Advertisement

ಶಂಕ್ರಪ್ಪನ ಕುಟುಂಬಕ್ಕೆ ಪರಿಹಾರ ಕೊಡಿ

01:29 PM Apr 12, 2017 | Team Udayavani |

ದಾವಣಗೆರೆ: ಲೇಬರ್‌ ಕಾಲೋನಿಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಏ. 8 ರಂದು ರಾತ್ರಿ ಬಿಡಾಡಿ ದನಗಳ ತಿವಿತದಿಂದ ಸಾವನ್ನಪ್ಪಿದ ಶಂಕರಪ್ಪ ಅವರ ಕುಟುಂಬಕ್ಕೆ ಮಹಾನಗರ ಪಾಲಿಕೆ ಸೂಕ್ತ ಪರಿಹಾರ ಕೊಡಬೇಕು  ಎಂದು ನಗರಪಾಲಿಕೆ ಬಿಜೆಪಿ ಸದಸ್ಯ ಡಿ.ಕೆ. ಕುಮಾರ್‌ ಒತ್ತಾಯಿಸಿದ್ದಾರೆ. 

Advertisement

ಟೈಲರಿಂಗ್‌ ಮಾಡುತ್ತಿದ್ದ ಶಂಕರಪ್ಪರ ನಿಧನದಿಂದಾಗಿ ಕುಟುಂಬ ಸಂಕಷ್ಟದಲ್ಲಿದೆ. ಸಂಬಂಧಿತರು ಗಮನಹರಿಸಿ, ಸೂಕ್ತ ಪರಿಹಾರ ನೀಡಬೇಕು. ಬೀಡಾಡಿ ದನವೊಂದಕ್ಕೆ 10 ಸಾವಿರ ದಂಡ ವಿಧಿಸುವುದು, ಸಮನ್ಸ್‌ ಜಾರಿ ಒಳಗೊಂಡಂತೆ ವಿವಿಧ ವಿಧಾನಗಳ ಮೂಲಕ ಬೀಡಾಡಿ ದನಗಳ ನಿಯಂತ್ರಣದ ಕ್ರಮ ತೆಗೆದುಕೊಳ್ಳಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. 

ಬೀಡಾಡಿ ದನಗಳ ತಿವಿತಕ್ಕೆ ಒಳಗಾಗಿ ಶಂಕರಪ್ಪ ಸಾವನ್ನಪ್ಪಿದ ವಿಷಯವನ್ನು ದೂರವಾಣಿ ಮೂಲಕ ಮೇಯರ್‌ ಗಮನಕ್ಕೆ ತರಲು ಯತ್ನಿಸಿದಾಗ ಅವರ ಪತಿ ಫೋನ್‌ ಸೀÌಕರಿಸಿದರು. ಎಲ್ಲಾ ವಿಚಾರ ಕೇಳಿದ ನಂತರ ಇನ್ನೊಬ್ಬ ಸದಸ್ಯ ಶಿವನಹಳ್ಳಿ ರಮೇಶ್‌ಗೆ ವಿಷಯ ತಿಳಿಸುವಂತೆ ಹೇಳಿದರು. ಬೀಡಾಡಿ ದನಗಳ ತಿವಿತದಿಂದಲೇ ಶಂಕರಪ್ಪ ಮೃತಪಟ್ಟರೂ ಈವರೆಗೆ  ಯಾವುದೇ ಅಧಿಕಾರಿ ಭೇಟಿ ನೀಡಿ ಏನಾಗಿದೆ ಎಂದು ಕೇಳಿಲ್ಲ ಎಂದು ದೂರಿದರು. 

ಅದೇ ಬಡವ ಶಂಕರಪ್ಪನ ಬದಲಿಗೆ ಶ್ರೀಮಂತರಿಗೆ ಈ ರೀತಿ ಆಗಿದ್ದರೆ ಅಧಿಕಾರಿಗಳು, ಜನಪ್ರತಿನಿಧಿಗಳು ದಿನವಿಡೀ ಅಲೆಯುತ್ತಿದ್ದರು. ಕಾರು ಇಲ್ಲದಿದ್ದರೆ ಆಟೋದಲ್ಲಿ ಹೋಗಿ, ಬರುತ್ತಿದ್ದರು. ನಗರಪಾಲಿಕೆಯಲ್ಲಿ ಸಮಸ್ಯೆಗಳ ಬಗ್ಗೆ ಯಾರ ಬಳಿ ಹೇಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಯಾರು ಸಹ ಸ್ಪಂದಿಸುವುದೇ ಇಲ್ಲ.

ಜನರು ಹೇಳುವಂತೆ ನಗರಪಾಲಿಕೆ ನರಕಪಾಲಿಕೆ ಅನ್ನುವಂತಾಗಿದೆ. ಶಂಕರಪ್ಪನವರ ಕುಟುಂಬಕ್ಕೆ  ಪರಿಹಾರ ಕೋರಿ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಂದಿ, ನಾಯಿಗಳ ಕಾಟವೂ ವಿಪರೀತವಾಗಿದೆ. ಹಂದಿ ನಿರ್ಮೂಲನೆ ಬಗ್ಗೆ ಹೇಳುತ್ತಾರೆಯೇ ಹೊರತು ಹಂದಿ ನಿರ್ಮೂಲನೆ ಆಗಿಲ್ಲ. ಹಂದಿಗಳ ನಿರ್ಮೂಲನೆ ಮಾಡಬೇಕು.

Advertisement

ಸೂಕ್ತ ಕಡೆ ವರಹಾಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಎಚ್‌.ಸಿ. ಜಯಮ್ಮ ಮಾತನಾಡಿ, ಮಹಾನಗರ ಪಾಲಿಕೆ ಒಂದು  ವಾರದಲ್ಲಿ ಬೀಡಾಡಿ ದನಗಳನ್ನು ಹಿಡಿದು, ಗೋಶಾಲೆಯಲ್ಲಿ ಬಿಡಬೇಕು. ಬೀಡಾಡಿ ದನಗಳ ಮಾಲಿಕರಿಗೆ ಸಮನ್ಸ್‌ ಜಾರಿ ಮಾಡಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆದಲ್ಲಿ ಸಂಬಂಧಿತ ಮಾಲಿಕರನ್ನೇ ಸಂಪೂರ್ಣ ಹೊಣೆಗಾರರನ್ನಾಗಿ ಮಾಡಬೇಕು.

ಬೀಡಾಡಿ ದನಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್‌, ಶಾಂತಕುಮಾರ್‌ ಸೋಗಿ, ಟಿಂಕರ್‌ ಮಂಜಣ್ಣ, ಶ್ರೀಕಾಂತ್‌ ನೀಲಗುಂದ, ಗುರುರಾಜ್‌, ಭವಾನಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next