ದಕ್ಷಿಣ ಭಾರತ ಚಿತ್ರರಂಗದ ಸಾಲು, ಸಾಲು ಸಿನಿಮಾಗಳ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್ ಬೆಕ್ಕಸ ಬೆರಗಾಗಿ ಹೋಗಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ, ರಾಜಮೌಳಿಯ ಆರ್ ಆರ್ ಆರ್ ಹಾಗೂ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ಬಿಡುಗಡೆಯಾಗುವ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಬಾಲಿವುಡ್ ಗೂ ಇದೊಂದು ಸವಾಲಾಗಿ ಪರಿಣಮಿಸಿದೆ. ಭಾರತದ ಚಿತ್ರರಂಗವೆಂದರೆ ಅದು ಬಾಲಿವುಡ್ ಎಂಬ ಭಾವನೆ ಕೊಚ್ಚಿಹೋದಂತಾಗಿದೆ. ಕೆಜಿಎಫ್ 2 ಚಿತ್ರದ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್ ದಿಗ್ಗಜರು ಕೂಡಾ ನಾವೂ ಕೂಡಾ ಬದಲಾಗಬೇಕಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವುದೇ ಅದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ಹೆಚ್ಚಿದ ಕೋವಿಡ್ ಭೀತಿ: ಡಿಲ್ಲಿ- ಪಂಜಾಬ್ ಪಂದ್ಯ ಪುಣೆಯಿಂದ ಮುಂಬೈಗೆ ಶಿಫ್ಟ್
ಕೆಜಿಎಫ್ ಚಾಪ್ಟರ್ 2ರಲ್ಲಿ ಅಧೀರನ ಪಾತ್ರದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿರುವ ಸಂಜಯ್ ದತ್ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್ ಸಿನಿಮಾರಂಗಕ್ಕೂ, ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರೀ ನಡುವೆ ಇರುವ ವ್ಯತ್ಯಾಸ ಏನು ಎಂಬ ಬಗ್ಗೆ ಬಿಚ್ಚುನುಡಿಗಳನ್ನಾಡಿದ್ದು, ಅದರ ಸಾರಾಂಶ ಇಲ್ಲಿದೆ..
ಹಿಂದಿ ಸಿನಿಮಾ ಇಂಡಸ್ಟ್ರಿ ನಿಜಜೀವನಕ್ಕಿಂತಲೂ ದೊಡ್ಡದಾದ ಹೀರೋಯಿಸಂ ಅನ್ನು ಮರೆತುಬಿಟ್ಟಿದೆ. ಆದರೆ ದಕ್ಷಿಣ ಭಾರತದ ಚಿತ್ರರಂಗ ಹೀರೋಯಿಸಂನ್ನು ಮರೆತಿಲ್ಲ. ಕೌಟುಂಬಿಕ ಅಥವಾ ರೋಮ್ಯಾಂಟಿಕ್ ಸಿನಿಮಾಗಳು ಕೆಟ್ಟದ್ದು ಅಂತ ನಾನು ಹೇಳಲ್ಲ. ಈ ನಡುವೆ ನಾವು ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನದ ಅತೀ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗವನ್ನು ಯಾಕೆ ಮರೆತುಬಿಟ್ಟೆವು. ಹಿಂದಿನ ಟ್ರೆಂಡ್ ಬಾಲಿವುಡ್ ಸಿನಿಮಾರಂಗದಲ್ಲಿ ಮತ್ತೆ ಮರಳಲಿದೆ ಎಂಬ ವಿಶ್ವಾಸ ಇದೆ.
ಈ ಹಿಂದೆ ಬಾಲಿವುಡ್ ನಲ್ಲಿ ಪ್ರತ್ಯೇಕ ನಿರ್ಮಾಪಕರಿದ್ದರು. ಬಳಿಕ ಕಾರ್ಪೋರೇಟ್ ಪದ್ಧತಿ ಬಂದ ನಂತರ ಸಿನಿಮಾ ನಿರ್ಮಾಣದಲ್ಲಿ ಹಸ್ತಕ್ಷೇಪಕ್ಕೆ ಕಾರಣವಾಯಿತು. ಕಾರ್ಪೋರೇಟ್ ಪದ್ಧತಿ ಒಳ್ಳೆಯದು. ಆದರೆ ನಮ್ಮ ಸಿನಿಮಾಗಳ ಅಭಿರುಚಿಯಲ್ಲಿ ಅವರು ಮಧ್ಯಪ್ರವೇಶಿಸಬಾರದು ಎಂಬುದು ಸಂಜಯ್ ದತ್ ಅಭಿಪ್ರಾಯ.
ಉದಾಹರಣೆಗೆ ಎಸ್ ಎಸ್ ರಾಜಮೌಳಿ ಅವರನ್ನು ಆಯ್ಕೆ ಮಾಡಿಕೊಳ್ಳುವ ನಿರ್ಮಾಪಕರಿಗೆ ಅವರ ಮೇಲೆ ಸಂಪೂರ್ಣ ನಂಬಿಕೆಯನ್ನು ಇಟ್ಟಿರುತ್ತಾರೆ. ಬಾಲಿವುಡ್ ನಲ್ಲಿಯೂ ಹಿಂದೆ ಗುಲ್ಶನ್ ರಾಯ್, ಯಶ್ ಚೋಪ್ರಾ, ಸುಭಾಶ್ ಘಾಯ್ ಮತ್ತು ಯಶ್ ಜೋಹರ್ ಅವರಂತಹ ನಿರ್ಮಾಪಕರಿದ್ದರು. ಅವರು ನಿರ್ಮಾಣ ಮಾಡಿದ ಸಿನಿಮಾಗಳನ್ನು ಗಮನಿಸಿ. ದಕ್ಷಿಣ ಭಾರತದವರು ಪೇಪರ್ ನಲ್ಲಿರುವ ಸ್ಕ್ರಿಪ್ಟ್ ನೋಡುತ್ತಾರೆ. ಬಾಲಿವುಡ್ ನಲ್ಲಿ ಸ್ಕ್ರಿಪ್ಟ್ ನಲ್ಲಿ ಲಾಭದ ಲೆಕ್ಕಚಾರ ನೋಡುತ್ತೇವೆ ಇದೇ ನಮಗೂ, ಅವರಿಗೂ ಇರುವ ವ್ಯತ್ಯಾಸ ಎಂಬುದು ದತ್ ವಿಶ್ಲೇಷಣೆಯಾಗಿದೆ.