ಸಂಕೇಶ್ವರ: ಗ್ರಾಮದ ಸರ್ಕಲ್ ನಲ್ಲಿನ ಹಾಕಲಾಗಿದ್ದ ಕನ್ನಡ ನಾಮಫಲಕ ತೆರವು ಮಾಡಿ ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ನಡೆದಿದ್ದು, ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ನೂರಾರು ಕನ್ನಡಿಗರು ಸಂಕೇಶ್ವರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಕನ್ನಡ ಕನ್ನಡಿಗರು ಹಾಕಲಾಗಿದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಇರುವ ಕನ್ನಡ ನಾಮಫಲಕವನ್ನು ತೆರವು ಮಾಡುವಂತೆ ಕೆಲ ಕಿಡಿಗೇಡಿಗಳು ಗ್ರಾಮದ ಕನ್ನಡ ಸಂಘಟನೆಯ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ.
ಈ ವಿಷಯ ಅರಿತ ಕೆಲ ಕನ್ನಡ ಸಂಘಟನೆಯ ಯುವಕರು ಮಂಗಳವಾರ ಸಂಜೆ ಸಂಕೇಶ್ವರ ಪೊಲೀಸ ಠಾಣೆಯ ಮುಂದೆ ಜಮಾವಣೆಗೊಂಡರು. ಬಳಿಕ ಹಲ್ಲೆ ಮಾಡಿರುವ ಕನ್ನಡ ವಿರೋಧಿಗಳನ್ನು ಬಂಧಿಸುವಂತೆ ಒತ್ತಾಯ ಮಾಡಿದರು.
ಆದರೆ ಪೊಲೀಸರು ಈ ಯುವಕರ ವಿರುದ್ದ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಯ ಯುವಕರು ಪ್ರತಿಭಟನೆಗೂ ಮುಂದಾದರು.
ಈ ವಿಷಯ ಅರಿತ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಸಂಕೇಶ್ವರ ಪೊಲೀಸರ ಜತೆ ಅಂಕಲಿ ಗ್ರಾಮಕ್ಕೆ ತೆರಳಿ ಘಟನೆಯ ಮಾಹಿತಿ ಪಡೆದುಕೊಂಡರು ಅಲ್ಲದೆ ಹಲ್ಲೆ ಮಾಡಿರುವ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ನಾಲ್ವರು ತಲೆಮರಿಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದೆವರೆಸಿದ್ದಾರೆ. ಸದ್ಯ ಅಂಕಲಿ ಗ್ರಾಮದಲ್ಲಿ ಬಿಗಿ ಪೊಲೀಸ ಬಂದೋಬಸ್ತ್ ಮಾಡಲಾಗಿದ್ದು, ಗ್ರಾಮದಲ್ಲಿ ಭೂದಿ ಮುಚ್ವಿದ ಕೆಂಡದಂತಿದೆ ಎನ್ನಲಾಗಿದೆ.