ಬೆಂಗಳೂರು: ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಸಂಜನಾ ಗಲ್ರಾನಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ತಮ್ಮ ಆಪ್ತ ಸ್ನೇಹಿತನ ವಿರುದ್ಧವೇ ದೂರು ನಿಡುವ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕ್ಯಾಸಿನೊಗಳಲ್ಲಿ ಹಣ ಹೂಡಿಕೆ ಹೆಸರಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ವಿರುದ್ಧ ಸ್ಯಾಂಡಲ್ವುಡ್ ಸ್ಟಾರ್ ನಟಿ ಸಂಜಾನಾ ದೂರು ನೀಡಿದ್ದಾರೆ.
ನಾನು ಗೋವಾ ಮತ್ತು ಕೊಲಂಬೊದ ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಲಾಭಗಳಿಸಬಹುದು ಎಂದು ರಾಹುಲ್ ಆಮಿಷ ಒಡ್ಡಿದ್ದರಂತೆ. ರಾಹುಲ್ ಮಾತನ್ನ ನಂಬಿ ಥೋನ್ಸೆ ಸೇರಿದಂತೆ ಮೂವರ ಖಾತೆಗಳಿಗೆ ಹಣ ವಗಾರ್ವಣೆ ಮಾಡಿರುವುದಾಗಿ ಸಂಜನಾ ಆರೋಪಿಸಿದ್ದಾರೆ.
ತಾವು ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಲಾಭ ಕೊಟ್ಟಿಲ್ಲ. ಹಣ ಕೇಳಿದರೂ ವಾಪಸ್ ಹಿಂದಿರುಗಿಸಿಲ್ಲ. ಜೊತೆಗೆ ತಮ್ಮ ಘನತೆಗೆ ಧಕ್ಕೆ ತರುವಂತೆ ಆರೋಪಗಳನ್ನ ಮಾಡಿರುವುದಾಗಿ ಸಂಜನಾ ರಾಹುಲ್ ಥೋನ್ಸೆ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿದ 4ನೇ ಎಸಿಎಂಎಂ ಕೋರ್ಟ್ ತನಿಖೆ ನಡೆಸುವಂತೆ ಇಂದಿರಾನಗರ ಪೊಲೀಸರಿಗೆ ಆದೇಶಿಸಿದೆ.