Advertisement

ಮಳೆ ಬಂದಾಗ ಅಣಬೆ ಹುಟ್ಟುತ್ತದೆ…. ಶಾಸಕ ಮಠಂದೂರು ಹೇಳಿಕೆಗೆ ಪುತ್ತಿಲ ಬೆಂಬಲಿಗರ ಆಕ್ರೋಶ

09:37 PM Feb 08, 2023 | Team Udayavani |

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಶುಭಕೋರಿ ನಗರದಲ್ಲಿ ಅಳವಡಿಸಿದ ಕಟೌಟ್, ಬ್ಯಾನರ್ ಕುರಿತಂತೆ ಶಾಸಕ ಮಠಂದೂರು ನೀಡಿದ ಹೇಳಿಕೆಯೀಗ ಬಿಜೆಪಿ ಪಕ್ಷದೊಳಗೆ ತಲ್ಲಣ ಸೃಷ್ಟಿಸಿದೆ.

Advertisement

ಬುಧವಾರ ಮಧ್ಯಾಹ್ನ ಶಾಸಕರು ನೀಡಿದ ಹೇಳಿಕೆ ಬೆನ್ನಲ್ಲೇ ಶಾಸಕ ಸಂಜೀವ ಮಠಂದೂರು ವಿರುದ್ಧ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಕಿಡಿ ಕಾರಿದ್ದು ಪಕ್ಷದ ಮಂಡಲ ಸಮಿತಿ ಅಧ್ಯಕ್ಷರು ಸೇರಿದಂತೆ ಪ್ರಮುಖರಿಗೆ ದೂರವಾಣಿ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಆಡಿಯೋ ತುಣುಕುಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಏನಿದು ಪ್ರಕರಣ
ಪೆ.11 ರಂದು ಪುತ್ತೂರಿಗೆ ಅಮಿತ್ ಶಾ ಭೇಟಿಗೆ ಶುಭಕೋರಿ ಅರುಣ್‌ ಕುಮಾರ್ ಪುತ್ತಿಲ ಹೆಸರಿನಲ್ಲಿ ಅವರ ಬೆಂಬಲಿಗರು ನಗರದ ವಿವಿಧ ಭಾಗದಲ್ಲಿ ಕಟೌಟ್ ಅಳವಡಿಸಿದ್ದಾರೆ. ಅದರಲ್ಲಿ ಶಾಸಕರನ್ನು ಹೊರತುಪಡಿಸಿ ಬಿಜೆಪಿಯ ಜಿಲ್ಲೆ, ರಾಜ್ಯಮಟ್ಟದ ನಾಯಕರ‌ ಭಾವಚಿತ್ರ ಅಳವಡಿಸಲಾಗಿತ್ತು. ಅರುಣ್‌ ಕುಮಾರ್ ಪುತ್ತಿಲ ಅವರನ್ನು ಈ ಭಾರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವಂತೆ ಅವರ ಬೆಂಬಲಿಗರು ಟ್ವಿಟರ್ ಅಭಿಯಾನ ನಡೆಸುತಿದ್ದು ಸುಮಾರು ಐವತ್ತಕ್ಕೂ ಅಧಿಕ ವಾಟ್ಸಪ್ ಗ್ರೂಪ್ ತೆರದು ಸಂದೇಶ ರವಾನಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ಕೂಡ ಪಕ್ಷದೊಳಗೆ ಚರ್ಚೆಗೆ ಈಡು ಮಾಡಿತ್ತು.

