ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಿರಿಯ ಪುತ್ರ ಸಂಜಯ್ ಗಾಂಧಿ ಮಗಳು ಎಂದು ಹೇಳಿಕೊಂಡು ಸುದ್ದಿಯಾಗಿದ್ದ 48 ವರ್ಷದ ಪ್ರಿಯಾ ಸಿಂಗ್ ಪೌಲ್ ಇದೀಗ ಮಧುರ್ ಭಂಡಾರ್ ಕರ್ ನಿರ್ದೇಶನದ “ಇಂದು ಸರ್ಕಾರ್” ಸಿನಿಮಾ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಇಂದು ಸರ್ಕಾರ್ ಸಿನಿಮಾ ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಸೋಮವಾರ ನಿರಾಕರಿಸಿದ್ದು, ಸುಪ್ರೀಂಕೋರ್ಟ್ ಪ್ರಿಯಾ ಸಿಂಗ್ ಪೌಲ್ ಅರ್ಜಿಯ ವಿಚಾರಣೆ ನಡೆಸುವ ದಿನಾಂಕ ಪ್ರಕಟಿಸಲು ನಿರಾಕರಿಸಿದೆ.
ಇಂದು ಸರ್ಕಾರ್ ಸಿನಿಮಾದಲ್ಲಿ ತನ್ನ ತಂದೆ ಸಂಜಯ್ ಗಾಂಧಿ ಹಾಗೂ ಅಜ್ಜಿ ಇಂದಿರಾ ಬಗ್ಗೆ ಮಾನಹಾನಿಕಾರವಾಗಿ ಬಿಂಬಿಸಲಾಗಿದೆ. ಅಲ್ಲದೇ ಸತ್ಯಕ್ಕೆ ದೂರವಾದ ಮಾಹಿತಿ ಸಿನಿಮಾದಲ್ಲಿದೆ ಎಂದು ಪೌಲ್ ದೂರಿದ್ದಾರೆ. ಇಂದು ಸರ್ಕಾರ್ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ.
ನನ್ನ ಜನನ ಪ್ರಮಾಣಪತ್ರ ಹಾಗೂ ದತ್ತು ಸಂಬಂಧಿ ಕಾಗದಪತ್ರಗಳನ್ನು ಪಡೆಯಲು ನಾನು ಯತ್ನಿಸುತ್ತಿದ್ದೇನೆ. ಆದರೆ ಸಿನಿಮಾದ ಟ್ರೈಲರ್ ನಲ್ಲಿ ವಿವಾದಿತ ಅಂಶಗಳು ಇರುವ ಮಾಹಿತಿ ಹಿನ್ನೆಲೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದೇನೆ ಎಂದು ಆಕೆ ಹೇಳಿದ್ದಾಳೆ.
ಇತ್ತೀಚೆಗಷ್ಟೇ ಪೌಲ್ ಸುದ್ದಿಗೋಷ್ಠಿ ನಡೆಸಿ, ನಾನು ಸಂಜಯ್ ಗಾಂಧಿ ಅವರ ಪುತ್ರಿ, ಇಂದಿರಾಗಾಂಧಿ ಅವರ (ರಹಸ್ಯ) ಮೊಮ್ಮಗಳು! ಆದರೆ ನನ್ನನ್ನು ಬೇರೆಯವರು ದತ್ತು ತೆಗೆದುಕೊಂಡು ಬೆಳೆಸಿದ್ದರು. ನಾನು ಬೆಳೆದು ದೊಡ್ಡವಳಾದ ಮೇಲೆ ನನಗೆ ಸಂಜಯ್ ಗಾಂಧಿ ತಂದೆ ಎಂಬುದನ್ನು ತಿಳಿಸಲಾಯಿತು ಎಂದು ಪೌಲ್ ಹೇಳಿಕೊಂಡಿದ್ದರು. 1968 ರಲ್ಲಿ ಆಕೆಯನ್ನು ದತ್ತು ತೆಗೆದುಕೊಳ್ಳಲಾಯಿತು ಎಂದು ಸಾಕು ತಂದೆ ತಾಯಿಗಳಾದ ಶೀಲಾ ಸಿಂಗ್ ಪೌಲ್ ಮತ್ತು ಬಲ್ವಂತ್ ಪೌಲ್ ಅವರು ತಿಳಿಸಿದ್ದಾರೆ.