ದಾವಣಗೆರೆ: ಅದು ಜೀವನದಲ್ಲಿ ನಿಜಕ್ಕೂ ಅತ್ಯಂತ ಕೆಟ್ಟ ದುರಂತ. ಯಾವತ್ತೂ ಸಂಕ್ರಾಂತಿ…ಹಬ್ಬವನ್ನೇ ನೆನೆಸಿಕೊಳ್ಳುವುದಕ್ಕೂ ಕಷ್ಟ, ಭಯ ಆಗುತ್ತಿದೆ! ಇದು ಧಾರವಾಡದ ಹೊರ ವಲಯದ ಇಟ್ಟಿಗಟ್ಟಿ ಬಳಿ ಕಳೆದ ವರ್ಷ ಜ.14ರಂದು ಸಂಭವಿಸಿದ ಭೀಕರ ಆಪಘಾತದಲ್ಲಿ ಪವಾಡ ಸದೃಶ್ಯ ಎನ್ನುವಂತೆ ಪ್ರಾಣಾಪಾಯದಿಂದ ಪಾರಾಗಿರುವ ದಾವಣಗೆರೆಯ ಉಷಾರಾಣಿ ಡಾ| ರಮೇಶ್ ಅವರ ಮನದಾಳದ ನೋವಿನ ಮಾತು.
ನರ್ಸರಿಯಿಂದ ಹೈಸ್ಕೂಲ್, ಕಾಲೇಜು ಹಂತದವರೆಗೆ ಜೊತೆಯಾಗಿ ಅಭ್ಯಾಸ ಮಾಡಿದ್ದ ಗೆಳತಿಯರೊಡಗೂಡಿ ಕಳೆದ ಮಕರ ಸಂಕ್ರಾಂತಿಯಂದು ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದಾಗ ಇಟ್ಟಿಗಟ್ಟಿ ಬಳಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ 13 ಜನರು ಮೃತಪಟ್ಟಿದ್ದರು.
ಮಿನಿ ಬಸ್ ಹಿಂಬದಿಯಲ್ಲಿ ಕುಳಿತಿದ್ದಂತಹ ಉಷಾರಾಣಿ ಇತರೆ ಮೂವರು ಗಾಯಾಳುಗಳಾಗಿದ್ದರು. ನಾವೆಲ್ಲರೂ ದಾವಣಗೆರೆಯ ಸೇಂಟ್‌ಪಾಲ್ಸ್ ಕಾನ್ವೆಂಟ್ ನ 1989ರ ಬ್ಯಾಚ್‌ನವರು. ನರ್ಸರಿಯಿಂದ ಜೊತೆಗೆ ಓದಿದ್ದವರು. ಮದುವೆ, ಕೆಲಸ.. ಅದು ಇದು ಅಂತ ಎಲ್ಲ ಫ್ರೆಂಡ್ಸ್ ಬಹಳ ಕಾಂಟ್ಯಾಕ್ಟ್‌ನಲ್ಲಿ ಇರಲಿಲ್ಲ. ಬರೀ ಲ್ಯಾಂಡ್‌ಲೈನ್ ನಲ್ಲಿ ಮಾತಾಡ್ತಿದ್ವಿ. 2009ರಲ್ಲಿ ಮೊಬೈಲ್ ಜಾಸ್ತಿ ಆದ ಮೇಲೆ ನಮ್ಮದೇ ಆದ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ವಿ. ಎರಡು ವರ್ಷಕ್ಕೊಮ್ಮೆ ಹಳೆಯ ವಿದ್ಯಾರ್ಥಿಗಳು ಸೇರಿಕೊಳ್ತಾ ಇದ್ವಿ. ಮೊದಲು ಮೈಸೂರಿನಲ್ಲಿ ಎಲ್ರೂ ಸೇರಿದ್ವಿ. ಅದಾದ ಮೇಲೆ ಬೆಂಗಳೂರು, ಆಮೇಲೆ ದಾವಣಗೆರೆಯಲ್ಲಿ ಸೇರಿದ್ವಿ. ಆದರೆ, ಎಲ್ಲೂ ಹೊರಗಡೆ ಹೋಗ್ತಾ ಇರಲಿಲ್ಲ. ಫಸ್ಟ್ ಟೈಮ್ ವೆಹಿಕಲ್ ಮಾಡ್ಕೊಂಡು ಹೊರಟಿದ್ವಿ. “ಫಸ್ಟ್ ಟೈಮ್‌ನೇ ಅನೇಕರಿಗೆ ಲಾಸ್ಟ್ ಟೈಮ್ ಆಯ್ತು’ ಎಂದು ತಮ್ಮ ಗೆಳೆತನ, ಅಪಘಾತದ ಬಗ್ಗೆ ತಿಳಿಸಿದರು.
