Advertisement

“ನನ್ನ ದಿನ’ವನ್ನು ನೀವು ಹಾಳು ಮಾಡಿದಿರಿ…

09:18 AM Apr 01, 2019 | keerthan |

ಹೈದರಾಬಾದ್‌: ಶುಕ್ರವಾರ ರಾತ್ರಿಯ ಸನ್‌ರೈಸರ್ ಹೈದರಾಬಾದ್‌- ರಾಜಸ್ಥಾನ್‌ ರಾಯಲ್ಸ್‌ ನಡುವಿನ ಪಂದ್ಯ ದೊಡ್ಡ ಮೊತ್ತದ ಮೇಲಾಟಕ್ಕೆ ಸಾಕ್ಷಿಯಾಯಿತು. ಸಂಜು ಸ್ಯಾಮ್ಸನ್‌ ಪ್ರಸಕ್ತ ಋತುವಿನ ಮೊದಲ ಶತಕ ಬಾರಿಸಿ ರಾಜಸ್ಥಾನ್‌ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾಗಿದ್ದರು. ಆದರೆ ಡೇವಿಡ್‌ ವಾರ್ನರ್‌ ಅವರ ಸ್ಫೋಟಕ ಬ್ಯಾಟಿಂಗ್‌ ಸ್ಯಾಮ್ಸನ್‌ ಸೆಂಚುರಿಯನ್ನು ವ್ಯರ್ಥಗೊಳಿಸಿತು. ಹೈದರಾಬಾದ್‌ 5 ವಿಕೆಟ್‌ಗಳಿಂದ ಗೆದ್ದು ಅಂಕದ ಖಾತೆ ತೆರೆಯಿತು.

Advertisement

ಈ ಸಂದರ್ಭದಲ್ಲಿ ಡೇವಿಡ್‌ ವಾರ್ನರ್‌ ಜತೆ ಮಾತಾಡಿದ ಸಂಜು ಸ್ಯಾಮ್ಸನ್‌, “ನನ್ನ ದಿನವನ್ನು ನೀವು ಹಾಳುಮಾಡಿಬಿಟ್ಟಿರಿ’ ಎಂದು ಹೇಳಿದರು. ಅವರ ಈ ಪ್ರತಿಕ್ರಿಯೆ ತಮಾಷೆಯ ಜತೆಗೆ ಬಹಳ ಗಂಭೀರವೂ ಆಗಿತ್ತು ಎಂದು ಕ್ರಿಕೆಟ್‌ ಪಂಡಿತರು ವಿಶ್ಲೇಷಿಸಿದ್ದಾರೆ.

ಶತಕದ ಜತೆಯಾಟ
ಸತತ 2ನೇ ಪಂದ್ಯದಲ್ಲೂ ಸಿಡಿದ ಡೇವಿಡ್‌ ವಾರ್ನರ್‌ 37 ಎಸೆತಗಳಿಂದ 69 ರನ್‌ ಬಾರಿಸಿದರು (9 ಬೌಂಡರಿ, 2 ಸಿಕ್ಸರ್‌). ಜಾನಿ ಬೇರ್‌ಸ್ಟೊ 28 ಎಸೆತ ಎದುರಿಸಿ 45 ರನ್‌ ಮಾಡಿದರು (6 ಬೌಂಡರಿ, 1 ಸಿಕ್ಸರ್‌). ಇವರಿಬ್ಬರಿಂದ ಮೊದಲ ವಿಕೆಟಿಗೆ 9.4 ಓವರ್‌ಗಳಿಂದ 110 ರನ್‌ ಒಟ್ಟುಗೂಡಿತು. ಇದು ಹೈದರಾಬಾದ್‌ ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿತು.

ವಿಲಿಯಮ್ಸನ್‌ ಕೇವಲ 14 ರನ್‌ ಮಾಡಿದರೆ, ವಿಜಯ್‌ ಶಂಕರ್‌ 15 ಎಸೆತಗಳಿಂದ 35 ರನ್‌ ಸಿಡಿಸಿ ಮಿಂಚಿದರು (1 ಬೌಂಡರಿ, 3 ಸಿಕ್ಸರ್‌). ಯೂಸುಫ್ ಪಠಾಣ್‌ ಅಜೇಯ 16, ಹೆಲಿಕಾಪ್ಟರ್‌ ಶಾಟ್‌ ಬಾರಿಸಿ ಮಿಂಚಿದ ರಶೀದ್‌ ಖಾನ್‌ 8 ಎಸೆತಗಳಿಂದ ಅಜೇಯ 15 ರನ್‌ ಮಾಡಿ ತಂಡದ ಗೆಲುವನ್ನು ಸಾರಿದರು (1 ಬೌಂಡರಿ, 1 ಸಿಕ್ಸರ್‌). ಇದಕ್ಕೂ ಮುನ್ನ ರಶೀದ್‌ 4 ಓವರ್‌ಗಳಲ್ಲಿ ಕೇವಲ 24 ರನ್‌ ನೀಡಿ ಒಂದು ವಿಕೆಟ್‌ ಉರುಳಿಸಿದ್ದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.

