಿದ್ದರು.ಅವರೆಲ್ಲರ ಪಾಠ ಉತ್ತಮವಾಗಿತ್ತು. ಪಠ್ಯ- ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ನೀಡಿದ್ದರು. ಇಲ್ಲಿನ ವಿದ್ಯಾರ್ಥಿ ಜೀವನದ ನೆನಪು ಮರುಕಳಿಸುತ್ತದೆ. ಈ ಶಾಲೆಗೆ ಮತ್ತು ನನ್ನ ಶಿಕ್ಷಕರಿಗೆ ಋಣಿಯಾಗಿದ್ದೇನೆ.
-ಅಗರಿ ವಿಟ್ಟಲ ರೈ, ನಿವೃತ್ತ ಐಎಎಸ್‌ ಅಧಿಕಾರಿ, ಹಿರಿಯ ವಿದ್ಯಾರ್ಥಿ

- ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next