Advertisement

ಗದ್ದಲದಲ್ಲೇ ಮುಕ್ತಾಯ: ಸಂಸತ್‌ನ ಉಭಯ ಸದನಗಳ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

01:27 AM Apr 07, 2023 | Team Udayavani |

ಹೊಸದಿಲ್ಲಿ: ಸಂಸತ್‌ನ ಬಜೆಟ್‌ ಅಧಿವೇಶನದ ದ್ವಿತೀಯಾರ್ಧವು ಗದ್ದಲದಲ್ಲೇ ಕೊನೆಗೊಂಡಿದೆ. ಸತತ 4 ವಾರಗಳಿಂದಲೂ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳು ನಡೆಸಿದ ಧರಣಿ, ಪ್ರತಿಭಟನೆ, ಕೋಲಾಹಲದಿಂದಾಗಿ ಕಲಾಪಗಳು ಕೊಚ್ಚಿಹೋದವು. ಅಧಿವೇಶನದ ಕೊನೆಯ ದಿನವಾದ ಗುರುವಾರವೂ ಲೋಕಸಭೆಯಲ್ಲಿ ಕಲಾಪ ಆರಂಭವಾದ ಕೇವಲ ಆರೇ ನಿಮಿಷಗಳಲ್ಲಿ ಸದನ ಮುಂದೂಡಲ್ಪಟ್ಟಿತು. ರಾಜ್ಯಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ.
ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ತನಿಖೆ(ಜೆಪಿಸಿ)ಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್‌ ಸಹಿತ ವಿಪಕ್ಷಗಳು ಗದ್ದಲವೆಬ್ಬಿಸಿದರೆ, ಪ್ರಜಾಪ್ರಭುತ್ವದ ಕುರಿತು ಲಂಡನ್‌ನಲ್ಲಿ ನೀಡಿದ್ದ ಹೇಳಿಕೆಗೆ ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದು ಬಿಜೆಪಿ ಪ್ರತಿಭಟನೆ ನಡೆಸುತ್ತಾ ಬಂದಿದೆ. ಹೀಗಾಗಿ 4 ವಾರಗಳ ಅಧಿವೇಶನವು ಸಮರ್ಪಕ ಉತ್ಪಾದಕತೆಯೇ ಇಲ್ಲದೆ ಮುಗಿದಿದೆ.
ಅಧಿವೇಶನದ ಕೊನೆಯ ದಿನವಾದ ಗುರುವಾರ ಸಂಸದರನ್ನು ಉದ್ದೇಶಿಸಿ ಸಮಾರೋಪ ಭಾಷಣ ಮಾಡಿದ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, “ನೀವೆಲ್ಲರೂ ಈ ಸದನದ ಘನತೆಗೆ ಚ್ಯುತಿ ತಂದಿದ್ದೀರಿ. ಸಂಸದೀಯ ವ್ಯವಸ್ಥೆ ಮತ್ತು ದೇಶಕ್ಕೆ ಇಂಥ ವರ್ತನೆ ತಕ್ಕುದಲ್ಲ. ವ್ಯವಸ್ಥಿತವಾಗಿ ಕಲಾಪವನ್ನು ಹಾಳುಮಾಡುವುದು ಸರಿಯಲ್ಲ’ ಎಂದರು. ಆದರೆ ಸ್ಪೀಕರ್‌ ಮಾತಿನ ನಡುವೆಯೂ ಗದ್ದಲ ಮುಂದುವರಿದ ಕಾರಣ, 6 ನಿಮಿಷಗಳಲ್ಲೇ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಸಚಿವ ರಾಜನಾಥ್‌ ಸಿಂಗ್‌ ಸಹಿತ ಹಲವು ಸಚಿವರು ಸದನದಲ್ಲಿ ಉಪಸ್ಥಿತರಿದ್ದರು. ಪಕ್ಷದ ಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಬಿಜೆಪಿಯ ಬಹುತೇಕ ನಾಯಕರು ಕೇಸರಿ ಶಾಲು ಧರಿಸಿಕೊಂಡೇ ಸದನಕ್ಕೆ ಆಗಮಿಸಿದ್ದರು. ಪ್ರಧಾನಿ ಮೋದಿ ಅವರು ಪ್ರವೇಶಿಸುತ್ತಿದ್ದಂತೆ “ಜೈ ಶ್ರೀರಾಮ್‌’ ಎಂಬ ಘೋಷಣೆಗಳನ್ನು ಕೂಗಲಾಯಿತು.
ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಸ್ಥೆ ನೀಡಿದ ವರದಿಯ ಪ್ರಕಾರ, ಲೋಕಸಭೆ ನಿಗದಿಯಂತೆ 133.6 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಿತ್ತು. ಆದರೆ ಕೇವಲ 45 ಗಂಟೆಗಳ ಕಾಲ ಮಾತ್ರ ಕಲಾಪ ನಡೆದಿದೆ. ಇನ್ನು ರಾಜ್ಯಸಭೆಯಲ್ಲಿ 130 ಗಂಟೆಗಳ ಬದಲಾಗಿ ಕೇವಲ 31 ಗಂಟೆಗಳ ಕಾಲ ಕಲಾಪ ನಡೆದಿದೆ.

