ಚನ್ನಪಟ್ಟಣ: ಸಂಕ್ರಾಂತಿ ಹಬ್ಬ ಎಂದರೆ ಸಾಕು ನಮಗೆ ಥಟ್ಟನೆ ನೆನಪಾಗುವುದು ಎಳ್ಳು, ಬೆಲ್ಲ, ಇದರೊಂದಿಗೆ ಕಬ್ಬು. ಅದರಲ್ಲೂ ಪಟಾವಳಿ ಹಾಗೂ ಪಟ್ಲು ಕಬ್ಬು ಎಂದು ಕರೆಯಲ್ಪಡುವ ಕರಿಕಬ್ಬಿಗಂತೂ ಸಂಕ್ರಾಂತಿ ಆಸುಪಾಸಿನಲ್ಲಿ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗುತ್ತದೆ.
ಹೆಸರುವಾಸಿ: ತಾಲೂಕಿನ ಪಟ್ಲು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬಕ್ಕೆಂದೇ ಸಿಹಿ ಕಪ್ಪು ಕಬ್ಬನ್ನು ಹೇರಳವಾಗಿ ಬೆಳೆಯುತ್ತಾರೆ. ಸಂಕ್ರಾಂತಿ ಹಬ್ಬಕ್ಕೆಂದೇ ಹೆಸರುವಾಸಿಯಾದ ಪಟಾವಳಿ ಹಾಗೂ ಕಪ್ಪು ಕಬ್ಬನ್ನು ಬೆಳೆಯುವುದರಲ್ಲಿ ಬಹಳ ಹಿಂದಿನಿಂದಲೂ ಹೆಸರುವಾಸಿ ಪಟ್ಲು ಗ್ರಾಮ.
ಪಟ್ಲು ಸುತ್ತಮುತ್ತ ಕಪ್ಪು ಕಬ್ಬು ಸಮೃದ್ಧ: ಪಟ್ಲು ಗ್ರಾಮದಲ್ಲಿ ಮಾತ್ರವಲ್ಲದೆ, ಸುತ್ತಮುತ್ತ ಗ್ರಾಮಗಳಾದ ಚಿಕ್ಕೇನಹಳ್ಳಿ, ಅಬ್ಬೂರು, ಅಬ್ಬೂರುದೊಡ್ಡಿ, ನಾಗವಾರ, ಕಳ್ಳಿ ಹೊಸೂರು, ತಿಟ್ಟಮಾರನಹಳ್ಳಿ ಗ್ರಾಮಗಳು ಸೇರಿದಂತೆ ಸುತ್ತ ಮುತ್ತ ಗ್ರಾಮಗಳಲ್ಲೂ ಕೂಡ ಸಂಕ್ರಾಂತಿ ಕಬ್ಬು ಅಥವಾ ಪಟಾವಳಿ (ಪಟ್ಲು) ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಬ್ಬು ಬೆಳೆಯೇ ಜೀವನಾಧಾರ: ಪಟ್ಲು ಗ್ರಾಮದಲ್ಲಿ ಮಾತ್ರ ಕಬ್ಬು ಬೆಳೆಯೇ ಗ್ರಾಮದ ಜನರ ಜೀವನಾಧಾರ. ಇಲ್ಲಿಯ ಕಬ್ಬನ್ನು ನೆರೆಯ ತಮಿಳುನಾಡು ರಾಜ್ಯ ಬಿಟ್ಟರೆ ರಾಜ್ಯದಲ್ಲಿ ಕಪ್ಪು ಕಬ್ಬು ಹಾಗೂ ಪಟಾವಳಿ ಕಪ್ಪು ಬೆಳೆಯುವುದಕ್ಕೆ ಇಲ್ಲಿಯ ಗ್ರಾಮಗಳು ಹೆಚ್ಚು ಹೆಸರುವಾಸಿ. ಅದರಲ್ಲೂ ಸಂಕ್ರಾಂತಿ ಹಬ್ಬ ಬಂತೆಂದರೆ ಇಲ್ಲಿಯ ಕಬ್ಬುಗಳಿಗೆ ಎಲ್ಲಿಲ್ಲದ ಬೇಡಿಕೆ. ಬೆಂಗಳೂರು, ಮೈಸೂರು, ರಾಮನಗರ ಹೀಗೆ ನೆರೆಯ ಹಲವು ಜಿಲ್ಲೆಗಳಿಗೆ ಕಬ್ಬನ್ನು ಮಾರಾಟ ಮಾಡುತ್ತಾರೆ.
ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತೆ: ಪ್ರತಿ ಸಂಕ್ರಾಂತಿ ಬಂದಾಗಲೂ 1 ಕೋಟಿಗೂ ಹೆಚ್ಚು ವಹಿವಾಟು ಇದೊಂದೇ ಗ್ರಾಮದಲ್ಲಾಗುತ್ತದೆ. ಚನ್ನಪಟ್ಟಣ ತಾಲೂಕಿನ ಪಟ್ಲು, ರಾಂಪುರ, ಕಳ್ಳಿ ಹೊಸೂರು, ತಿಟ್ಟಮಾರನಹಳ್ಳಿ ಸೇರಿ ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಪಟಾವಳಿ ಕಬ್ಬು ಬೆಳೆಯಲಾಗುತ್ತದೆ. ಈ ಬಾರಿ ಅತಿವೃಷ್ಟಿಯಿಂದಾಗಿ ಕಪ್ಪು ಕಬ್ಬು ದಷ್ಟ ಪುಷ್ಟವಾಗಿ ಬೆಳೆಯುವ ಬದಲು ಉದ್ದ ಬೆಳೆದಿರುವುದು ವಿಶೇಷ. ಈ ಬಾರಿ ಕಬ್ಬಿಗೆ ಭಾರೀ ಡಿಮ್ಯಾಂಡ್ ಇದೆ ಎಂದು ಕಬ್ಬು ಬೆಳೆಗಾರರು ಹೇಳುತ್ತಾರೆ. ಇಲ್ಲೂ ಮಧ್ಯವರ್ತಿಗಳ ಹಾವಳಿಯಿಂದ ತೊಂದರೆ : ಮಧ್ಯವರ್ತಿಗಳ ಹಾವಳಿ ಇಲ್ಲೂ ನಿಂತಿಲ್ಲ. ಇಲ್ಲೂ ಕಬ್ಬು ಬೆಳೆದ ರೈತನಿಗೆ ನಿಜವಾದ ಬೆಲೆ ಸಿಗುತ್ತಿಲ್ಲ. ರೈತರಿಂದ ಕಡಿಮೆ ಬೆಲೆಗೆ ಕೊಂಡು ಕೊಳ್ಳುವ ವ್ಯಾಪಾರಿಗಳು, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಒಟ್ಟಿನಲ್ಲಿ ಪಟ್ಲು ಕಬ್ಬಿಗಂತೂ ಸಂಕ್ರಾಂತಿ ಬಂದಾಗಲಂತೂ ಬೇಡಿಕೆಯೇ ಬೇಡಿಕೆ. ಮುಂದಿನ ದಿನಗಳಲ್ಲಿ ಆದರೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಬೇಕಿದೆ ಎಂದು ಕಬ್ಬು ಬೆಳೆಗಾರರು ಆಗ್ರಹಿಸಿದ್ದಾರೆ.
ಇಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಪಟಾವಳಿ ಅಥವಾ ಪಟ್ಲು ಕಬ್ಬು ಬೆಳೆಯಲಾಗುತ್ತದೆ. ಸುಮಾರು ಒಂದು ವರ್ಷಕ್ಕೆ ಒಂದು ಕೋಟಿ ರೂ. ವಹಿವಾಟು ನಡೆಯುತ್ತದೆ. ಈ ಬಾರಿ ಮಳೆಯಿಂದಾಗಿ ಕಬ್ಬು ಉದ್ದ ಬೆಳೆಯಿತೇ ಹೊರತು, ದಪ್ಪ ಆಗಲಿಲ್ಲ. ರೈತ ಏನೇ ಬೆಳೆ ಬೆಳೆದರೂ ಅದಕ್ಕೆ ಬೆಲೆ ಇಲ್ಲದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
– ಶ್ರೀಧರ್, ಪಟ್ಲು ಗ್ರಾಮದ ಕಬ್ಬು ಬೆಳೆಗಾರರು
ಚನ್ನಪಟ್ಟಣ ತಾಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ತಿಟ್ಟಮಾರನ ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಸಂಕ್ರಾಂತಿ ಆಸುಪಾಸಿನಲ್ಲಿ ಹೊರತುಪಡಿಸಿ, ಬೇರೆ ದಿನಗಳಲ್ಲಿ ಕಬ್ಬಿಗೆ ಬೇಡಿಕೆ ಇರಲ್ಲ. ಹೆಚ್ಚುವರಿ ಕಬ್ಬು ವಿಲೇವಾರಿಗೆ ಸಾಕಷ್ಟು ಸಂಕಷ್ಟ ಎದುರಿಸುತ್ತೇವೆ. ಶಾಸಕರು, ಜಿಲ್ಲಾಡಳಿತ ಬೆಂಬಲ ಬೆಲೆ ಅಥವಾ ಸೂಕ್ತ ಮಾರುಕಟ್ಟೆ ಒದಗಿಸಬೇಕು.
– ಕುಮಾರ್, ಪಟಾವಳಿ ಕಬ್ಬು ಬೆಳೆಗಾರ, ಪಟ್ಲು ಗ್ರಾಮಸ್ಥ
– ಎಂ.ಶಿವಮಾದು