Advertisement

ಸಿಲಿಕಾನ್‌ ಸಿಟಿಯಲ್ಲಿ ಸಂಕ್ರಾಂತಿ ಸಂಭ್ರಮ

06:17 AM Jan 14, 2019 | |

ಜಗ ಬೆಳಗುವ ಸೂರ್ಯ ದಕ್ಷಿಣದಿಂದ ಉತ್ತರಾಯಣದತ್ತ ತನ್ನ ಪಥ ಬದಲಿಸುವ ಘಳಿಗೆಯನ್ನು ಭಕ್ತಿಭಾವ, ಸಡಗರ, ಸಂಭ್ರಮದಿಂದ “ಸಂಕ್ರಮಣ’ವೆಂದು ಆಚರಿಸಲಾಗುತ್ತದೆ. ಹೊಸ ವರ್ಷದಲ್ಲಿ ಒಳಿತಾಗಲಿ, ಒಳ್ಳೆಯ ಆಲೋಚನೆಗಳು ಬರಲಿ ಎಂದು “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು’ ಎಂಬ ನಾಣ್ಣುಡಿಯಂತೆ ಆಚರಿಸುವ ಹೊಸ ಕ್ಯಾಲೆಂಡರ್‌ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಗ್ರಾಮೀಣ ಸೊಗಡಿನ ಈ ಹಬ್ಬವನ್ನು ರಾಸುಗಳ ಕಿಚ್ಚು ಹಾಯಿಸುವ ಮೂಲಕ ಅದ್ಧೂರಿಯಾಗಿ ಆಚರಿಸಲು ರಾಜಧಾನಿ ಜನರೂ ಸಜ್ಜಾಗಿದ್ದಾರೆ.

Advertisement

ಹಬ್ಬದ ಸಂಭ್ರಮಕ್ಕೆ ನಗರ-ಹಳ್ಳಿಯೆಂಬ ಭೇದವಿಲ್ಲ. ಹಾಗೇ ಗ್ರಾಮೀಣ ಸೊಗಡಿನ ಸಂಕ್ರಾಂತಿ ಆಚರಿಸಲು ಬೆಂಗಳೂರಲ್ಲೂ ಸಂಕ್ರಾಂತಿ ಸಂತೆ, ಧಾನ್ಯಗಳ ರಾಶಿ ಪೂಜೆ, ಸಿರಿಧಾನ್ಯ ಮೇಳಗಳ ಜತೆಗೆ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳಿಗೆ ಭರದ ಸಿದ್ಧತೆ ನಡೆದಿದೆ. ಜತೆಗೆ ಸಂಕ್ರಾಂತಿ ಕಳೆ ಹೆಚ್ಚಿಸುವ ರಾಸುಗಳ ಕಿಚ್ಚು ಹಾಯಿಸುವ ಹಾಗೂ ರಾಸುಗಳ ವಿಶೇಷವಾಗಿ ಸಿಂಗರಿಸುವ ಸ್ಪರ್ಧೆ ಹಾಗೂ ಗ್ರಾಮೀಣ ಸೊಗಡಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗಿವೆ. ಆ ಮೂಲಕ ಐಟಿ ಸಿಟಿಯಲ್ಲೂ ಸೋಮವಾರ ಹಾಗೂ ಮಂಗಳವಾರ ಗ್ರಾಮೀಣ ಸೊಬಗು ಮೈದಳೆಯಲಿದೆ.

ಕಿಚ್ಚಿನ ಸಂಭ್ರಮ: ಮುಂದೆ ಆರೇಳು ಅಡಿ ಎತ್ತರಕ್ಕೆ ಉರಿಯುವ ಬೆಂಕಿ ಕಿಚ್ಚು, ಅದರ ಹಿಂದೆ ಹೆದರಿ ಎಳೆದಾಡುವ ರಾಸುಗಳು, ಕೋಲು ಹಿಡಿದು ಬೆದರಿಸುವ ಗೌಳಿ, ಅತ್ತಿತ್ತ ನೋಡಿ ಕೊನೆಗೆ ಕಿಚ್ಚು ಹಾಯ್ದು ಏದುಸಿರು ಬಿಡುತ್ತಾ ಮುನ್ನುಗ್ಗುವ ದನಗಳು. ತನ್ನ ರಾಸುಗಳು ಕಿಚ್ಚು ಹಾಯ್ದವು ಎಂಬ ಖುಷಿಯಲ್ಲಿ ಸಂಭ್ರಮಿಸುವ ಮಾಲೀಕ. ಇವೆಲ್ಲವನ್ನು ಕಣ್ತುಂಬಿಕೊಳ್ಳುವ ಘಳಿಗೆಗೆ ನಗರ ಸಿದ್ಧವಾಗಿದೆ. ಸಂಕ್ರಾಂತಿ ಎಳ್ಳುಬೆಲ್ಲದಂತೆಯೇ, ಕಿಚ್ಚಿನ ಹಬ್ಬವೂ ಹೌದು. ಮೈ ಕೊರೆವ ಚಳಿಯ ದಿನಗಳು ಮುಗಿಯಲಿವೆ ಎಂಬುದರ ಸಂಕೇತವೆಂಬಂತೆ ದನಗಳನ್ನು ಕಿಚ್ಚು ಹಾಯಿಸುವ ವಿಶಿಷ್ಟ ಆಚರಣೆ ಮಾಡಲಾಗುತ್ತದೆ.

