ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರ ತವರಿನಲ್ಲೇ ಸೋಲಿಸಿದ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಕೊನೆಯ ಓವರ್ ನಲ್ಲಿ ಧೋನಿ ತಂಡದಿಂದ ಜಯ ಕಸಿದ ರಾಯಲ್ಸ್ ಮೂರು ರನ್ ಅಂತರದ ಗೆಲುವು ಕಂಡಿದೆ.
ಆದರೆ ಈ ಗೆಲುವಿನ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ದಂಡ ಅನುಭವಿಸಿದ್ದಾರೆ. 2023ರ ಐಪಿಎಲ್ ನಲ್ಲಿ ಈ ಕಾರಣಕ್ಕಾಗಿ ದಂಡ ಅನುಭವಿಸಿದ ಎರಡನೇ ನಾಯಕ ಸ್ಯಾಮ್ಸನ್. ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೂ ದಂಡ ವಿಧಿಸಲಾಗಿತ್ತು.
ಇದು ಸ್ಯಾಮ್ಸನ್ ಅವರ ಈ ಸೀಸನ್ ನ ಮೊದಲ ತಪ್ಪಾಗಿರುವುದರಿಂದ, ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
“ಬುಧವಾರ ಚೆನ್ನೈನ ಚೆಪಾಕ್ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಪಂದ್ಯ 17 ರ ಸಮಯದಲ್ಲಿ ರಾಜಸ್ಥಾನ್ ರಾಯಲ್ಸ್ ನಿಧಾನಗತಿಯ ಓವರ್-ರೇಟ್ ಕಾಯ್ದುಕೊಂಡ ಕಾರಣ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಒಂದು ಋತುವಿನಲ್ಲಿ ಎರಡನೇ ಅಪರಾಧಕ್ಕಾಗಿ, ಬೌಲಿಂಗ್ ತಂಡದ ನಾಯಕನಿಗೆ 24 ಲಕ್ಷ ದಂಡ ವಿಧಿಸಲಾಗುತ್ತದೆ. ಅಲ್ಲದೆ ಇತರ 10 ಆಟಗಾರರಿಗೆ ಆರು ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಒಂದು ಋತುವಿನಲ್ಲಿ ಮೂರನೇ ಮತ್ತು ನಂತರದ ಅಪರಾಧಕ್ಕಾಗಿ, ಬೌಲಿಂಗ್ ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ ಮತ್ತು ಒಂದು ಪಂದ್ಯಕ್ಕೆ ನಿಷೇಧವನ್ನು ಸಹ ವಿಧಿಸಲಾಗುತ್ತದೆ. ತಂಡದ ಇತರ 10 ಆಟಗಾರರಿಗೆ 12 ಲಕ್ಷ ಅಥವಾ ಅವರ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ದಂಡವನ್ನು ವಿಧಿಸಲಾಗುತ್ತದೆ.