Advertisement

2 ವರ್ಷಗಳ ಬಳಿಕ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ ಸಾನಿಯಾಗೆ ಗೆಲುವಿನ ಶುಭಾರಂಭ

10:08 AM Jan 15, 2020 | Team Udayavani |

ಹೋಬರ್ಟ್‌: ಡಬ್ಲ್ಯುಟಿಎ ಸರ್ಕ್ನೂಟ್‌ಗೆ ಮರಳಿರುವ ಭಾರತದ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಉಕ್ರೇನಿನ ನಾದಿಯಾ ಕಿಚೆನಾಕ್‌ ಜತೆಗೂಡಿ ಆಡುತ್ತಿರುವ ಸಾನಿಯಾ ಕಠಿನ ಪಂದ್ಯವೊಂದರಲ್ಲಿ ಜಯ ಸಾಧಿಸಿ ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕೂಟದ ಡಬಲ್ಸ್‌ ನಲ್ಲಿ ಕ್ವಾರ್ಟರ್‌ಫೈನಲಿಗೇರಿದ್ದಾರೆ.

Advertisement

ಎರಡು ವರ್ಷಗಳ ಬಳಿಕ ಟೆನಿಸ್‌ ಕಣಕ್ಕೆ ಮರಳಿದ ಸಾನಿಯಾ ಮತ್ತು ಕಿಚೆನಾಕ್‌ ಅವರು ಜಾರ್ಜಿಯಾದ ಒಕ್ಸಾನಾ ಕಾಲಾಶ್ನಿಕೋವಾ ಮತ್ತು ಜಪಾನಿನ ಮಿಯು ಕಾಟೊ ಅವರನ್ನು 2-6, 7-6 (3), 10-3 ಸೆಟ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲಿಗೇರಿದರು. ಈ ಹೋರಾಟ ಒಂದು ತಾಸು ಮತ್ತು 41 ನಿಮಿಷಗಳವರೆಗೆ ಸಾಗಿತ್ತು.

ಸಾನಿಯಾ-ಕಿಚೆನಾಕ್‌ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ವನಿಯಾ ಕಿಂಗ್‌ ಮತ್ತು ಕ್ರಿಸ್ಟಿನಾ ಮೆಕಾಲೆ ಅವರನ್ನು ಎದುರಿಸಲಿದ್ದಾರೆ. ವನಿಯಾ-ಕ್ರಿಸ್ಟಿನಾ ಅವರು ನಾಲ್ಕನೇ ಶ್ರೇಯಾಂಕದ ಸ್ಪೇನ್‌ನ ಜಾರ್ಜಿಯಾ ಗಾರ್ಸಿಯಾ ಪೆರೆಜ್‌ ಮತ್ತು ಸಾರಾ ಸೊರಿಬೆಸ್‌ ಟೋರ್ಮೊ ಅವರನ್ನು ಉರುಳಿಸಿದ್ದಾರೆ.

ವಿಶೇಷ ದಿನ: ಸಾನಿಯಾ
ಎರಡು ವರ್ಷ ಟೆನಿಸ್‌ ಕಣದಿಂದ ಹೊರಗಿದ್ದ ವೇಳೆ 33ರ ಹರೆಯದ ಸಾನಿಯಾ ಕೆಲವೊಮ್ಮೆ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. 2018ರ ಎಪ್ರಿಲ್‌ನಲ್ಲಿ ಪುತ್ರ ಇಜಾನ್‌ಹುಟ್ಟಿದ ಬಳಿಕ ಟೆನಿಸ್‌ ಕೂಟದಿಂದ ದೂರವೇ ಉಳಿಯಬೇಕಾಯಿತು. ಇಂದು ನನ್ನ ಬಾಳ್ವೆಯ ವಿಶೇಷ ದಿನಗಳಲ್ಲಿ ಒಂದಾಗಿದೆ. ಸುದೀರ್ಘ‌ ಸಮಯದ ಬಳಿಕ ನನ್ನ ಮೊದಲ ಟೆನಿಸ್‌ ಆಟವನ್ನು ಹೆತ್ತವರು ಮತ್ತು ಪುಟ್ಟ ಕಂದ ವೀಕ್ಷಿಸಿರುವುದು ಖುಷಿ ನೀಡಿದೆ. ಪಂದ್ಯ ಗೆದ್ದಿರುವುದು ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಪಂದ್ಯದ ಬಳಿಕ ಸಾನಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next