ಗ್ರಾಮೀಣ ಭಾಗದಲ್ಲಿ ಬೆಳಗ್ಗೆ ಹೊಲಗದ್ದೆಯಲ್ಲಿ ರಾಶಿ ಪೂಜೆ ನಡೆದರೆ ಸಂಜೆ ರಾಸುಗಳ ಕಿಚ್ಚು ಹಾಯಿಸಲಾಗುತ್ತದೆ. ಇದೇ ಮಾದರಿಯಲ್ಲಿ ಸಿಲಿಕಾನ್‌ ಸಿಟಿಯಲ್ಲೂ ಸಂಕ್ರಾಂತಿಯಂದು ಬೆಳಗ್ಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಸಂಜೆ ವಿವಿಧ ಕಡೆಗಳಿಂದ ರಾಸುಗಳನ್ನು ಕರೆತಂದು ಕಿಚ್ಚು ಹಾಯಿಸಿ ಸಂಭ್ರಮಿಸಲಾಗುತ್ತದೆ. ಪ್ರಮುಖವಾಗಿ ರಾಜರಾಜೇಶ್ವರಿ ನಗರ, ಮತ್ತಿಕೆರೆ, ಯಶವಂತಪುರ, ಯಲಹಂಕ ಉಪನಗರ, ಪದ್ಮನಾಭನರಗಳಲ್ಲಿ ವಿವಿಧ ಸಂಸ್ಥೆಗಳು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಮುಂದಾಗಿವೆ.

ಮಂಗಳವಾರ ಸಂಜೆ ಕಿಚ್ಚು ಹಾಯಿಸುವ ಸ್ಪರ್ಧೆ: ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವು ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಸಂಕ್ರಾತಿ ಸಂತೆ ಎಂಬ ಮೂರು ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಗೋ ಪೂಜೆ, ಜಾನಪದ ಕಲಾ ತಂಡಗಳಿಂದ ಡೊಳ್ಳುಕುಣಿತ, ಪೂಜಾಕುಣಿತ, ಹುಲಿವೇಷ, ಕಂಸಾಳೆ, ವೀರಗಾಸೆ, ಜಾನಪದ ಕ್ರೀಡೆಗಳಾದ ಕಬ್ಬಡಿ, ಎತ್ತುಗಳ ಸಿಂಗಾರ ಸ್ಪರ್ಧೆ ಹಾಗೂ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಲಿದೆ. 

Advertisement

ಕಳೆದ 12 ವರ್ಷಗಳಿಂದ ಕಿಚ್ಚು ಹಾಯಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದು, ಸುತ್ತಮುತ್ತಲ ರೈತರು ತಮ್ಮ ಹಸುಗಳನ್ನು ತಂದು ಕಿಚ್ಚುಹಾಯಿಸಿಕೊಂಡು ಹೋಗುತ್ತಾರೆ. ಈ ಬಾರಿ ಮಂಗಳವಾರ (ಜ.15) ರಾತ್ರಿ 8 ಗಂಟೆಗೆ 30ಕ್ಕೂ ಹೆಚ್ಚು ಹೋರಿಗಳು ಕಿಚ್ಚಾಯಿಸುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಬಯಲು ರಂಗಮಂದಿರ ಬಳಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, 30 ಅಡಿ ಉದ್ದ ಹಾಗೂ 40 ಅಡಿ ಅಗಲದ ಜಾಗದಲ್ಲಿ ಹುಲ್ಲಿನ ಕಿಚ್ಚಿನ ವ್ಯವಸ್ಥೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಿಚ್ಚು ಹಾಯಿಸುವ ಕಾರ್ಯಕ್ರಮ ಇದಾಗಿದ್ದು, ಪ್ರತಿ ಬಾರಿ ಸಾವಿರಾರು ಮಂದಿ ಭಾಗವಹಿಸುತ್ತಾರೆ ಎಂದು ಆಯೋಜಕ ಚಂದ್ರಶೇಖರ್‌ ತಿಳಿಸಿದರು.

