ಧಾರವಾಡ: ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಹಿರಿಯರು ನೀಡಿದ ಸಂಸ್ಕೃತಿಗೆ ಸಂಸ್ಕೃತ ಪಾಠ ಶಾಲೆ ಬುನಾದಿಯಾಗಿದೆ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಹೇಳಿದರು.
ಇಲ್ಲಿನ ಮಾಳಮಡ್ಡಿ ವನವಾಸಿ ಶ್ರೀರಾಮ ಮಂದಿರ ಸಭಾಭವನದಲ್ಲಿ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಕರ್ನಾಟಕ ಸಂಸ್ಕೃತ ಮಹಾ ವಿದ್ಯಾಲಯಗಳ ಬೋಧಕ-ಬೋಧಕೇತರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ರಘುವಂಶಸ್ಯ ಸರ್ವಜನೀನತಾ ವಿಷಯ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಕೃತ ಪಾಠ ಶಾಲೆಗಳು ಇನ್ನೂ ಹೆಚ್ಚು ಪ್ರಚಲಿತವಾಗಲಿ. ವಿದ್ಯಾರ್ಥಿಗಳು ಶಾಲೆಯಲ್ಲಿ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಬೇಕು. ಪ್ರಾಥಮಿಕ ಶಿಕ್ಷಣದಿಂದ ಹೈಸ್ಕೂಲ್ ವರೆಗೆ ಸಂಸ್ಕೃತವನ್ನು ಒಂದು ವಿಷಯವನ್ನಾಗಿ ಮಾಡಬೇಕು ಎಂಬುದು ನನ್ನ ಆಗ್ರಹ.
ರಾಜ್ಯದಲ್ಲಿ ಸಂಸ್ಕೃತ ಉಳಿಯಲು ಸಂಸ್ಕೃತ ಪಾಠ ಶಾಲೆಗಳು ಉಳಿಯಬೇಕು ಎಂದರು. ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ರಾಜ್ಯಾಧ್ಯಕ್ಷ ಡಾ| ಜಾನಕೀರಾಮ ಮಾತನಾಡಿದರು. ಕಾನೂನು ವಿವಿ ಪ್ರಭಾರಿ ಕುಲಪತಿ ಪ್ರೊ| ಸಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸಂಸ್ಕೃತ ಕಾಲೇಜು ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ| ನಾಗೇಂದ್ರ ಅವರು ಸಂಘದ ಕುರಿತು ಸಮಗ್ರ ಮಾಹಿತಿ ನೀಡಿದರು. ಕರ್ನಾಟಕ ಸಂಸ್ಕೃತ ಪಾಠಶಾಲೆಗಳ ರಾಜ್ಯಾಧ್ಯಕ್ಷ ಸಿ.ಎನ್. ಚಂದ್ರಶೇಖರಯ್ಯ ಮಾತನಾಡಿದರು. ಡಾ| ವೇಣಿಮಾಧವ ಶಾಸ್ತ್ರಿ, ಪಂ| ಮಧುಸೂದನಶಾಸ್ತ್ರಿ ಹಂಪಿಹೊಳಿ, ವಿದ್ವಾನ್ ಪತಂಜಲಿ ವೀಣಾಕರ,
-ವಿದ್ವಾನ್ ಶ್ರೀಧರ ಇನಾಂದಾರ, ವಿದ್ವಾನ್ ರವಿ ಜೋಶಿ, ವಿದ್ವಾನ್ ಜನಾರ್ಧನಶಾಸ್ತ್ರಿ ಜೋಶಿ, ಡಾ| ಕೃಷ್ಣಶಾಸ್ತ್ರಿ ಜೋಶಿ, ಶಂಕರ ಕುಲಕರ್ಣಿ, ವಿ.ಎಲ್. ಯರಗಟ್ಟಿ ಇದ್ದರು. ನಾಗರಾಜ ಭಟ್ ಸ್ವಾಗತಿಸಿದರು. ಸೂರ್ಯನಾರಾಯಣ ಭಟ್ ನಿರೂಪಿಸಿದರು. ಡಾ| ಮಂಜುನಾಥ ಭಟ್ ವಂದಿಸಿದರು.