Advertisement

ರಂಗಕಲೆಯಲ್ಲಿದೆ ಉತ್ತಮ ಸಾಮಾಜಿಕ ಸಂದೇಶ : ಶ್ರೀಸಂಜಯ್‌ ಕುಮಾರ್‌ ಸ್ವಾಮೀಜಿ

01:20 PM Mar 30, 2022 | Team Udayavani |

ದೇವನಹಳ್ಳಿ: ನಾಟಕ ಅಥವಾ ರಂಗಕಲೆಯು ಉತ್ತಮವಾದ ಸಾಮಾಜಿಕ ಸಂದೇಶಗಳನ್ನು ನೀಡುವುದರ ಜೊತೆಗೆ ಜನರನ್ನು ಒಂದು ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿ ಬರುವ ಒಂದೊಂದು ಪಾತ್ರಗಳನ್ನು ಜನರು ತಮ್ಮ ಬದುಕಿಗೆ ಹೋಲಿಸಿ ನೋಡುತ್ತಾರೆ. ಕೆಲವು ಪಾತ್ರಗಳನ್ನು ತಮ್ಮ ಬದುಕಿಗೆ ಅನ್ವಯಿಸಿಕೊಂಡು ಬಿಡುತ್ತಾರೆ. ಜನರ ಯೋಚನಾ ಶಕ್ತಿ ಬದಲಿಸುವ ಸಾಮರ್ಥ್ಯ ನಾಟಕಗಳಲ್ಲಿವೆ ಎಂದು ಶಿರಾ ತಾಲೂಕಿನ ಶಿಡಲಕೋನಾಮಠದ ಶ್ರೀ ಸಂಜಯ್‌ ಕುಮಾರ್‌ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಅಕ್ಲೆಮಲ್ಲೇನಹಳ್ಳಿ ಗ್ರಾಮದಲ್ಲಿ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡಿ, ಕಲೆ ಹಾಗೂ ರಂಗಭೂಮಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ. ಸಂಪನ್ಮೂಲಗಳ ಕೊರತೆ ಮತ್ತು ನಾಟಕ ಆಡುವುದು ಇತ್ತೀಚಿನ ದಿನಗಳಲ್ಲಿ ಕಷ್ಟವಾಗುತ್ತಿದೆ. ಈ ಹಿಂದೆ ಯಕ್ಷಗಾನ, ಹರಿಕಥೆ, ಭಜನೆ, ಪ್ರತಿ ಗ್ರಾಮಗಳಲ್ಲಿ ಪೌರಾಣಿಕ ನಾಟಕಗಳು ನಡೆಯುತ್ತಿದ್ದವು. ಇತ್ತೀಚೆಗೆ ದೃಶ್ಯ ಮಾಧ್ಯಮ ಆವಳಿಯಿಂದ ನಶಿಸುತ್ತಿದೆ. ಯುವ ಜನತೆ ಸಿನಿಮಾ ಗೀಳಿನಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಇದರಿಂದ ಹೊರಬಂದು ಪಠ್ಯೇತರ ಚಟುವಟಿಕೆಗಳಾದ ನಾಟಕ, ರಂಗಕಲೆ, ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ನಾಟಕಗಳಲ್ಲಿ ಬರುವ ಸನ್ನಿವೇಶಗಳನ್ನು ನಿಜ ಜೀವನದಲ್ಲಿ ಶೇ.10ರಷ್ಟು ಪಾಲನೆ ಮಾಡಬೇಕು ಎಂದರು.

ನಾಟಕದಲ್ಲಿ ಕಲೆ, ಸಂಸ್ಕೃತಿ ಪ್ರತಿಬಿಂಬ:
ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ನಾಟಕ ಪ್ರತಿಬಿಂಬಿಸುತ್ತವೆ. ರಾಮಾಯಣ, ಮಹಾಭಾರತ ನಾಟಕಗಳಿಂದ ಜನರ ಮನಸ್ಸು ಪರಿವರ್ತನೆ ಮಾಡಲು ಸಾಧ್ಯವಾಗುತ್ತದೆ. ನಾಟಕಗಳು ಗ್ರಾಮೀಣ ಪ್ರದೇಶದ ಜೀವಾಳವಾಗಿದೆ ಎಂದು ಹೇಳಿದರು.

ಬಿಬಿಎಂಪಿ ಮಾಜಿ ಸದಸ್ಯ ಆನಂದ್‌ ಕುಮಾರ್‌ ಮಾತನಾಡಿ, ಸಂಜೆ ಆದ ತಕ್ಷಣ ಕಿರುತೆರೆಯ ಧಾರವಾಹಿಯನ್ನು ವೀಕ್ಷಿಸಲು ನಾಗರಿಕರು ಮುಂದಾಗಿದ್ದಾರೆ. ಯುವಕರು ಪೌರಾಣಿಕ ನಾಟಕಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ನಾಟಕ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.

ಸಂಸ್ಕೃತಿ ಅರಿವಿಗೆ ನಾಟಕ ಪೂರಕ:
ಜಿಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್‌ ಮಾತನಾಡಿ, ಸಮಾಜಕ್ಕೆ ಕಲಾವಿದರು ಸಲ್ಲಿಸಿರುವ ಸೇವೆ ಯಾರೊಬ್ಬರೂ ಮರೆಯುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆಗಳು ಹೆಚ್ಚು ಪ್ರಚಲಿತದಲ್ಲಿದ್ದು, ಜಾನಪದ ಮೂಲಕ ಜನರನ್ನು ಮನರಂಜಿಸುತ್ತಿದ್ದಾರೆ. ಪೌರಾಣಿಕ ನಾಟಕಗಳ ಪ್ರದರ್ಶನದಿಂದ ಯುವಕರಿಗೆ ದೇಶದ ಸಂಸ್ಕೃತಿ, ಶ್ರೀಮಂತಿಕೆಯನ್ನು ತಿಳಿಸಿಕೊಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

Advertisement

ಗ್ರಾಪಂ ಮಾಜಿ ಅಧ್ಯಕ್ಷ ಎ.ಚಂದ್ರಶೇಖರ್‌, ಕೆಪಿಸಿಸಿ ಸದಸ್ಯರಾದ ಎ.ಚಿನ್ನಪ್ಪ, ಪಟಾಲಪ್ಪ, ಗ್ರಾಪಂ ಸದಸ್ಯ ಗೋಪಾಲ್‌, ಮುಖಂಡರಾದ ನಾರಾಯಣಪ್ಪ, ಸೋಮಣ್ಣ, ಸುಬ್ರಮಣಿ, ಆಂಜಿನಪ್ಪ, ಅನಿಲ್‌, ಕೃಷ್ಣಪ್ಪ, ರಾಮಾಂಜಿನಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next