ಬೆಂಗಳೂರು: ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗರ್ಲಾನಿ, ನಿರ್ಮಾಪಕಿ ವಂದನಾ ಜೈನ್ ವಿರುದ್ಧ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಶನಿವಾರ ದೂರು ನೀಡಿದ್ದಾರೆ.
“ನಾನು ಹಲ್ಲೆ ನಡೆಸಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಪಬ್‌ನಲ್ಲಿ ನನ್ನ ತಾಯಿ ಬಗ್ಗೆ ವಂದನಾ ಕೆಟ್ಟದಾಗಿ ಮಾತನಾಡಿದ್ದರು. ಬಳಿಕ ಆಕೆಯೇ ಪೊಲೀಸರಿಗೆ ನನ್ನ ವಿರುದ್ಧ ದೂರು ನೀಡಿದ್ದಾಳೆ’ ಎಂದು ಸಂಜನಾ ನಿರ್ಮಾಪಕಿ ವಂದನಾ ವಿರುದ್ಧ ದೂರು ನೀಡಿದ್ದಾರೆ’. ಅದನ್ನು ಸಹ ಎನ್‌ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ಎಂದು ಪರಿಗಣಿಸಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಹೇಳಿದರು.
ಕಬ್ಬನ್‌ಪಾರ್ಕ್ ಪೊಲೀಸರು ಡಿ.24ರಂದು ತಡರಾತ್ರಿ 2 ಗಂಟೆಯಲ್ಲಿ ಕರೆ ಮಾಡಿ, ವಂದನಾ ದೂರು ಕೊಟ್ಟಿರುವ ಸಂಬಂಧ ತಕ್ಷಣವೇ ಠಾಣೆಗೆ ಬರುವಂತೆ ಸೂಚಿಸಿದ್ದರು. ಅದಕ್ಕೆ ನಾನು ಆಕ್ಷೇಪಿಸಿದ್ದರೂ ಸಹ ಹತ್ತಾರು ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೆ, “ವಂದನಾ ತನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದು, ಪೊಲೀಸರು ಸಹ ಅದೇ ರೀತಿ ವರ್ತಿಸಿದ್ದರು. ಹೀಗಾಗಿ, ಮಧ್ಯರಾತ್ರಿ ಠಾಣೆಗೆ ಹೋಗಲು ಹಿಂಜರಿದೆ. ತನಗೆ ತಡರಾತ್ರಿ ಕರೆ ಮಾಡಿದ್ದ ಪೊಲೀಸ್ ಅಧಿಕಾರಿ ಹೆಸರನ್ನು ಡಿಸಿಪಿ ಅವರ ಗಮನಕ್ಕೆ ತಂದಿದ್ದೇನೆ. ಅಲ್ಲದೇ, ವಂದನಾ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಟ್ಟಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ.
ತನ್ನ ಮರ್ಯಾದೆಗೆ ಚ್ಯುತಿ ತರಲು ವಂದನಾ ಈ ರೀತಿ ಮಾಡುತ್ತಿದ್ದಾರೆ’ ಎಂದು ಸಂಜನಾ ದೂರಿನಲ್ಲಿ ಆರೋಪಿಸಿದ್ದಾರೆ. ಈ ನಡುವೆ, ಪೊಲೀಸರು ತಡರಾತ್ರಿ ಸಂಜನಾಗೆ ಹತ್ತಾರು ಬಾರಿ ಕರೆ ಮಾಡಿದ ಆರೋಪ ಸಂಬಂಧ ಕಬ್ಬನ್ ಪಾರ್ಕ್ ಇನ್‌ಸ್ಪೆಕ್ಟರ್ ಭರತ್ ಅವರಿಗೆ ವಿವರಣೆ ನೀಡುವಂತೆ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಸೂಚಿಸಿದ್ದಾರೆ.