ಪಣಂಬೂರು: ಪೌರಾಣಿಕ, ಪುರಾಣ ಕಥೆಗಳಲ್ಲಿ ಪ್ರಹ್ಲಾದ ಸಹಿತ ಮಕ್ಕಳ ಕಥೆಗಳು ಇರುವುದರಿಂದ ಕಥೆಗಳನ್ನು ಮಕ್ಕಳಿಗೆ ತಿಳಿಹೇಳುವುದು ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು. ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ಆಶ್ರಯದಲ್ಲಿ ಯಕ್ಷನಂದನ, ಪಿ.ವಿ. ಐತಾಳ ಇಂಗ್ಲಿಷ್ ಯಕ್ಷಗಾನ ಬಳಗ ವರ್ಷಂಪ್ರತಿ ಆಯೋಜಿಸುವ ಪಣಂಬೂರು ಸಂಕ್ರಾಂತಿ ಉತ್ಸವದ ಉದ್ಘಾಟಿಸಿ ಅವರು ಮಾತನಾಡಿದರು.
ಪಣಂಬೂರು ಯಕ್ಷಗಾನದ ಕೇಂದ್ರ. ಪಿ.ವಿ. ಐತಾಳ ಅವರು ಆಂಗ್ಲ ಭಾಷೆಯ ಮೂಲಕ ಯಕ್ಷಗಾನವನ್ನು ಆರಂಭಿಸುವ ಮೂಲಕ ಭಾಷಾತೀತ ಕಲೆಯನ್ನಾಗಿ ಬೆಳೆಸಿದರು.ಇದೀಗ ಪ್ರತೀ ವರ್ಷ ಸಂಕ್ರಾಂತಿ ಉತ್ಸವ ಆಚರಿಸುವ ಮೂಲಕ ಮಕ್ಕಳಲ್ಲಿ ಪುರಾಣ ಕಥೆಗಳು, ಸಾಂಪ್ರದಾಯಿಕ ಆಚರಣೆಗಳ ಮಹತ್ವವನ್ನು ಸ್ಪರ್ಧೆಗಳ ಮೂಲಕ ತಿಳಿ ಹೇಳುತ್ತಿರುವುದು ಶ್ಲಾಘನೀಯ ಎಂದರು.
ಯಕ್ಷ ನಂದನ ಇದರ ಪಿ. ಸಂತೋಷ್ ಐತಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿರು ಸುಪ್ತ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪಿ.ವಿ. ಐತಾಳರ ನೆನಪಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದೆ ಎಂದರು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್, ಕೆ. ಸದಾಶಿವ ಶೆಟ್ಟಿ, ಭೂಮಿಕಾ ಪ್ರಿಯದರ್ಶಿನಿ, ಸುಧಾಕರ ಕಾಮತ್, ಮಧುಕರ ಭಾಗವತ್ ಮತ್ತಿತರರು ಉಪಸ್ಥಿತರಿದ್ದರು. ಡಾ| ಸತ್ಯಮೂರ್ತಿ ಐತಾಳ್ ಅವರು
ಸ್ವಾಗತಿಸಿದರು. ಶಂಕರ ನಾರಾಯಣ ಮೈರ್ಪಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.