ಯಲಹಂಕ ಉಪನಗರದ 3ನೇ ಹಂತದ ವೀರ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ ಸಂಜೆ 7ರಿಂದ 9 ಗಂಟೆವರೆಗೆ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಲಿದೆ. ಕಳೆದ 30 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಪ್ರತಿ ವರ್ಷ ಸಾವಿರಾರು ಮಂದಿ ಭಾಗವಹಿಸುತ್ತಾರೆ. ಈ ಬಾರಿ 12 ಜೋಡಿ ರಾಸುಗಳು ಕಿಚ್ಚು ಹಾಯಲಿವೆ. ನಂತರ ಅವುಗಳಿಗೆ ವಿಶೇಷ ತಿಂಡಿ ತಿನಿಸು ನೀಡಲಾಗುವುದು ಎಂದು ಕಾರ್ಯಕ್ರಮ ವ್ಯವಸ್ಥಾಪಕ ಅಣ್ಣಪ್ಪ ಭಟ್ರಾ ತಿಳಿಸಿದರು.

ಕಾಟುಂರಾಯ ಹಬ್ಬ: ಹೊಸಕೆರೆಹಳ್ಳಿಯ ಸುತ್ತಮುತ್ತ ಸಂಕ್ರಾಂತಿಯನ್ನು ಕಾಟುಂರಾಯ ಹಬ್ಬವೆಂದು ಆಚರಿಸುತ್ತಾರೆ. ಇಲ್ಲಿನ ಬಸ್‌ ನಿಲ್ದಾಣದ ಬಳಿಯ ಮೈದಾನದಲ್ಲಿ ಕಾಟುಂರಾಯ ಮೂರ್ತಿ ಬಳಿ ಸ್ಥಳೀಯ ಸಂಘಗಳು ಹಲವು ವರ್ಷಗಳಿಂದ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಸಮೀಪದ ಬಸವಣ್ಣನ ದೇವಸ್ಥಾನದಿಂದ ಎತ್ತುಗಳನ್ನು ಕರೆತಂದು ಮೆರವಣಿಗೆ ಮಾಡಿ ನಂತರ ಕಿಚ್ಚು ಹಾಯಿಸಲಾಗುತ್ತದೆ.

ಎತ್ತನ್ನು ಹಿಡಿದು ಓಡುವ ಗೌಳಿ ಅಥವಾ ಮಾಲೀಕರೂ ಕಿಚ್ಚು ಹಾರುವುದು ಇಲ್ಲಿನ ವಿಶೇಷ ಎಂದು ಸ್ಥಳೀಯ ಸಂಘವೊಂದರ ಸದಸ್ಯ ರಮೇಶ್‌ ಮಾಹಿತಿ ನೀಡಿದರು. ಯಶವಂತಪುರದ ರೈಲು ನಿಲ್ದಾಣ ಪಕ್ಕದ ರಾಮಮಂದಿರ ಮೈದಾನದ ಬಳಿ ಹಳೇ ಊರಿನ ಜನ ಸಂಕ್ರಾಂತಿ ದಿನ ರಾಸುಗಳ ಕಿಚ್ಚು ಹಾಯಿಸುತ್ತಾರೆ. ಜತೆಗೆ ಬೆಂಗಳೂರಿನ ಹೊರ ಭಾಗಗಲ್ಲಿ ಈ ಆಚರಣೆ ಹೆಚ್ಚಾಗಿದ್ದು, ನಾಗವಾರ, “ನೈಸ್‌’ ರಸ್ತೆಯ ಸುತ್ತಮುತ್ತ ಹೆಚ್ಚಾಗಿ ನಡೆಯುತ್ತದೆ.

ವೈವಿಧ್ಯದ ಕಾರ್ಯಕ್ರಮ: ಪದ್ಮನಾಭ ನಗರದ ಕಾರ್ಮೆಲ್‌ ಶಾಲೆ ಮೈದಾನದಲ್ಲಿ ಸಂಕ್ರಾಂತಿ ಉತ್ಸವ ನಡೆಯುತ್ತಿದ್ದು, ಸೋಮವಾರ ಇಲ್ಲಿ ಖಾದ್ಯಮೇಳ, ಶ್ವಾನ ಪ್ರದರ್ಶನ, ಆಟೋಟ, ಮನರಂಜನೆಗೆ ಗ್ರಾಮೀಣ ಜಾನಪದ ಹಾಡು-ನೃತ್ಯ ಕಾರ್ಯಕ್ರಮ, ಮ್ಯಾಜಿಕ್‌ ಶೋ ನಡೆಯಲಿವೆ. ಸಂಜೆ 6 ಗಂಟೆ ನಂತರ ಹೋರಿಗಳ ಕಿಚ್ಚು ಹಾಯಿಸುವ ಕಾರ್ಯಕ್ರಮ ಕೂಡ ಇದೆ.

