ಹುಣಸೂರು: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಮನೆ ಮನೆಗೆ ರಾಷ್ಟ್ರ ಧ್ವಜದ ಸಂಭ್ರಮಕ್ಕೆ ಹುಣಸೂರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‌ಆರ್‌ಎಲ್‌ಎಂ) ವತಿಯಿಂದ ಸಂಜೀವಿನ ಮಹಿಳಾ ಒಕ್ಕೂಟದ ಸದಸ್ಯರು ಗ್ರಾಮ ಪಂಚಾಯತ್ ಗಳಿಗೆ ವಿತರಿಸಲು 18,450 ಧ್ವಜಗಳನ್ನು ತಯಾರಿಸಿದ್ದಾರೆ.
ಸರಕಾರದ ನಿರ್ದೇಶನದಂತೆ ಜಿಲ್ಲಾ ಪಂಚಾಯತ್ ಸೂಚನೆಯಂತೆ ತಾಲೂಕಿನ ಕರಿಮುದ್ದನಹಳ್ಳಿ, ಬಿಳಿಕೆರೆ, ಚಲ್ಲಹಳ್ಳಿ, ಮನುಗನಹಳ್ಳಿ ಗ್ರಾಮಗಳ ಸಂಜೀವಿನಿ ಒಕ್ಕೂಟದ ತರಬೇತಿ ಪಡೆದ 157 ಮಹಿಳಾ ಟೈಲರ್‌ಗಳು ಕಳೆದೊಂದು ವಾರದಿಂದ ಈಗಾಗಲೇ ಧ್ವಜಗಳನ್ನು ತಯಾರಿಸಿದ್ದಾರೆ. ಅಲ್ಲದೆ ಬೇಡಿಕೆಯಂತೆ ಮತ್ತಷ್ಟು ಧ್ವಜ ತಯಾರಿಸುವಲ್ಲಿ ನಿರತರಾಗಿದ್ದಾರೆ.
ಪ್ರತಿ ಗ್ರಾ.ಪಂ.ಗೆ 450 ಬಾವುಟ ನಿಗದಿ: ಧ್ವಜಕ್ಕೆ ಬಳಸುವ ಅಶೋಕ ಚಕ್ರವಿರುವ ಧ್ವಜದ ಅಗತ್ಯ ಬಟ್ಟೆಯನ್ನು ಜಿ.ಪಂ.ಪೂರೈಸಿದೆ. ಮಹಿಳೆಯರು ಹೊಲಿಯುವ ಪ್ರತಿ ಭಾವುಟಕ್ಕೆ 8 ರೂ. ಕೂಲಿ ನಿಗದಿಪಡಿಸಿದ್ದು, ಇದೀಗ ತಯಾರಿಸಿರುವ ಧ್ವಜವನ್ನು ಪ್ರತಿ ಗ್ರಾಮ ಪಂಚಾಯತ್‌ಗೆ 450 ಬಾವುಟಗಳಂತೆ ವಿತರಿಸಲಾಗುತ್ತಿದ್ದು, ಎರಡು ಅಳತೆಯ ಬಾವುಟ ನೀಡಿದ್ದು, ಚಿಕ್ಕ ಬಾವುಟಕ್ಕೆ 32 ರೂ., ದೊಡ್ಡ ಅಳತೆಯ ಬಾವುಟಕ್ಕೆ 44 ರೂ. ನಿಗದಿಗೊಳಿಸಿದ್ದು, ಇಲ್ಲಿಯೇ ಖರೀದಿಸುವಂತೆ ಗ್ರಾ.ಪಂ.ಗಳಿಗೆ ಜಿ.ಪಂ.ಆದೇಶಿಸಿದೆ ಎಂದು ತಾ.ಪಂ.ಇಓ ಬಿ.ಕೆ. ಮನು ತಿಳಿಸಿದ್ದಾರೆ.
ಧ್ವಜ ತಯಾರಿಸುವ ಮೇಲುಸ್ತುವಾರಿಯನ್ನು ಎನ್‌ಆರ್‌ಎಲ್‌ಎಂ.ನ ತಾಲೂಕು ವ್ಯವಸ್ಥಾಪಕಿ ಮಂಜುಳ ನರಗುಂದ, ಸಮೂಹ ಮೇಲ್ವಿಚಾರಕರಾದ ಎಂ.ಎನ್.ಪ್ರವೀಣ್, ಪರಹತ್‌ಬಾನು, ಪ್ರವೀಣ್ ಎಚ್.ಎನ್ ವಹಿಸಿದ್ದರು.
ಅಲ್ಲದೆ ಸಂಜೀವಿನಿ ಒಕ್ಕೂಟಗಳ ಅಧ್ಯಕ್ಷರಾದ ಬಿಳಿಕೆರೆಯ ಅಮಿನಾ, ಕರಿಮುದ್ದನಹಳ್ಳಿಯ ಅನಿತಾ, ಸಿಂಗರಮಾರನಹಳ್ಳಿಯ ರಶ್ಮಿ ನೇತೃತ್ವದಲ್ಲಿ ಧ್ವಜಗಳ ತಯಾರಿಕೆ ಯಶಸ್ವಿಯಾಗಿದೆ. ಇದೇ ರೀತಿ ಜಿಲ್ಲೆಯ 350 ಸಂಜೀವಿನಿ ಒಕ್ಕೂಟಕ್ಕೆ ಧ್ವಜ ತಯಾರಿಸಲು ಜಿ.ಪಂ. ವತಿಯಿಂದ 1,85,250 ಧ್ವಜ ತಯಾರಿಸಲು ಸೂಚಿಸಲಾಗಿದ್ದು, ಅಂತಿಮ ಹಂತದಲ್ಲಿದೆ.