ಬೆಂಗಳೂರು: ನಾವು ಭರವಸೆ ನೀಡಿದಂತೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಲಿದ್ದೇವೆ. ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಸಂಕ್ರಾಂತಿ ವೇಳೆಗೆ ಸಿಹಿಸುದ್ದಿ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಭಾನುವಾರ ಮಾತನಾಡಿದ ಅವರು, ನೂತನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಹಾಗೂ ಗೆದ್ದವರನ್ನು ಸಚಿವರನ್ನಾಗಿ ಮಾಡಲಿದ್ದೇವೆ. ಸಚಿವ ಸಂಪುಟವನ್ನು ಆದಷ್ಟು ಬೇಗ ವಿಸ್ತರಿಸುವ ಅಭಿಲಾಷೆಯಿದೆ ಎಂದು ತಿಳಿಸಿದರು. ಒಂದು ವಾರ ಬಿಟ್ಟು ದೆಹಲಿಗೆ ಬರುವಂತೆ ಕೇಂದ್ರದ ವರಿಷ್ಠರು ಸೂಚನೆ ನೀಡಿದ್ದಾರೆ.
ಹೀಗಾಗಿ, ಮುಂದಿನ ವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದೇನೆ. ಗೆದ್ದ ಶಾಸಕರಿಗೆ ಮಂತ್ರಿಸ್ಥಾನ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಅನುಮಾನ, ಸಂಶಯ ಬೇಡ. ಇದನ್ನು ಈಡೇರಿಸುತ್ತೇವೆ. ದೆಹಲಿ ನಾಯಕರಿಂದಲೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು.
ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ: ಕಳಸಾ-ಬಂಡೂರಿ ಯೋಜನೆ ಕುರಿತಂತೆ ಒಂದಷ್ಟು ಗೊಂದಲ ಸೃಷ್ಟಿಯಾಗಿತ್ತು. ಸಂಬಂಧಪಟ್ಟ ಸಚಿವರೊಂದಿಗೆ ನಾನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದ್ದೇವೆ. ಸಂಬಂಧಪಟ್ಟ ನೀರಾವರಿ ಸಚಿವರೊಂದಿಗೂ ಮಾತನಾಡಿದ್ದೇನೆ. ಅವರು ಸ್ಪಷ್ಟನೆಯನ್ನು ಅತಿ ಶೀಘ್ರದಲ್ಲಿ ಪ್ರಕಟಿಸಲಿದ್ದಾರೆ ಎಂದು ಹೇಳಿದರು.
ಕಳಸಾ-ಬಂಡೂರಿಯು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ವಿಚಾರವಾಗಿದೆ. ಅದನ್ನು ತಡೆಯುವುದು ಧರ್ಮವಲ್ಲ. ಗೋವಾದ ಮುಖ್ಯಮಂತ್ರಿಗಳೊಂದಿಗೂ ಮಾತುಕತೆ ನಡೆಸಲಿದ್ದೇನೆ. ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರನ್ನು ಪರಸ್ಪರ ಪ್ರೀತಿ, ವಿಶ್ವಾಸದಿಂದ ಮಾತುಕತೆ ನಡೆಸಿ, ಕುಡಿಯುವ ನೀರಿಗೆ ಅಡ್ಡಿಪಡಿಸದಂತೆ ಮಾತುಕತೆ ನಡೆಸಲಿದ್ದೇವೆ.
ಗೋವಾ, ಕರ್ನಾಟಕ ಹಾಗೂ ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೆ. ಜಲಸಂಪನ್ಮೂಲ ಸಚಿವರು ಮತ್ತು ಗೃಹ ಸಚಿವ ಅಮಿತ್ ಶಾ ಅವರು ಈ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ ಎಂಬ ಭರವಸೆ ಇದೆ. ಸಮಸ್ಯೆಗೆ ಪರಿಹಾರ ಸಿಗಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.