‘ಸಂಜು ವೆಡ್ಸ್ ಗೀತಾ-2’ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಯಿತು. ರಾಗಿಣಿ ದ್ವಿವೇದಿ ಅಭಿನಯದ ಈ ಹಾಡನ್ನು ಛಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು.
ನಾಗಶೇಖರ್ ನಿರ್ದೇಶನದ ಈ ಸಿನಿಮಾವನ್ನು ಛಲವಾದಿ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಪ್ರೇಮಕಥೆಯನ್ನು ರೇಷ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಈ ಚಿತ್ರದಲ್ಲಿ ಒಬ್ಬ ರೇಷ್ಮೆ ಬೆಳೆಗಾರನಾಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಸಿನಿಮಾ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದೆ. ರಾಗಿಣಿ ಅಭಿನಯದ ಈ ಹಾಡನ್ನು ನಮ್ಮ ನಾರಾಯಣಸ್ವಾಮಿ ಅವರ ಕೈಯಲ್ಲೇ ರಿಲೀಸ್ ಮಾಡಿಸಬೇಕೆಂದಿತ್ತು. ಹಾಡು ಅದ್ಭುತವಾಗಿ ಮೂಡಿಬಂದಿದೆ. ಇದು ಅಪ್ಪಟ ಫ್ಯಾಮಿಲಿ ಸ್ಟೋರಿ. ರಚಿತಾರಾಮ್, ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ದೊಡ್ಡ ದೊಡ್ಡ ಕಲಾವಿದರೇ ಅಭಿನಯಿಸಿದ್ದಾರೆ ಎಂದು ಹೇಳಿದರು.
ನಿರ್ದೇಶಕ ನಾಗಶೇಖರ್ ಮಾತನಾಡಿ, ಶಿಡ್ಲಘಟ್ಟದಿಂದ ಸ್ವಿಟ್ಜರ್‌ಲ್ಯಾಂಡ್‌ನಂತಹ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಇವತ್ತು ಇಂಥ ದೊಡ್ಡ ವೇದಿಕೆಯಲ್ಲಿ ನಮ್ಮ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರ ಈಗ ರೀರೆಕಾರ್ಡಿಂಗ್ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರದ ಫಸ್ಟ್ ಕಾಪಿ ಹೊರಬರಲಿದೆ. ಖುಷಿಯ ವಿಚಾರ ಏನೆಂದರೆ ಬಿಡುಗಡೆಗೂ ಮುನ್ನವೇ ಗೋಕುಲ್ ಫಿಲಂಸ್‌ನವರು ನಮ್ಮ ಚಿತ್ರವನ್ನು ಖರೀದಿ ಮಾಡಿದ್ದಾರೆ.
ರಿಲೀಸ್ ಡೇಟ್ ಅನೌನ್ಸ್ ಮಾಡಲು ನಾವು ರೆಡಿ ಇದ್ದೇವೆ. ಚಿತ್ರದಲ್ಲಿ 5 ಹಾಡುಗಳಿದ್ದು, ಒಂದು ಹಾಡಿಗೆ ಲಹರಿ ಸಂಸ್ಥೆಯ ಅನುಮತಿ ಬೇಕಿದೆ. ನಮ್ಮ ಮಣ್ಣಿನ ಕಥೆ ಮಾಡಲು ಹೊರಟಾಗ ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ ಸಮಸ್ಯೆ ಕಣ್ಣಮುಂದೆ ಬಂತು. ಅಲ್ಲಿನ ಕಪ್ಪುಮಣ್ಣಿನ ಕಥೆಯನ್ನು ಚಿತ್ರದಲ್ಲಿ ಹೇಳಹೊರಟಿದ್ದೇವೆ. ಇದರಲ್ಲಿ ಎಲ್ಲವೂ ಹೊಸದಾಗಿರುತ್ತೆ. ನಿರ್ಮಾಪಕ ಕುಮಾರ್ ಅವರು ನೀಡಿದ ಸಹಕಾರದಿಂದ ಚಿತ್ರದ ಇಷ್ಟು ಅದ್ಧೂರಿಯಾಗಿ ಬಂದಿದೆ. ಈಗಿನ ಕಾಲದ ಲವ್ ಸ್ಟೋರಿ ಜೊತೆಗೆ ಒಂದು ಸರ್‌ಪ್ರೈಸ್ ಕೂಡಾ ಚಿತ್ರದಲ್ಲಿದೆ ಎಂದರು.