ಎಲುನೂ ಗೋವಾಕ್ಕೆ ಟೂರ್ ಹೋಗ್ತಾ ಇದೀವಿ ಅಂದುಕೊಂಡಿದ್ದಾರೆ. ನಿಜವಾಗಿಯೂ ಟೂರ್‌ಗೆ ಹೋಗುತ್ತಾ ಇರಲಿಲ್ಲ. ಹಳೆಯ ವಿದ್ಯಾರ್ಥಿಗಳು ಆಲುಮ್ನಿಗೆ ಹೋಗುತ್ತಾ ಇದ್ವಿ. ಕೊರೊನಾ ಇರುವ ಕಾರಣಕ್ಕೆ ಔಟ್ ಸೀನ್… ಇಲ್ಲ ಎಂದೇ ಡಿಸೈಡ್ ಮಾಡಿದ್ವಿ. ರೆಸಾರ್ಟ್ ಬಿಟ್ಟು ಬೇರೆ ಹೊರಗೆ ಹೋಗೋ ಪ್ಲಾನೇ ಇರಲಿಲ್ಲ ಎಂದು ತಾವು ಗೋವಾಕ್ಕೆ ತೆರಳುತ್ತಿದ್ದರ ಬಗ್ಗೆ ಉಷಾರಾಣಿ ತಿಳಿಸಿದರು.
ದಾವಣಗೆರೆಯಿಂದ ಬೆಳಗ್ಗೆ 5.30 ಇಲ್ಲ 6 ಗಂಟೆಗೆ ಬಿಡಬೇಕು ಎಂದೇ ಡಿಸೈಡ್ ಆಗಿತ್ತು. ಆದರೆ, ಧಾರವಾಡ ಬೇರೆ ಕಡೆ ರೋಡ್ ರಿಪೇರಿ ನಡಿತೀದೆ. ಹಾಗಾಗಿ ಬೇಗ ಬಿಡೋಣ ಎಂದು ಗೋವಾಕ್ಕೆ ಹೋಗೋ 2-3 ದಿನಗಳ ಮುಂಚೆಯಷ್ಟೇ ಡಿಸೈಡ್ ಆಗಿತ್ತು. ವಾಟ್ಸಪ್‌ನಲ್ಲಿ ಎಲ್ಲರಿಗೂ ತಿಳಿಸಿದ್ದಿವಿ. ರೋಡ್ ರಿಪೇರಿ ಇಲ್ಲ ಅಂದಿದ್ರೆ ಬೆಳಗ್ಗೆ ದಾವಣಗೆರೆ ಬಿಡ್ತಾ ಇದ್ವಿ. ಹಂಗೆ ಬಿಟ್ಟಿದ್ರೆ ಬಹುಶಃ ಯಾರಿಗೂ ಏನೂ ಆಗುತ್ತಾ ಇರಲಿಲ್ಲ ಏನೋ. ಆದರೆ, ಆಗ ಬಾರದ್ದು ಆಗಿ ಹೋಯಿತು ಎಂದು ದುಃಖೀತರಾದರು. ಧಾರವಾಡದ ಹತ್ತಿರ ನಮ್ ಫ್ರೆಂಡ್ಸ್ ತೋಟದಲ್ಲಿ ತಿಂಡಿ ತಿಂದು, ಬೆಳಗಾವಿಯಲ್ಲಿ ಇನ್ನೊಬ್ಬ ಫ್ರೆಂಡ್ಸ್ ಕರೆದು ಕೊಂಡು ಗೋವಾಕ್ಕೆ ಹೋಗುವ ಪ್ಲಾನ್ ಇತ್ತು. ಹಾಗಾಗಿ ರಾತ್ರಿನೇ ದಾವಣಗೆರೆ ಬಿಟ್ಟಿದ್ವಿ. ನಾನು ಅವತ್ತು ಬೇಗ ಎದ್ದಿದ್ದರಿಂದ ಮಲಗಿದ್ದೆ. ಆ್ಯಕ್ಸಿಡೆಂಟ್ ಹೇಗಾಯಿತೋ ಗೊತ್ತಾಗಲಿಲ್ಲ. ಕಣ್ಣು ಬಿಟ್ಟು ನೋಡಿದಾಗ ನಾನು ಆಸ್ಪತ್ರೆಯಲ್ಲಿದ್ದೆ. ನಾನೇಕೆ ಇಲ್ಲಿಗೆ ಬಂದಿದ್ದೇನೆ. ಎಲ್ಲರೂ ಯಾಕೆ ಬಂದು ಮಾತನಾಡಿಸುತ್ತಾ ಇದ್ದಾರೆ… ಅನ್ನೋದೆ ಗೊತ್ತಾಗಲಿಲ್ಲ.
