Advertisement

ಕರವೇ ‘ನಾರಾಯಣಗೌಡ’ ಅವರ ಹೆಸರಿನಲ್ಲೇ ಸಂಸ್ಕೃತ ಅಡಗಿದೆ: ಪ್ರತಾಪ್ ಸಿಂಹ ಕಿಡಿ

07:01 PM Jan 17, 2022 | Team Udayavani |

ಬೆಂಗಳೂರು: ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟದ ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೋಮವಾರ ಕಿಡಿ ಕಾರಿದ್ದು, ನಾರಾಯಣ ಗೌಡ ಅವರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ನಮ್ಮ ಆಚಾರ, ವಿಚಾರ, ಭಾಷೆ ಸೇರಿದಂತೆ ಎಲ್ಲದರಲ್ಲೂ ಸಂಸ್ಕೃತ ಅಡಗಿದೆ.ಸಂಸ್ಕೃತ ಎಲ್ಲಾ ಭಾಷೆಗಳಿಗೂ ತಾಯಿ. ಸಂವಿಧಾನ ಬರೆಯಬೇಕಾದ ಸಂದರ್ಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂಸ್ಕೃತ ವನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆಂಬ ಪ್ರಸ್ತಾಪ ಮುಂದಿಟ್ಟಿದ್ದರು. ಅವರಿಗಿಂತ ಮೇಧಾವಿ, ಜ್ಞಾನಿಗಳು ಯಾರಿದ್ದಾರೆ ಎಂದು ಪ್ರಶ್ನಿಸಿದರು.

ನಾರಾಯಣ ಗೌಡರ ಹೆಸರಿನಲ್ಲೇ ಸಂಸ್ಕೃತ ಇದೆ , ನರ +ಆಯಣ, ಹಾಗಂತ ಅವರು ಹೆಸರು ಬದಲಾಯಿಸಿಕೊಳ್ಳುತ್ತಾರೆಯೋ? ಕರೀಗೌಡ, ಕುಳ್ಳೇಗೌಡ, ಬಿಳಿಗೌಡ ಎಂದು ಇಟ್ಟುಕೊಳ್ಳಲು ಆಗುತ್ತದಾ ಎಂದು ಪ್ರಶ್ನಿಸಿದರು.

ನಾನು ಅವರನ್ನು ಪಕ್ಷಪಾತಿ ಎಂದು ಹೇಳುವುದಿಲ್ಲ, ಬಿಜೆಪಿ ಸರಕಾರದ ವಿರುದ್ಧ ಯಾವಾಗಲೂ ಮಾತನಾಡುತ್ತಲೇ ಇರುತ್ತಾರೆ, ತ್ರಿಭಾಷಾ ಸೂತ್ರ ಅಳವಡಿಸಿದ್ದು ಇಂದಿರಾ ಗಾಂಧಿ ಎಂದು ಗೊತ್ತಿದ್ದರೂ ಮೋದಿಯವರನ್ನೇ ಬೈಯುತ್ತಾರೆ. ಚಲಾವಣೆಯಲ್ಲಿ ಇಲ್ಲದಾಗ ಇಂತಹ ಹೋರಾಟ ಮಾಡುತ್ತಾರೆ ಎಂದರು.

ಪರ್ಷಿಯನ್ ಭಾಷೆ ಹೇರಿದ್ದ ಟಿಪ್ಪು ಸುಲ್ತಾನ್ ಜಯಂತಿ ಮಾಡಿದಾಗ ಮಾತನಾಡಲಿಲ್ಲ, ಮಂಗಳೂರು, ಬೆಂಗಳೂರು ಮತ್ತು ಬೆಳಗಾವಿ ಹೆಸರನ್ನು2008 ರಲ್ಲಿ ಯುಪಿಎ ಸರಕಾರ ಬದಲಾಯಿಸಲೇ ಇಲ್ಲ ಆಗ ಸುಶೀಲ್ ಕುಮಾರ್ ಶಿಂಧೆ ಗೃಹ ಸಚಿವರಾಗಿದ್ದರು. ಬೆಳಗಾವಿ ಹೆಸರನ್ನು ಬದಲಾಯಿಸಿ ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ಪರಿಣಾಮವಾಗುತ್ತದೆ ಎಂದು ಬದಲಾಯಿಸಲೇ ಇಲ್ಲ ಅದನ್ನು 2014  ರಲ್ಲಿ ಮೋದಿ ನೇತೃತ್ವದ ಸರಕಾರ ಬಂದ ಮೇಲೆ ಬದಲಾಯಿಸಿ ಅನುಮತಿ ನೀಡಿದ್ದು ರಾಜನಾಥ್ ಸಿಂಗ್. ನಮ್ಮ ಸರಕಾರ ಎಂದೆಂದಿಗೂ ಕನ್ನಡದ ಪರ ಎಂದರು.

Advertisement

ಜೈ ಭಾರತ ಜನನಿ ಯ ತನುಜಾತೆ ಎಂದು ಕುವೆಂಪು ಅವರೇ ಬರೆದಿದ್ದಾರೆ. ಕನ್ನಡಾಂಬೆಯೂ ಭಾರತ ಮಾತೆಯ ಪುತ್ರಿ. ನಾವೆಲ್ಲರೂ ಕೂಡಿ ಬಾಳುವ ಇಲ್ಲಿ ರಾಜಕಾರಣ ಬೇಡ. ನಿಮ್ಮ ಪಕ್ಷ ಹಿಂದೆ ಚುನಾವಣೆಗೆ ಸ್ಪರ್ಧಿಸಿತ್ತು. ಚುನಾವಣಾ ಆಯೋಗ ಹಣವನ್ನು ವಶ ಪಡಿಸಿಕೊಂಡಿದ್ದು ನೆನಪಿದೆ ಎಂದು ಟಾಂಗ್ ನೀಡಿದರು.

ಸಂಸ್ಕೃತವನ್ನು ಕನ್ನಡದಿಂದ ಪ್ರತ್ಯೇಕ ಮಾಡುವ ಯತ್ನ ಬೇಡ. ಸಂಸ್ಕೃತದಲ್ಲಿ ನಮ್ಮ ಆಚರಣೆ, ವಿಚಾರ, ನಂಬಿಕೆ, ವಿಧಿ,ವಿಧಾನ ಮದುವೆ,ಮುಂಜಿ, ತಿಥಿ, ಅಂತ್ಯ ಸಂಸ್ಕಾರ ಎಲ್ಲದರಲ್ಲೂ ಬರುವ ಶ್ಲೋಕಗಳಲ್ಲಿ ಸಂಸ್ಕೃತ ಇದೆ. ಸೌಹಾರ್ಧಯುತವಾಗಿರುವ ವಾತಾವರಣ ಕದಡುವ ಪ್ರಯತ್ನ ಬೇಡ ಎಂದರು.

ಟ್ವಿಟರ್ ಅಭಿಯಾನ ನಡೆಸುತ್ತಿರುವ ಕರವೇ ನಾರಾಯಣಗೌಡ ಅವರು, ರಾಜ್ಯದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಿಲ್ಲ. ಕನ್ನಡಿಗರ ಮೇಲೆ ಪರನುಡಿಯನ್ನು ಹೇರುವ ಇಂಥ ಯತ್ನವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸುವುದಿಲ್ಲ. ವಿಶ್ವವಿದ್ಯಾಲಯ ಆರಂಭಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next