Advertisement

ಶಂಕರನಾರಾಯಣ ಉಪ ನೋಂದಣಿ ಕಚೇರಿ: ಸಿಬಂದಿ ಕೊರತೆ: ಸಾರ್ವಜನಿಕರಿಗೆ ಸಂಕಷ್ಟ

09:19 PM Jan 04, 2021 | Team Udayavani |

ಕುಂದಾಪುರ: ಐದು ಹೋಬಳಿಗಳ 42 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿರುವ ಶಂಕರನಾರಾಯಣದಲ್ಲಿರುವ ಉಪ ನೋಂದಣಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಯಲ್ಲಿ ಸಿಬಂದಿ ಕೊರತೆಯಿಂದಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ನೋಂದಣಿ, ಸಾಲಪತ್ರದ ಒಟಿಪಿ ವಿಳಂಬ, ಮಧ್ಯವರ್ತಿಗಳ ಹಾವಳಿಯಿಂದಾಗಿಯೂ ಜನ ಹೈರಾಣಾಗಿ ಹೋಗಿದ್ದಾರೆ.
ಭೂ ದಾಖಲೆಗಳ ನೋಂದಣಿ, ವಿವಾಹ ನೋಂದಣಿ, ದೃಢೀಕೃತ ನಕಲುಗಳು, ಋಣಭಾರ, ಅಡಮಾನ ಪತ್ರ ಸಹಿತ ಹಲವು ಕೆಲಸಗಳಿಗೆ ಕಚೇರಿಗೆ ಪ್ರತಿ ದಿನ ನೂರಾರು ಮಂದಿ ಗ್ರಾಹಕರು ಇಲ್ಲಿಗೆ ಬರುತ್ತಾರೆ. ಆದರೆ ಸಿಬಂದಿ ಕೊರತೆಯಿಂದಾಗಿ ದಿನಗಟ್ಟಲೆ ಕಾಯಬೇಕಾದ, ಒಂದು ನೋಂದಣಿಗೆ ವಾರವಿಡೀ ಇಲ್ಲಿಗೆ ಬರುವಂತಾಗಿದೆ.

ಹುದ್ದೆಗಳು ಖಾಲಿ
ಇಲ್ಲಿ ಈಗಿರುವ ಉಪ ನೋಂದಣಾಧಿಕಾರಿ ಹುದ್ದೆಗೆ ಪ್ರಭಾರ ನೆಲೆಯಲ್ಲಿ ನೇಮಿಸಲಾಗಿದ್ದು, ದ್ವಿತೀಯ ದರ್ಜೆ ಹುದ್ದೆ ಕಳೆದ 2 ದಶಕಗಳಿಗೂ ಹೆಚ್ಚು ಸಮಯದಿಂದ ಖಾಲಿಯಿದೆ. ಡಿ ದರ್ಜೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸ ಲಾಗಿದೆ. ಇದರೊಂದಿಗೆ ಹುದ್ದೆ ಭರ್ತಿ ಮಾಡಿ, ಹೆಚ್ಚುವರಿ ಕಂಪ್ಯೂಟರ್‌ಗಳ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ.

42 ಗ್ರಾಮಗಳ ವ್ಯಾಪ್ತಿ
ಶಂಕರನಾರಾಯಣ ಸಬ್‌ ರಿಜಿಸ್ಟ್ರಾರ್‌ ಕಚೇರಿಯ ವ್ಯಾಪ್ತಿಯು ಬ್ರಹ್ಮಾವರ, ಕುಂದಾಪುರ, ವಂಡ್ಸೆ ಹಾಗೂ ಬೈಂದೂರು ಈ 5 ಹೋಬಳಿಗಳ 42 ಗ್ರಾಮಗಳನ್ನು ಒಳಗೊಂಡಿದೆ. ಭೂ ದಾಖಲೆಗಳ ನೋಂದಣಿ, ವಿವಾಹ ನೋಂದಣಿ, ದೃಢೀಕೃತ ನಕಲುಗಳು, ಋಣಭಾರ, ಅಡಮಾನ ಪತ್ರ ಸಹಿತ ಹಲವು ಕೆಲಸಗಳಿಗೆ ಕಚೇರಿಗೆ ಪ್ರತಿ ದಿನ ನೂರಾರು ಮಂದಿ ಗ್ರಾಹಕರು ಇಲ್ಲಿಗೆ ಬರುತ್ತಾರೆ. ಕುಳಿತುಕೊಳ್ಳಲು ಸಹ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮಳೆ, ಬಿಸಿಲಿಗೆ ಜನ ಹೊರಗೆ ನಿಂತೇ ಕಾಯಬೇಕಾದ ಸ್ಥಿತಿಯಿದೆ.

ಹೊಸ ಕಟ್ಟಡದ ನಿರೀಕ್ಷೆ
ಶಂಕರ ನಾರಾಯಣದ ಸಬ್‌ ರಿಜಿಸ್ಟ್ರಾರ್‌ ಕಟ್ಟಡ ಬ್ರಿಟಿಷರ ಕಾಲದ್ದಾಗಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಈಗಿರುವ ಕಟ್ಟಡವು 1900ಕ್ಕಿಂತ ಮೊದಲೇ ನಿರ್ಮಾಣಗೊಂಡಿರುವ ಬಗ್ಗೆ ದಾಖಲೆಗಳಿವೆ. ಹಳೆಯ ಕಟ್ಟಡ ಮಾತ್ರವಲ್ಲದೆ, ಕಿರಿದಾಗಿದ್ದು, ಹೊಸ ಕಟ್ಟಡಕ್ಕೆ ಅನೇಕ ವರ್ಷಗಳಿಂದ ಬೇಡಿಕೆಗಳಿವೆ. ಈ ಸಂಬಂಧ ಈಗಾಗಲೇ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂಂದಿದ್ದು, ಕಂದಾಯ ಸಚಿವರಿಗೆ ಪ್ರಸ್ತಾವವನ್ನು ಸಲ್ಲಿಸಿದ್ದಾರೆ. ಈ ವರ್ಷದಲ್ಲಿ ಹೊಸ ಕಟ್ಟಡದ ನಿರೀಕ್ಷೆ ಜನರದ್ದಾಗಿದೆ.