ಕಿಚ್ಚು ಹಾಯಿಸುವ ಹಿನ್ನೆಲೆ ಏನು?: ಹಳೇ ಮೈಸೂರು ಭಾಗದ ಹಳ್ಳಿಗಳಲ್ಲಿ ಕಣದ ಪೂಜೆಯಾಗದೆ, ರಾಸುಗಳು ಕಿಚ್ಚು ಹಾಯದೆ ಸಂಕ್ರಾಂತಿ ಹಬ್ಬವಿಲ್ಲ. ಸಂಕ್ರಾಂತಿ ಹೊತ್ತಿಗೆ ಹೊಲದಲ್ಲಿ ವಿವಿಧ ಬೆಳೆಗಳ ಕೋಯ್ಲು ನಂತರದ ಬಹುತೇಕ ಕೆಲಸ ಮುಗಿದಿರುತ್ತದೆ. ಇದರೊಂದಿಗೆ ರೈತಾಪಿ ಜನ ತಾವು ವರ್ಷ ಪೂರ್ತಿ ದುಡಿಸುವ ಜಾನುವಾರುಗಳಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡುತ್ತಾರೆ. ಅವುಗಳ ಹೊಟ್ಟೆ ತುಂಬಿಸುತ್ತಾರೆ. ಕಿಚ್ಚು ಹಾಯಿಸುವುದರಿಂದ ರಾಸುಗಳಲ್ಲಿ ಉಣ್ಣೆ ನಿಯಂತ್ರಣವಾಗುತ್ತದೆ.

ಅಲ್ಲದೇ ವರ್ಷವಿಡೀ ದುಡಿದ ರಾಸುಗಳನ್ನು ಸಂಕ್ರಾಂತಿಯಂದು ಸಿಂಗಾರ ಮಾಡುವ ರೈತರು ರಾಸುಗಳೊಂದಿಗೆ ಕಿಚ್ಚು ಹಾಯ್ದು ತಾವೂ ಬೆಚ್ಚಗಾಗುತ್ತಾನೆ. ನಂತರ ಕಿಚ್ಚುಹಾದು ಬಂದ ಜಾನುವಾರುಗಳನ್ನು ಮನೆಯ ಹೆಣ್ಣು ಮಕ್ಕಳು ಆರತಿ ಎತ್ತಿ ಸ್ವಾಗತಿಸುತ್ತಾರೆ. ನಂತರ ವಿಶೇಷ  ತಿಂಡಿಗಳನ್ನು ನೈವೇದ್ಯ ರೂಪದಲ್ಲಿ ಕೊಡುತ್ತಾರೆ. ರಾಸುಗಳು ನೈವೇದ್ಯ ಸ್ವೀಕರಿಸಿದ ನಂತರವೇ ಮನೆಯವರು ಊಟ ಮಾಡುವುದು ಸಂಪ್ರದಾಯ ಎಂದು ಯಲಹಂಕ ಉಪನಗರದ ಹಿರಿಯರೊಬ್ಬರು ಹೇಳುತ್ತಾರೆ.