ಮಧ್ಯಾಹ್ನ ಬಹಳ ಹೊತ್ತಿನ ನಂತರ ಸ್ವಲ್ಪ ಎಚ್ಚರವಾಗಿತ್ತು. ಯಾರೂ ನನಗೆ ಆ್ಯಕ್ಸಿಡೆಂಟ್ ಆಗಿದ್ದು, ನಮ್ ಫ್ರೆಂಡ್ಸ್ ತೀರಿಕೊಂಡಿದ್ದು ಹೇಳಲೇ ಇಲ್ಲ. 15-20 ದಿನ ಆದ ಮೇಲೆ ಆ್ಯಕ್ಸಿಡೆಂಟ್ ಆಗಿದ್ದು ಮಾತ್ರ ಹೇಳಿದರು. ಫ್ರೆಂಡ್ಸ್ ಎಲ್ಲ ಸತ್ತಿದ್ದು ಎಷ್ಟೋ ದಿನಕ್ಕೆ ಗೊತ್ತಾಯಿತು ಎಂದು ಅಪಘಾತ ನಡೆದ ದಿನದ ಕರಾಳ ನೆನಪು ಸ್ಮರಿಸಿದರು. ನಾವು ಎಲ್ಲ ಫ್ರೆಂಡ್ಸ್‌ಗಳು ನಮ್ಮ ಮಕ್ಕಳನ್ನೂ ನಮ್ ಮಕ್ಕಳು ಸಹ ಫ್ರೆಂಡ್ಸ್ ಆಗಿ ಇರಲಿ ಕರೆದುಕೊಂಡು ಅಲುಮ್ನಿಗೆ ಹೋಗ್ತಾ ಇದ್ದೆವು. ದೇವರು ಆ ಮಕ್ಕಳ ಮುಖ ನೋಡಿಯಾದರೂ ನಮ್ ಫ್ರೆಂಡ್ಸ್‌ಗಳನ್ನ ಉಳಿಸಬೇಕಿತ್ತು.
ಆದರೆ, ಕೆಟ್ಟ ದುರಂತ ಆಗಿಯೇ ಹೋಗಿತ್ತು. ನಂಗಂತೂ ಸಂಕ್ರಾಂತಿ ಹಬ್ಟಾನಾ… ನೆನೆಸಿಕೊಳ್ಳೋಕೆ ಭಯ ಆಗ್ತಿದೆ… ಎಂದು ಹೃದಯಾಳದ ನೋವು ತೋಡಿಕೊಂಡರು. ಈಗ ಆಗಾಗ ನಮ್ ಫ್ರೆಂಡ್ಸ್ ಮಕ್ಕಳನ್ನ ಮಾತನಾಡಿಸಿಕೊಂಡು ಬರುತ್ತೇನೆ. ಅವರನ್ನ ನೋಡಿದರೆ ಎಲ್ಲ ಫ್ರೆಂಡ್ಸ್ ನೆನಪಿಗೆ ಬರುತ್ತಾರೆ. ದೇವರು ಆ ಮಕ್ಕಳ ಮುಖ ನೋಡಿಯಾದರೂ ನಮ್ ಫ್ರೆಂಡ್ಸ್‌ಗಳನ್ನ ಉಳಿಸಬೇಕಿತ್ತು ಎಂದು ಉಷಾರಾಣಿ ಗದ್ಗಿತರಾದರು.