ವಿವಾದ ಸೃಷ್ಟಿಸಿದ ಹೇಳಿಕೆ
ಅಮಿತ್ ಶಾ ಅವರಿಗೆ ಶುಭಕೋರಿ ಅಲ್ಲಲ್ಲಿ ಬ್ಯಾನರ್, ಕಟೌಟ್ ಅಳವಡಿಕೆಯ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಸಂಜೀವ ಮಠಂದೂರು ಅವರು, “ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ಇನ್ನೂ ಹೆಚ್ಚು ಅಲಂಕಾರಕ್ಕೆ ಮೆರಗು ಬರುತ್ತದೆ. ಹೊಸ ಹೊಸ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಮಳೆ ಬಂದಾಗ ಅಣಬೆ ಹುಟ್ಟುತ್ತದೆ, ಅದು ಭಾರೀ ಸಮಯ ಬಾಳಿಕೆ ಬರುವುದಿಲ್ಲ. ಮಳೆ ಹೋದಾಗ ಅಣಬೆಯು ಹೋಗುತ್ತದೆ ಎಂದ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಮುಖಂಡ ಚನಿಲ ತಿಮ್ಮಪ್ಪ ಶೆಟ್ಟಿ ಯಾರೇ ಬ್ಯಾನರ್ ಹಾಕಿದರೂ ಸ್ವಾಗತಿಸುತ್ತೇವೆ ಎಂದು ಶಾಸಕರ ಮಾತಿಗೆ ತೆರೆ ಎಳೆಯುವ ಯತ್ನ ಮಾಡಿದರೂ ಮಾತು ಮುಂದುವರಿಸಿದ ಶಾಸಕ ಮಠಂದೂರು ಯಾರೇ ಬ್ಯಾನರ್ ಹಾಕಲಿ, ಯಾರೇ ಸ್ವಾಗತ ಮಾಡಲಿ, ಯಾರೇ ಟ್ವಿಟರ್ ಮಾಡಲಿ ಅದನ್ನು ಬಿಜೆಪಿ ಸ್ವಾಗತಿಸುತ್ತದೆ. ಬಿಜೆಪಿಗೆ ಅದನ್ನು ಜೀರ್ಣ ಮಾಡಿಕೊಳ್ಳುವ ಶಕ್ತಿ ಇದೆ” ಎನ್ನುವ ಮಾತುಗಳನ್ನಾಡಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸ್ತವಾಗಿದೆ.

ಪುತ್ತಿಲ ಬೆಂಬಲಿಗರ ಕೆಂಡ..!
ಶಾಸಕರು ಅಣಬೆಗೆ ಹೋಲಿಸಿದ್ದು ಅರುಣ್ ಪುತ್ತಿಲ ಅವರನ್ನೇ ಎನ್ನುವುದಕ್ಕೆ ಟ್ವಿಟರ್ ಪದ ಬಳಕೆ ಮಾಡಿರುವುದೇ ಅದಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಪುತ್ತಿಲ ಬೆಂಬಲಿಗರ ಕರೆಯ ವೇಳೆಯು ಕೆಲ ಬಿಜೆಪಿ ಮುಖಂಡರು ಅದನ್ನು ಪುಷ್ಠಿಕರಿಸುವ ದಾಟಿಯಲ್ಲಿ ಮಾತನಾಡಿರುವುದು, ಶಾಸಕರು ಆ ರೀತಿ ಹೇಳಿಕೆ ನೀಡಿರುವುದು ಸರಿ ಅಲ್ಲ ಎಂದು ಬಹಿರಂಗವಾಗಿ ಹೇಳಿರುವುದು, ಶಾಸಕರು ಸ್ಪಷ್ಟಿಕರಣ ನೀಡಲಿದ್ದಾರೆ ಎಂದು ಪಕ್ಷದ ಪ್ರಮುಖರೇ ಹೇಳಿರುವುದು ಕೂಡ ಪುತ್ತಿಲ ಅವರನ್ನು ಉದ್ದೇಶಿಸಿಯೇ ಶಾಸಕರು ಹೇಳಿಕೆ ನೀಡಿರುವುದಕ್ಕೆ‌ ಸಾಕ್ಷಿ ಎಂದು ಅರುಣ್ ಪುತ್ತಿಲ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಇದನ್ನೂ ಓದಿ: ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದವನ ರಕ್ಷಿಸಿದ ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next