ರಾಸುಗಳಿಗೆ ವಿಶೇಷ ಸಿಂಗಾರ: ಮನೆಯವರಿಗೆ ರಾಸುಗಳನ್ನು ಸಿಂಗಾರ ಮಾಡುವುದೇ ಖುಷಿ. ವರ್ಷ ಪೂರ್ತಿ ದುಡಿದ ದನಗಳ ಮೈ ತೊಳೆದು, ಅವುಗಳ ಕೊಂಬು ಹೆರೆದು, ಬಣ್ಣದ ನೀರನ್ನು ಕೊಂಬು, ಮೈಗೆಲ್ಲಾ ಬಳಿದು, ಕೊಂಬುಗಳನ್ನು ಬಲೂನು, ರಿಬ್ಬನ್‌ ಟೇಪ್‌ಗ್ಳಿಂದ ಅಲಂಕರಿಸಿ, ಬೆನ್ನ ಮೇಲೆ ಸಿಂಗಾರದ ಬಟ್ಟೆ ಹೊದಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಿಗೆ ಗಂಟೆ ಮಾಲೆ ಹಾಕಿ ದನಗಳನ್ನು ಸಿಂಗಾರ ಮಾಡುತ್ತಾರೆ. ಆನಂತರ ಅವುಗಳನ್ನು ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಕಿಚ್ಚು ಹಾಯಿಸುವ ಜಾಗವನ್ನು ಸುತ್ತಿಸುತ್ತಾರೆ. ಕೆಲವು ಭಾಗಗಳಲ್ಲಿ ಸಿಂಗಾರ ಸ್ಪರ್ಧೆ ನಡೆಯುತ್ತದೆ. ವಿಶಿಷ್ಟವಾಗಿ ಸಿಂಗಾರಗೊಂಡ ರಾಸುವಿಗೆ ಬಹುಮಾನ ಸಹ ನೀಡುವುದೂ ಇದೆ.

ಲಾಲ್‌ಬಾಗ್‌-ಕಬ್ಬನ್‌ ಉದ್ಯಾನದಲ್ಲಿ ಸಂಭ್ರಮ: ಸಂಕ್ರಾಂತಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಹಾಪ್‌ಕಾಮ್ಸ್‌ ವತಿಯಿಂದ ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್‌ಗಳಲ್ಲಿ ಸಂಕ್ರಾಂತಿ ಸಂತೆಯನ್ನು ಆಯೋಜಿಸಿದೆ. ಜ.15ರವರೆಗೆ ಮೇಳ ನಡೆಯಲಿದ್ದು, ಲಾಲ್‌ಬಾಗ್‌ನಲ್ಲಿ 15 ಮಳಿಗೆಗಳು ಹಾಗೂ ಕಬ್ಬನ್‌ಪಾರ್ಕ್‌ನಲ್ಲಿ 3 ಮಳಿಗೆಗಳನ್ನು ತೆರೆಯಲಾಗಿದೆ. ಕಬ್ಬು, ಗೆಣಸು, ಕಡ್ಲೆಕಾಯಿ, ಅವರೆಕಾಯಿ, ಸಿದ್ಧ ಮಿಶ್ರ ಎಳ್ಳು-ಬೆಲ್ಲ, ಸಾವಯವ ಬೆಲ್ಲ ಮತ್ತಿತರ ವಸ್ತುಗಳ ಮಾರಾಟ ಮೇಳವನ್ನು ಆಯೋಜಿಸಿದೆ.

ಗುಣಮಟ್ಟದ ಹಾಗೂ ತಾಜಾ ಪದಾರ್ಥಗಳನ್ನು ಹೊರಗಿನ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಣ್ಣು-ತರಕಾರಿಗಳ ದರವೂ ಮಾರುಕಟ್ಟೆ ದರಕ್ಕಿಂತ  ಕಡಿಮೆಯಿರುತ್ತವೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌. ಪ್ರಸಾದ್‌ ತಿಳಿಸಿದರು. ಜತೆಗೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಂಕ್ರಾಂತಿ ಸಂಭ್ರಮ ಕಳೆಗಟ್ಟಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಮಂಗಳವಾರ “ಸುಗ್ಗಿ- ಹುಗ್ಗಿ’ ಸಂಕ್ರಾಂತಿ ಕಾರ್ಯಕ್ರಮ ನಡೆಯುತ್ತಿದ್ದು, ಸಂಕ್ರಾಂತಿ ಹಬ್ಬದ ಆಚರಣೆ ಮಾದರಿ,

