Advertisement
ಸಂಕಗಿರಿ ಕೋಟೆಯ ನಿರ್ಮಾಣ ಮೊತ್ತ ಮೊದಲಿಗೆ 15ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಆಯಿತು. 17ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ಥಳೀಯ ರಾಜ ಅಳಗಿರಿ ಮರಾಠ ಹಾಗೂ ಬಿಜಾಪುರ ಸುಲ್ತಾನರ ಜಂಟಿ ದಾಳಿಯಲ್ಲಿ ಸೋತು ಹೋದ, ಮರಾಠ ರಾಜ ವೆಂಕೋಜಿ ಬಿಜಾಪುರ ಸುಲ್ತಾನನಿಂದ ಬೇರ್ಪಟ್ಟು ತಂಜಾವೂರಿನ ಮೇಲೆ ಅಧಿಪತ್ಯ ಹೊಂದಿದ. ಈ ಸಮಯದಲ್ಲಿ ಸ್ಥಳೀಯ ಚೆಟ್ಟಿಯಾರ್ ಜನಾಂಗದವರು ಆಕ್ರಮಣಕಾರರ ವಿರುದ್ಧ ದಂಗೆ ಎದ್ದರು. ಚೆಟ್ಟಿಯಾರ್ ಜನಾಂಗದ ಗಂಡಸರೆಲ್ಲರನ್ನೂ ವಧಿಸುವ ಆದೇಶ ಮರಾಠರಿಂದ ಬಂತು. ವಂಶ ನಾಶವಾಗದಿರಲೆಂದು ತಂಜಾವೂರಿನ ಚೆಟ್ಟಿಯಾರ್ ಹಿರಿಯರು 500 ಮಕ್ಕಳನ್ನು ಗುಪ್ತವಾಗಿ ಸಂಕಗಿರಿಯಲ್ಲಿ ಬಚ್ಚಿಟ್ಟರು. ಅಲ್ಲಿ ಶಿವ ಹಾಗೂ ಅಂಗಯರ್ ನಾಯಕಿಯ ದೇಗುಲಗಳನ್ನು ಕಟ್ಟಿಸಿದರು. ಸಂಕಗಿರಿ ಊರಿನಲ್ಲಿರುವ ದೇವಸ್ಥಾನ ಕಾಲಕ್ರಮೇಣ ಶಿಥಿಲವಾಗಿತ್ತು. ಇದನ್ನು ಸ್ಥಳೀಯರು ಪುನರುಜ್ಜೀವನಗೊಳಿಸಿದ್ದಾರೆ.
ಒಟ್ಟು ಹದಿನಾಲ್ಕು ಸುತ್ತುಗಳಿರುವ ಈ ಕೋಟೆಯ ಕೊನೆಯ ಮೂರು ಭಾಗಗಳು ಬ್ರಿಟಿಷರ ಕಾಲದಲ್ಲಿ ನಿರ್ಮಿತವಾದವು. ಕೋಟೆಯ ವ್ಯಾಪ್ತಿ ಬೆಟ್ಟದ ಒಂದು ಬದಿ ಮಾತ್ರ. ಬೆಟ್ಟದ ಇನ್ನೊಂದು ಬದಿಯನ್ನು ಹತ್ತಲು ಅಸಾಧ್ಯವಾಗಿರುವುದರಿಂದ ನೈಸರ್ಗಿಕ ರಕ್ಷಣೆ ದೊರೆತಿತ್ತು.
Related Articles
Advertisement
ಅಲ್ಲಿ ಸಿಕ್ಕಿದ ಸ್ಥಳೀಯರನ್ನು ವಿಚಾರಿಸಿದಾಗ, ‘ಮಟಮಟ ಮಧ್ಯಾಹ್ನ ಚಾರಣಕ್ಕೆ ಸೂಕ್ತವಾದ ಸಮಯವಲ್ಲ ಹಾಗೂ ಭದ್ರತೆಯ ದೃಷ್ಟಿಯಿಂದ ದೊಡ್ಡ ಗುಂಪುಗಳಲ್ಲಿ ಮೇಲೆ ಸಾಗಿ ವೀಕ್ಷಿಸುವುದು ಒಳಿತು’ ಎಂದರು. ಐತಿಹಾಸಿಕವಾಗಿ ಮುಖ್ಯವಾದ ಈ ಜಾಗವನ್ನು ಸರಿಯಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಪ್ರಯತ್ನಗಳು ನಡೆದೇ ಇಲ್ಲವೆನಿಸುತ್ತದೆ. ಶಿಥಿಲವಾಗುವ ಮೊದಲೇ ಅದನ್ನು ಉಳಿಸಿಕೊಂಡು ಪ್ರವಾಸೀ ತಾಣವಾಗಿ ಮಾಡಬಹುದು.
ಮಾರ್ಗಸೂಚಿಬೆಂಗಳೂರಿನಿಂದ 240 ಕಿ.ಮೀ. ದೂರದಲ್ಲಿರುವ ಈ ಜಾಗಕ್ಕೆ ಸುತ್ತಮುತ್ತಲಿನ ಪ್ರದೇಶಗಳಿಂದ ಬಸ್ಸುಗಳ ಸೌಕರ್ಯವಿದ್ದರೂ ಸ್ವಂತ ವಾಹನದಲ್ಲಿ ಹೋಗುವುದು ಒಳಿತು. ಸೇಲಂ-ಕೊಯಮುತ್ತೂರಿನ ನಡುವಿನ ಹೆದ್ದಾರಿ 544ರಲ್ಲಿ ಪ್ರಯಾಣಿಸಿ ಸೇಲಂನಿಂದ ಸುಮಾರು 30 ಕಿ.ಮೀ. ದೂರದಲ್ಲಿ ಸೇಲಂ-ಸಂಕಗಿರಿ ರಸ್ತೆಯನ್ನು ಹಿಡಿಯಬೇಕು. ರಸ್ತೆಗಳು ಚೆನ್ನಾಗಿವೆ. -ಉಮಾಮಹೇಶ್ವರಿ ಎನ್.