Advertisement

50 ಲಕ್ಷ ಕೋಟಿಯ ಬಜೆಟ್‌ಗೆ 12 ನಿಮಿಷಗಳಲ್ಲಿ ಅಂಗೀಕಾರ
ಪ್ರಜಾಸತ್ತಾತ್ಮಕ ತತ್ತÌಗಳ ವಿಚಾರದಲ್ಲಿ ಪ್ರಧಾನಿ ಮೋದಿಯವರು ನುಡಿದಂತೆ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅದಾನಿ ಪ್ರಕರಣವನ್ನು ಜೆಪಿಸಿ ತನಿಖೆಗೆ ಒಪ್ಪಿಸಬೇಕೆಂಬ ವಿಪಕ್ಷಗಳ ಕೋರಿಕೆಯಿಂದ ಜನರ ಗಮನ ಬೇರೆಡೆ ಸೆಳೆಯಲೆಂದೇ ಸದನಗಳಲ್ಲಿ ಗದ್ದಲವೆಬ್ಬಿಸಿದರು ಎಂದು ಕಿಡಿಕಾರಿದ್ದಾರೆ. ದಿಲ್ಲಿಯ ಸಂಸತ್‌ ಭವನದಿಂದ ವಿಜಯ್‌ ಚೌಕ್‌ವರೆಗೆ ಗುರುವಾರ ವಿಪಕ್ಷಗಳು ನಡೆಸಿದ “ತಿರಂಗಾ ಯಾತ್ರೆ’ಯ ಬಳಿಕ ಕಾನ್‌ಸ್ಟಿಟ್ಯೂಶನ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಬರೋಬ್ಬರಿ 50 ಲಕ್ಷ ಕೋಟಿ ರೂ.ಗಳ ಬಜೆಟ್‌ಗೆ ಸರಕಾರ ಕೇವಲ 12 ನಿಮಿಷಗಳಲ್ಲಿ ಅಂಗೀಕಾರ ಪಡೆಯಿತು. ಕಲಾಪದಲ್ಲಿ ನಿರಂತರವಾಗಿ ಗದ್ದಲ ಉಂಟುಮಾಡಿದ್ದೇ ಬಿಜೆಪಿ. ನಾವು ಯಾವುದೇ ಬೇಡಿಕೆ ಇಟ್ಟಾಗಲೂ, ನಮಗೆ ಮಾತನಾಡಲು ಅವಕಾಶ ನಿರಾಕರಿಸಲಾಯಿತು. ನನ್ನ 52 ವರ್ಷಗಳ ರಾಜಕೀಯ ಜೀವನದಲ್ಲಿ ಇಂಥದ್ದನ್ನು ನಾವು ಮೊದಲ ಬಾರಿ ನೋಡಿದ್ದು. ಹಿಂದೆಂದೂ ಹೀಗೆ ನಡೆದಿರಲಿಲ್ಲ. ಬಜೆಟ್‌ ಅಧಿವೇಶನ ಕೊಚ್ಚಿಹೋಗಬೇಕು ಎಂಬುದೇ ಸರಕಾರದ ಉದ್ದೇಶವಾಗಿತ್ತು. ಇದನ್ನು ನಾವು ಖಂಡಿಸುತ್ತೇವೆ ಎಂದೂ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next