ಸಂಪ್ರದಾಯಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಬೆಳಗ್ಗೆ 11ರಿಂದ ಸಂಜೆ 7 ಗಂಟೆವರೆಗೂ ವಿವಿಧ ಜಿಲ್ಲೆಗಳ ಕಲಾತಂಡಗಳಿಂದ ಜಾನಪದ ಕಾರ್ಯಕ್ರಮಗಳು ನಡೆಯಲಿವೆ. ಲಾಲ್‌ಬಾಗ್‌ನ ಕೆ.ಎಚ್‌.ರಸ್ತೆ ಕಡೆಗಿನ ಪ್ರವೇಶ ದ್ವಾರದ ಬಳಿ ವಿವಿಧ ಬೆಳೆಗಳ ರಾಶಿ ಮಾಡಲಾಗಿರುತ್ತದೆ. ಎತ್ತಿನ ಗಾಡಿ ಸುತ್ತಾಟವಿರುತ್ತದೆ. ಹೀಗೆ ಒಟ್ಟಾರೆ ಗ್ರಾಮೀಣ ಸೊಗಡನ್ನು ಕಟ್ಟಿಕೊಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಂಕ್ರಾಂತಿಯ ಪೌರಾಣಿಕ ಹಿನ್ನೆಲೆ: ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡುತ್ತಾನೆ. ನಂತರ ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭಿಸುತ್ತಾನೆ. ಈ ರೀತಿ ಸೂರ್ಯ ತನ್ನ ಪಥ ಬದಲಿಸುವ ಘಳಿಗೆಯೇ ಸಂಕ್ರಮಣ ಕಾಲ. ಪುರಾಣದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಉತ್ತರಾಯಣ ಅತಿ ಶ್ರೇಷ್ಠ ಎಂದಿರುವ ಬಗ್ಗೆ ಭಗದ್ಗೀತೆಯಲ್ಲಿ ಉಲ್ಲೇಖವಿದೆ.

ಭೀಷ್ಮಾಚಾರ್ಯರು ಶರಪಂಜರದ ಮೇಲೆ ಮಲಗಿದ್ದರೂ ಕೂಡ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರಮಾಡಿಕೊಳ್ಳುತ್ತಾರೆ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಬ್ರಹ್ಮ ದೇವ ಸೃಷ್ಟಿಯನ್ನು ಆರಂಭಿಸಿದ್ದು, ಇಂದ್ರನಿಗೆ ಗೌತಮ ಋಷಿ ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮೀ ಅವತರಿಸಿದ್ದು ಉತ್ತರಾಯಣದಲ್ಲಿ ಎಂಬ ನಂಬಿಕೆ ಇದೆ.

ಪ್ರತೀತಿ: ಸಂಕ್ರಾಂತಿ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ಮಾತಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ. ಶನಿಗ್ರಹ ಎಂದೊಡನೆ ಸಹಜವಾಗಿ ಒಂದು ರೀತಿ ಭಯವಿರುವುದರಿಂದ ಎಳ್ಳನ್ನು ದಾನ ಪಡೆಯಲು ಜನರು ಇಚ್ಛಿಸುವುದಿಲ್ಲ. ಹೀಗಾಗಿ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗಷ್ಟೇ ಮಾರುಕಟ್ಟೆಗೆ ಬಂದಿರುತ್ತವೆ.

ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಒಳಿತಾಗಲಿದೆ ಎಂಬ ನಂಬಿಕೆಯಿಂದ ಎಳ್ಳು ಬೆಲ್ಲ ಬೀರುವ ಸಂಪ್ರದಾಯ ಶುರುವಾಯಿತು ಎಂದು ಹಿರಿಯರು ಹೇಳುತ್ತಾರೆ. ಮಳೆಗಾಲದಿಂದ ಚಳಿಗಾಲದವರೆಗೂ ಕೃಷಿ ಚಟುವಟಿಕೆಗಳು ನಿರಂತರವಾಗಿರುತ್ತವೆ. ಚಳಿಗಾಲ ಕಳೆದು ಬೇಸಿಗೆ ಸ್ವಲ್ಪ ಮಟ್ಟಿಗೆ ಶುರುವಾಗುವ ಸಮಯದಲ್ಲಿ ಕೃಷಿ ಚಟುವಟಿಕೆಗಳಿಗೆ ಕೊಂಚ ಮಟ್ಟಿಗೆ ವಿರಾಮವಿರುತ್ತದೆ. ಈ ಹೊತ್ತಿನಲ್ಲಿ ಊರಿನವರೆಲ್ಲ ಸೇರಿ ಸಂಭ್ರಮಿಸುವ ಹಬ್ಬವೇ ಸಂಕ್ರಾಂತಿ ಎಂಬ ಮಾತಿದೆ.

ದೇವಾಲಯಗಳಲ್ಲಿ ಸಂಕ್ರಾಂತಿ: ಸಂಕ್ರಾಂತಿ ಅಂಗವಾಗಿ ಗವಿಗಂಗಾಧರೇಶ್ವರ ದೇವಸ್ಥಾನ, ಮಲ್ಲೇಶ್ವರದ ಲಕ್ಷ್ಮೀನರಸಿಂಹ ದೇವಸ್ಥಾನ, ಬಸವನಗುಡಿ ದೊಡ್ಡಬಸವಣ್ಣ, ಕೆ.ಆರ್‌.ಮಾರುಕಟ್ಟೆಯ ಕೋಟೆ ವೆಂಕಟರಮಣ, ಹಲಸೂರಿನ ಸೋಮೇಶ್ವರ, ಯಶವಂತಪುರದ ಗಾಯತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳಿಗೆ ಸಿದ್ಧತೆ ನಡೆದಿದೆ.