Advertisement

ತಂತ್ರಾಂಶ ವಿಳಂಬದಿಂದ ಸಮಸ್ಯೆ
ಭೂಮಿ ಇನ್ನಿತರ ತಂತ್ರಾಂಶಗಳ ಸರ್ವರ್‌ ರಾಜ್ಯಮಟ್ಟದಲ್ಲೇ ನಿರ್ವಹಿಸುವುದರಿಂದ ಎಲ್ಲ ಕಡೆಗಳಲ್ಲಿ ನಿಧಾನಗತಿಯಲ್ಲಿಯೇ ಆಗುತ್ತದೆ. ಇದು ರಾಜ್ಯ ಮಟ್ಟದಲ್ಲೇ ಸಮಸ್ಯೆಯಿದೆ. ಸಾಲಪತ್ರಕ್ಕಾಗಿ ಒಟಿಪಿ ಗ್ರಾಮೀಣ ಜನರಿಗೆ ಅಷ್ಟೇನು ಪ್ರಯೋಜನವಲ್ಲದ ಕಾರಣ, ಅವರಲ್ಲಿ ಮೊಬೈಲ್‌ ಇಲ್ಲದಿದ್ದರೆ ಬೇರೆ ಯಾರಿಗೂ ಕೇಳಿ ಪಡೆಯಬೇಕಾದ ಸಮಸ್ಯೆ ಇರುವುದರಿಂದ ವಿಳಂಬವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ಸಹ ನಿಧಾನಗತಿಯಿರುತ್ತದೆ ಎನ್ನುವುದಾಗಿ ಇಲ್ಲಿನ ಉಪ ನೋಂದಣಿ ಅಧಿಕಾರಿ ನಾಗರಾಜ್‌ ಓಲೇಕಾರ್‌ ಹೇಳುತ್ತಾರೆ.

ಮಧ್ಯವರ್ತಿಗಳ ಹಾವಳಿ
ಭೂ ದಾಖಲೆ, ಋಣಭಾರ ಸೇರಿದಂತೆ ವಿವಿಧ ನೋಂದಣಿಗಳು ಇಲ್ಲಿ ನಡೆಯಬೇಕಾದರೆ ಮಧ್ಯವರ್ತಿಗಳು, ದಲ್ಲಾಳಿಗಳ ಹಾವಳಿ ಅತಿಯಾಗಿದೆ. ಹಣ ಕೊಡದೇ ಯಾವುದೇ ಕೆಲಸ ತುರ್ತಾಗಿ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಹಣ ಕೊಟ್ಟರೆ ಯಾವುದೇ ಕೆಲಸವೂ ಸಲೀಸಾಗಿ ಆಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಶಾಸಕರು, ಸಂಸದರು ಗಮನಹರಿಸಬೇಕಾಗಿದೆ ಜನರು ಆಗ್ರಹಿಸಿದ್ದಾರೆ.

ಪ್ರಸ್ತಾವ ಸಲ್ಲಿಕೆ
ಶಂಕರನಾರಾಯಣ ಮಾತ್ರವಲ್ಲದೆ ಜಿಲ್ಲೆಯ ಎಲ್ಲ ನೋಂದಣಿ ಕಚೇರಿಗಳಲ್ಲಿ ಸಿಬಂದಿ ಹುದ್ದೆ ಭರ್ತಿಗಾಗಿ ಸರಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಶಂಕರನಾರಾಯಣ, ಕುಂದಾಪುರ, ಬೈಂದೂರು ಹೀಗೆ ಬಹುತೇಕ ಎಲ್ಲ ಕಡೆಗಳಲ್ಲಿ ಸಿಬಂದಿ ನೇಮಕಾತಿ ಆಗಬೇಕಿದೆ. ಆದಷ್ಟು ಶೀಘ್ರದಲ್ಲಿ ಆಗಬಹುದು.
– ಆರ್‌.ಎಲ್‌. ಪೂಜಾರ್‌, ಜಿಲ್ಲಾ ನೋಂದಣಾಧಿಕಾರಿ, ಉಡುಪಿ

ಒಟಿಪಿ ಸಮಸ್ಯೆ
ತಾಂತ್ರಿಕ ಸಮಸ್ಯೆ, ಸಿಬಂದಿ ಕೊರತೆ, ಒಟಿಪಿ ವಿಳಂಬದಿಂದಾಗಿ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದೂರದ ಊರುಗಳಿಂದ ಬಂದು ದಿನವಿಡೀ ಕಾದು, ಯಾವುದೇ ಕೆಲಸವಾಗದೇ ಬರಿಗೈಯಲ್ಲಿ ಜನ ಹೋಗುವ ಪರಿಸ್ಥಿತಿ ಕೆಲವೊಮ್ಮೆ ಬರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಬೇಕು. ಆದ್ಯತೆ ನೆಲೆಯಲ್ಲಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಬೇಕು.
– ಆವರ್ಸೆ ರತ್ನಾಕರ ಶೆಟ್ಟಿ, ಅಧ್ಯಕ್ಷರು, ಶಂಕರನಾರಾಯಣ ತಾ| ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next