Advertisement

ಸನ್ನತಿ ಬ್ಯಾರೇಜ್‌ ಗೇಟ್‌ ತೆರೆದರೆ ಜಲ ಸಂಕಷ್ಟ

09:44 AM Apr 09, 2022 | Team Udayavani |

ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಒಟ್ಟು 23 ವಾರ್ಡ್‌ಗಳ ಸುಮಾರು 50 ಸಾವಿರ ಜನತೆಯ ದಾಹ ತಣಿಸುವ ಕುಂದನೂರು ಭೀಮಾ ನದಿಯಲ್ಲೀಗ ಸನ್ನತಿ ಬ್ಯಾರೇಜ್‌ನ ಹಿನ್ನೀರು ಸಂಗ್ರಹವಾಗಿದ್ದು, ಬ್ಯಾರೇಜ್‌ ಬಾಗಿಲು ತೆರೆದು ನೀರು ಹೊರ ಬಿಡುವ ಪ್ರಸಂಗ ಕಲಬುರಗಿ-ಯಾದಗಿರಿ ಜಿಲ್ಲಾಡಳಿತಕ್ಕೆ ಎದುರಾದರೆ ವಾಡಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

Advertisement

ಬೇಸಿಗೆ ಆರಂಭವಾಗಿ ತಿಂಗಳು ಕಳೆದರೂ ಪುರಸಭೆ ಚುನಾಯಿತ ಜನಪ್ರತಿನಿಧಿಗಳು ಕುಡಿಯುವ ನೀರಿನ ಸಂಗ್ರಹ ಪ್ರಮಾಣವಾಗಲಿ ಅಥವಾ ನಿರ್ವಹಣೆ ಕುರಿತಾಗಲಿ ಪೂರ್ವಭಾವಿ ಸಭೆ ನಡೆಸಿಲ್ಲ. ಸನ್ನತಿ ಬ್ಯಾರೇಜ್‌ ಹಿನ್ನೀರು ಕುಂದನೂರು ವರೆಗೂ ವ್ಯಾಪಿಸಿದ್ದು, ಏಪ್ರಿಲ್‌ ಮತ್ತು ಮೇ ತಿಂಗಳಿಗಾಗುವಷ್ಟು ಜಲ ಶೇಖರಣೆಯಾಗಿದೆ. ಸನ್ನತಿ ಬ್ಯಾರೇಜ್‌ ನೀರನ್ನೇ ನಂಬಿಕೊಂಡಿರುವ ಯಾದಗಿರಿ ಜಿಲ್ಲೆಗೆ ಕುಡಿಯುವ ನೀರಿನ ಕೊರತೆಯುಂಟಾದರೆ, ನೀರು ಹರಿದು ಹಿನ್ನೀರು ಖಾಲಿಯಾಗುವ ಆತಂಕವಿದೆ.

ನದಿಯಲ್ಲಿ ರಿಂಗ್‌ ಬಾಂಡ್‌ ನಿರ್ಮಿಸಿ ಹಿನ್ನೀರು ನೆಲೆ ನಿಲ್ಲಿಸಿಕೊಳ್ಳಲು ಪುರಸಭೆ ಆಡಳಿತ ಯಾವುದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸದಿರುವುದು ಬೇಜವಾಬ್ದಾರಿಯ ಸಂಕೇತವಾಗಿದೆ.

ಪಟ್ಟಣದಲ್ಲಿ ಲಕ್ಷಾಂತರ ಲೀಟರ್‌ ನೀರು ಸಂಗ್ರಹಿಸುವ ಐದು ಓವರ್‌ಹೆಡ್‌ ಟ್ಯಾಂಕ್‌ಗಳಿವೆ. ಪ್ರತಿ ಬಡಾವಣೆಗೂ ನೀರು ಸರಬರಾಜು ಮಾಡುತ್ತಿರುವ ಪುರಸಭೆ ಅಧಿಕಾರಿಗಳು, ನಿಗದಿತ ಸಮಯ ಅನುಸರಿಸದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.

ನದಿಯಲ್ಲಿ ನೀರಿದ್ದರೂ ಬಡಾವಣೆಯ ನಲ್ಲಿಗಳಿಗೆ ನಾಲ್ಕಾರು ದಿನಕ್ಕೊಮ್ಮೆ ನೀರು ಬರುತ್ತಿದೆ. ಯಾವ ವಾರ್ಡ್‍ಗೆ ಯಾವ ದಿನ ಮತ್ತು ಯಾವ ಸಮಯದಲ್ಲಿ ನಳಕ್ಕೆ ನೀರು ಬರುತ್ತದೆ ಎಂದು ಯಾವ ಬಡಾವಣೆ ಜನರೂ ಹೇಳುವಂತಿಲ್ಲ. ಕುಡಿಯುವ ನೀರು ಸರಬರಾಜು ವಿಷಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯ ಪಾಲನೆಯನ್ನೇ ಮಾಡುತ್ತಿಲ್ಲ. ನೀರು ಸರಬರಾಜಿನಲ್ಲಿ ಸಮಸ್ಯೆಯಾದರೆ ಯಾರಿಗೆ ಕೇಳಬೇಕು? ಯಾವ ಮೊಬೈಲ್‌ ಸಂಖ್ಯೆಗೆ ಕರೆ ಮಾಡಬೇಕು ಎಂಬುದೇ ತಿಳಿಯುವುದಿಲ್ಲ.