ಸಂಕ್ರಾಂತಿ ಎಂದ ಕ್ಷಣ ಸಿಲಿಕಾನ್‌ ಸಿಟಿ ಮಂದಿಗೆ ನೆನಪಿಗೆ ಬರುವುದೇ ಗವಿಪುರ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಸ್ಥಾನ. ಈ ದೇವಾಲಯದಲ್ಲಿ ಸೂರ್ಯಾಸ್ತದ ವೇಳೆ ಸೂರ್ಯನ ರಶ್ಮಿ ನಂದಿಯ ಕೋಡುಗಳ ಮಧ್ಯ ಭಾಗದಿಂದ ಶಿವನ ಪಾದವನ್ನು ನೇರವಾಗಿ ಸ್ಪರ್ಶಿಸುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಜನತೆ ಕಾತರರಾಗಿದ್ದಾರೆ.

ದೇವಾಲಯಕ್ಕೆ ಸುಮಾರು 8-10 ಸಾವಿರ ಭಕ್ತರು ಭೇಟಿ ನೀಡುವ ಸಾಧ್ಯತೆ ಇದ್ದು, ಉತ್ಸವ ಸಮಿತಿ ಹಲವು ಸಿದ್ಧತೆಗಳನ್ನು ನಡೆಸಿದೆ. ಬೆಳಗ್ಗೆಯಿಂದಲೇ ಜನ ಸಾಲುಗಟ್ಟಿ ನಿಲ್ಲುವುದರಿಂದ ಅಲ್ಲಲ್ಲಿ ಪಾನಕ, ಮಜ್ಜಿಗೆ ವಿತರಣೆಗೆ ಕೆಲವು ಸಂಘಟನೆಗಳು ತಯಾರಿ ನಡೆಸಿವೆ. ಆವರಣದಲ್ಲಿ 2 ಬೃಹತ್‌ ಎಲ್‌ಸಿಡಿ ಪರದೆ ಹಾಗೂ 10 ಎಲ್‌ಇಡಿ ಟಿವಿ ಅಳವಡಿಸಲು ಸಿದ್ಧತೆ ನಡೆದಿದೆ. ವಿಕಲಚೇತನರು, ಹಿರಿಯ ನಾಗರಿಕರ ಸುಲಭ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ ಎಂದು ಉತ್ಸವ ಸಮಿತಿಯ ಅನಂತ್‌ ತಿಳಿಸಿದ್ದಾರೆ.

ಮನೆಗಳಲ್ಲಿ ಹಸುಗಳನ್ನು ಸಾಕಿರುವವರು ಬಸವನಗುಡಿಯ ದೊಡ್ಡ ಬಸವಣ್ಣನ ದೇವಾಲಯದಲ್ಲಿ ಪೂಜೆ ಮಾಡಿಸಿಕೊಂಡು ಸಂಜೆ ವೇಳೆಗೆ ತಮ್ಮ ಮನೆಗಳ ಮುಂದೆ ಕಿಚ್ಚು ಹಾಯಿಸುತ್ತಾರೆ. ಮಾವಳ್ಳಿ, ಗವಿಪುರ ಗುಟ್ಟಹಳ್ಳಿ, ಕೆಂಪೇಗೌಡನಗರ, ಭವಾನಿ ನಗರ, ಹನುಮಂತನಗರ, ಲಕ್ಕಸಂದ್ರ, ಲಾಲ್‌ಬಾಗ್‌ ಸುತ್ತಮುತ್ತಲ ಭಾಗಗಳ ಜನರು ಬೆಳಗ್ಗೆಯಿಂದಲೇ ದೊಡ್ಡ ಬಸವಣ್ಣ ದೇವಾಲಯದಲ್ಲಿ ಬೆಳಗ್ಗೆಯಿಂದ ತಮ್ಮ ರಾಸುಗಳಿಗೆ ಪೂಜೆ ಮಾಡಿಸಲು ಸಾಲುಗಟ್ಟಿ ನಿಂತಿರುತ್ತಾರೆ.