ವಾರ್ನರ್‌ಗೆ ಆರೇಂಜ್‌ ಕ್ಯಾಪ್‌
ಶುಕ್ರವಾರದ ಪಂದ್ಯದ ಬಳಿಕ ಆರೇಂಜ್‌ ಕ್ಯಾಪ್‌ ಡೇವಿಡ್‌ ವಾರ್ನರ್‌ ತಲೆಯನ್ನು ಅಲಂಕರಿಸಿತು (154 ರನ್‌). ಇದನ್ನು ಸ್ವೀಕರಿಸುವಾಗ ಪ್ರತಿಕ್ರಿಯಿಸಿದ ವಾರ್ನರ್‌, “ಸನ್‌ರೈಸರ್! ನಮ್ಮ ಬಣÛವೇ ಆರೇಂಜ್‌. ಇದೇಕೆ ನನ್ನದಾಗಬಾರದು…’ ಎಂದು ತಮಾಷೆ ಮಾಡಿದರು.

Advertisement

ಸಂಕ್ಷಿಪ್ತ ಸ್ಕೋರ್‌
ರಾಜಸ್ಥಾನ್‌ ರಾಯಲ್ಸ್‌-2 ವಿಕೆಟಿಗೆ 198 (ಸ್ಯಾಮ್ಸನ್‌ ಔಟಾಗದೆ 102, ರಹಾನೆ 70, ರಶೀದ್‌ 24ಕ್ಕೆ 1)  ಸನ್‌ರೈಸರ್ ಹೈದರಾಬಾದ್‌-19 ಓವರ್‌ಗಳಲ್ಲಿ 5 ವಿಕೆಟಿಗೆ 201 (ವಾರ್ನರ್‌ 69, ಬೇರ್‌ಸ್ಟೊ 45, ವಿಜಯ್‌ ಶಂಕರ್‌ 35, ಶ್ರೇಯಸ್‌ ಗೋಪಾಲ್‌ 27ಕ್ಕೆ 3).  ಪಂದ್ಯಶ್ರೇಷ್ಠ: ರಶೀದ್‌ ಖಾನ್‌.

ಇಂದು ನನ್ನ ದಿನ ಆಗಬೇಕಿತ್ತು
“ನಿಜಕ್ಕಾದರೆ ಇಂದು ನನ್ನ ದಿನ ಆಗಬೇಕಿತ್ತು. ಆದರೆ ನೀವಿದನ್ನು ಧ್ವಂಸಗೊಳಿಸಿದಿರಿ. ನಿಮ್ಮ ಆಟದ ಮುಂದೆ ನನ್ನ ಶತಕಕ್ಕೆ ಬೆಲೆಯೇ ಇಲ್ಲದಂತಾಯಿತು. ನಿಮ್ಮ ಬ್ಯಾಟಿಂಗ್‌ ಅಬ್ಬರ ಎಷ್ಟರ ಮಟ್ಟಿಗೆ ಇತ್ತೆಂದರೆ, ಪವರ್‌ ಪ್ಲೇ ಅವಧಿಯಲ್ಲೇ ನಾವು ಪಂದ್ಯವನ್ನು ಕಳೆದುಕೊಂಡಾಗಿತ್ತು. ನಿಮ್ಮಂಥ ಬ್ಯಾಟ್ಸ್‌ ಮನ್‌ ಎದುರಾಳಿ ತಂಡದಲ್ಲಿರುವಾಗ ನಮ್ಮ ಸ್ಕೋರ್‌ಬೋರ್ಡ್‌ನಲ್ಲಿ 250 ರನ್ನಾದರೂ ದಾಖಲಾಗಬೇಕಾಗುತ್ತದೆ. ನಿಮ್ಮ ಆಟ ನಿಜಕ್ಕೂ ಅದ್ಭುತವಾಗಿತ್ತು’ ಎನ್ನುವ ಮೂಲಕ ಸ್ಯಾಮ್ಸನ್‌ ಕ್ರೀಡಾಸ್ಫೂರ್ತಿ ಮೆರೆದರು.

ಇದೇ ವೇಳೆ ಸ್ಯಾಮ್ಸನ್‌ ಸೆಂಚುರಿಯನ್ನು ಪ್ರಶಂಸಿಸಲು ವಾರ್ನರ್‌ ಮರೆಯಲಿಲ್ಲ. “ನಮ್ಮ ಆರಂಭ ಅಷ್ಟೇನೂ ಚೆನ್ನಾಗಿರಲಿಲ್ಲ. ಆದರೆ ಸಂಜು ಸೀರಿಯಸ್‌ ಇನ್ನಿಂಗ್ಸ್‌ ಒಂದನ್ನು ಪ್ರದರ್ಶಿಸಿದರು. ಇದು ಇನ್ನೂರರ ಪಿಚ್‌ ಎಂಬುದಾಗಿ ನಾವು ನಿರೀಕ್ಷಿಸಿರಲಿಲ್ಲ. ಕಠಿನವಾದ ಟ್ರ್ಯಾಕ್‌ನಲ್ಲಿ ಹೇಗೆ ಬ್ಯಾಟಿಂಗ್‌ ಮಾಡಬಹುದು ಎಂಬುದನ್ನು ಸ್ಯಾಮ್ಸನ್‌ ತೋರಿಸಿ ಕೊಟ್ಟರು. ಅವರ ಆಟವೇ ನಮಗೆ ಧೈರ್ಯ ತಂದಿತು…’ಎಂದರು. ವೀಕ್ಷಕರ ಬೆಂಬಲವನ್ನೂ ವಾರ್ನರ್‌ ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next