Advertisement

ಪೈಪ್‌ಗಳು ಒಡೆದು ಮೂರ್‍ನಾಲ್ಕು ದಿನಗಳಾಗುವಂತಿದ್ದರೆ ಟ್ಯಾಂಕರ್‌ ನೀರು ಪೂರೈಕೆಗೂ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಕೊಡಗಳನ್ನು ಹಿಡಿದು ನೀರು ಹುಡುಕುತ್ತೇವೆ ಎಂದು ಸ್ಥಳೀಯರು ದೂರುತ್ತಾರೆ. ಬೇಸಿಗೆ ದಿನಗಳಲ್ಲಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಬೇಕು. ಕೆಟ್ಟುನಿಂತ ಬೋರ್‌ವೆಲ್‌ಗ‌ಳ ಮೋಟರ್‌ ದುರಸ್ತಿಗೆ ಆದ್ಯತೆ ನೀಡಬೇಕು. ನಿರ್ಲಕ್ಷ್ಯ ಮುಂದುವರಿದರೆ ನೀರಿನ ಹಾಹಾಕಾರ ಭುಗಿಲೇಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಭೀಮಾ ನದಿಯಲ್ಲಿ ಸಾಕಷ್ಟು ನೀರಿದೆ ಎಂದು ಪುರಸಭೆಯ ನೀರು ಸರಬರಾಜು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನದಿಯಲ್ಲಿ ರಿಂಗ್‌ಬಾಂಡ್‌ ನಿರ್ಮಿಸಿ ನೀರು ಶೇಖರಣೆಗೆ ಕ್ರಮಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ತಿಳಿಸಿದ್ದೇನೆ. ಈ ವರ್ಷ ಕಾಗಿಣಾ ನದಿಯ ಎಸಿಸಿ ಜಾಕ್‌ವೆಲ್‌ ಸ್ಥಳದಿಂದ ಪುರಸಭೆಯ ಭೀಮಾನದಿ ಪೈಪ್‌ಗೆ ಹೊಸದಾಗಿ ಪೈಪ್‌ಲೈನ್‌ ಜೋಡಣೆ ಕಾರ್ಯ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಕೆಲಸ ಮುಗಿಯಲಿದೆ. ಯಾವುದೇ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಕಾಗಿಣಾ ನದಿಯಿಂದಲೂ ನೀರು ಪಡೆಯುವ ಶಾಸ್ವತ ಪರಿಹಾರ ಒದಗಿಸುತ್ತಿದ್ದೇವೆ. ಇದಕ್ಕೆ ಶಾಸಕ ಪ್ರಿಯಾಂಕ್‌ ಖರ್ಗೆ 50 ಲಕ್ಷ ರೂ. ಅನುದಾನ ನೀಡಿದ್ದಾರೆ. ನೀರಿನ ತೊಂದರೆಯಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಈ ಕುರಿತು ಬಡಾವಣೆಗಳ ಜನರಿಗೆ ಚಿಂತೆ ಬೇಡ. -ದೇವಿಂದ್ರ ಕರದಳ್ಳಿ, ಉಪಾಧ್ಯಕ್ಷ, ಪುರಸಭೆ

ಬೇಸಿಗೆ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿಧಾನವಾಗಿ ಕಾಡುತ್ತಿದೆ. ಬಡಾವಣೆಗಳಲ್ಲಿರುವ ಬೋರ್‌ವೆಲ್‌ಗ‌ಳ ಅಂತರ್ಜಲ ಬತ್ತಿವೆ. ಕೆಲವೆಡೆ ಯಂತ್ರಗಳ ದುರಸ್ತಿಯಾಗಿಲ್ಲ. ಯಾವ ಬಡಾವಣೆಗೆ ಎಷ್ಟು ದಿನಕ್ಕೊಮ್ಮೆ ಮತ್ತು ಯಾವ ಗಳಿಗೆಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎನ್ನುವ ಕುರಿತು ಜನರಿಗೆ ಮಾಹಿತಿಯಿಲ್ಲ. ನೀರು ಪೂರೈಕೆಗೆ ಸಮಯ ಪಾಲನೆ ಮಾಡುತ್ತಿಲ್ಲ. ಶಾಸಕ ಪ್ರಿಯಾಂಕ್‌ ಖರ್ಗೆ ಕೋಟಿಗಟ್ಟಲೇ ಅನುದಾನ ತಂದಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿರುತ್ತಾರೆ. ಆದರೆ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. -ವಿಠ್ಠಲ ರಾಠೊಡ, ತಾಲೂಕು ಉಪಾಧ್ಯಕ್ಷ, ಆರ್‌ಕೆಎಸ್‌ ರೈತ ಸಂಘ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next