ಮಹಿಳೆಯರಿಂದ ತಯಾರಿ: ಸಂಕ್ರಾಂತಿ ಹಬ್ಬಕ್ಕೆ ತಿಂಗಳು ಇರುವಂತೆಯೇ ಗೃಹಿಣಿಯರು ಎಳ್ಳು- ಬೆಲ್ಲ ಮಿಶ್ರಣಕ್ಕೆ ಸಿದ್ಧತೆ ಆರಂಭಿಸುತ್ತಾರೆ. ಕೊಬ್ಬರಿ, ಬೆಲ್ಲದ ಅಚ್ಚುಗಳನ್ನು ಏಕ ಪ್ರಕಾರದಲ್ಲಿ ಸಣ್ಣ ತುಂಡಗಳನ್ನಾಗಿ ವಿಂಗಡಿಸಿ ಒಣಗಿಸಿ, ಕಲ್ಯಾಣಸೆವೆ, ಜೀರಿಗೆ ಪೆಪ್ಪರ್‌ವೆುಂಟ್‌, ಬಿಳಿ ಎಳ್ಳನ್ನು ಸೇರಿಸಿ ಪುಟ್ಟ ಪ್ಯಾಕೆಟ್‌ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಸಂಕ್ರಾಂತಿಯದು ಕಬ್ಬಿನ ಜಲ್ಲೆ, ಮಡಿಕೆಯಲ್ಲಿ ಉಕ್ಕುತ್ತಿರುವ ಸುಗ್ಗಿ ಅನ್ನ, ಕೋಲಾಟ ಸೇರಿದಂತೆ ವಿವಿಧ ವಿನ್ಯಾಸದ ರಂಗೋಲಿಗಳು ನಗರದ ಬೀದಿಗಳ ಅಂದ ಹೆಚ್ಚಿಸಲಿವೆ. ಬೆಳಗ್ಗೆ ಮನೆಯಲ್ಲಿಯೇ ಗೆಣಸು, ಕಡಲೆಕಾಯಿ, ಅವರೇಕಾಯಿ, ಗಸಗಸೆ ಹಣ್ಣಗಳ ಪುಟ್ಟ ರಾಶಿಯನ್ನು ಮಾಡಿ ಪೂಜೆ ಸಲ್ಲಿಸುವ ಹೆಣ್ಣು ಮಕ್ಕಳು ಶನಿವಾರದಿಂದಲೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.

ಕೆಲವೆಡೆ ಎಳ್ಳು ಬೆಲ್ಲ ಬೀರಲು ಅಲಂಕಾರಿಕ ಡಬ್ಬಿಗಳನ್ನು ತಯಾರಿಸಿದ್ದಾರೆ. ಪುಟ್ಟ ಮಡಿಕೆಗಳಿಗೆ ಬಣ್ಣಗಳಿಂದ, ಪ್ಲಾಸ್ಟಿಕ್‌ ಡಬ್ಬಗಳಿಗೆ ಚಿನ್ನದ ಬಣ್ಣದ ಜರಿ ಬಟ್ಟೆ ಮತ್ತು ಟಿಕ್ಕಿಗಳಿಂದ ಮತ್ತು ಗಾಜಿನ ಡಬ್ಬಿಗಳಿಗೆ ಬಣ್ಣ ಬಣ್ಣದ ಪ್ಲಾಸ್ಟಿಕ್‌ ಪೇಪರ್‌ಗಳನ್ನು ಸುತ್ತಿ ಅಲಂಕಾರ ಮಾಡಲಾಗಿದೆ. ಅಲ್ಲದೆ ಕೆಲವು ಮಹಿಳೆಯರು ಎಳ್ಳು ಬೆಲ್ಲ ಬೀರಲು ಬರುವ ಪುಟಾಣಿಗಳಿಗೆ ಉಡುಗೊರೆ ರೂಪದಲ್ಲಿ ಚಾಕೊಲೇಟ್‌ ಬಾಕ್ಸ್‌, ಜೆಮ್ಸ್‌, ಪೆನ್ಸಿಲ್‌ ಹಾಗೂ ಪುಟ್ಟ ಆಟಿಕೆಗಳನ್ನು ನೀಡುತ್ತಾರೆ. ಎಳ್ಳು- ಬೆಲ್ಲ, ಸಕ್ಕರೆ ಅಚ್ಚು, ಸೇರಿದಂತೆ ಇತರೆ ಸಿಹಿ ತಿನಿಸಿನ ಜತೆಗೆ ಪುಟ್ಟ ಕಬ್ಬಿನ ಜಲ್ಲೆಯನ್ನು ಒಳಗೊಂಡ ಪೊಟ್ಟಣಗಳು ಮಾಲ್‌ಗ‌ಳಲ್ಲಿ ಸಿದ್ಧವಾಗಿವೆ.

* ಜಯಪ್ರಕಾಶ್ ಬಿರಾದಾರ್ / ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next