Advertisement
ಶುಕ್ರವಾರದ ಸೆಮಿಫೈನಲ್ ಮುಖಾಮುಖೀ ಯಲ್ಲಿ ದ್ವಿತೀಯ ಶ್ರೇಯಾಂಕದ ಸಾನಿಯಾ ಮಿರ್ಜಾ-ಇವಾನ್ ಡೋಡಿಗ್ ಸೇರಿಕೊಂಡು ಒಂದು ಗಂಟೆ, 18 ನಿಮಿಷಗಳ ಹೋರಾಟದ ಬಳಿಕ ತವರಿನ ನೆಚ್ಚಿನ ಜೋಡಿ ಎನಿಸಿದ್ದ ಸಮಂತಾ ಸ್ಟೋಸರ್-ಸ್ಯಾಮ್ ಗ್ರೋತ್ ವಿರುದ್ಧ 6-4, 2-6, 1-0 (10-5) ಅಂತರದಿಂದ ಗೆದ್ದು ಬಂದರು.
ಸಾನಿಯಾ ಮಿರ್ಜಾ ಈವರೆಗೆ 6 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದು, ಇದರಲ್ಲಿ 3 ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಗಳಾಗಿವೆ. ಇದರಲ್ಲಿ ಒಂದು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಕೂಡ ಸೇರಿದೆ. ಅದು 2009ರ ಮುಖಾಮುಖೀಯಾಗಿತ್ತು. ಭಾರತದವರೇ ಆದ ಮಹೇಶ್ ಭೂಪತಿ ಜತೆಗೂಡಿ ಆಡಿದ ಸಾನಿಯಾ ಮಿರ್ಜಾ ಫೈನಲ್‌ನಲ್ಲಿ ನಥಾಲಿ ಡೆಶಿ-ಆ್ಯಂಡಿ ರಾಮ್ ವಿರುದ್ಧ ಜಯ ದಾಖಲಿಸಿದ್ದರು.
Related Articles
Advertisement
ಸಾನಿಯಾ ಮಿರ್ಜಾ-ಇವಾನ್ ಡೋಡಿಗ್ ಜೋಡಿಗೆ ಕಳೆದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಎದುರಾಗಿತ್ತು. ಆದರೆ ಫೈನಲ್‌ನಲ್ಲಿ ಇವರು ಮಾರ್ಟಿನಾ ಹಿಂಗಿಸ್-ಲಿಯಾಂಡರ್ ಪೇಸ್ ಜೋಡಿಗೆ ಶರಣಾದರು.
ಭರ್ಜರಿ ಸೆಮಿ ಫೈಟ್ಸೆಮಿಫೈನಲ್ ಸ್ಪರ್ಧೆಯ ಮೊದಲ ಸೆಟ್‌ನಲ್ಲಿ ಸಾನಿಯಾ-ಡೋಡಿಗ್ ಜೋಡಿಯ ಸರ್ವ್ ಅತ್ಯುತ್ತಮ ಮಟ್ಟದಲ್ಲಿತ್ತು. ಆದರೆ ದ್ವಿತೀಯ ಸೆಟ್‌ನ 4ನೇ ಹಾಗೂ 9ನೇ ಗೇಮ್ ವೇಳೆ ಸಾನಿಯಾ ಸರ್ವ್ ಕಳೆದು ಕೊಂಡರು. ಜತೆಗೆ ಸೆಟ್ ಕೂಡ ಕೈಜಾರಿತು. ಸ್ಪರ್ಧೆ ಟೈ-ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. ಇಲ್ಲಿ 3-3ರ ಸಮಬಲದ ಬಳಿಕ ಸಾನಿಯಾ- ಡೋಡಿಗ್ ಸತತ 5 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡರು. ಎದುರಾಳಿ ಗ್ರೋತ್ ಮೊದಲ ಸರ್ವ್‌ನಲ್ಲೇ ಎಡವಿದರು. ಇದಕ್ಕೆ ಭಾರೀ ಬೆಲೆ ತೆರಬೇಕಾಯಿತು. ಸಾನಿಯಾ ಮಿರ್ಜಾ ಈ ಪಂದ್ಯಾ ವಳಿಯಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್, ಪುರವ್ ರಾಜ, ದಿವಿಜ್ ಸರಣ್, ಜೂನಿಯರ್‌ಗಳಾದ ಝೀಲ್ ದೇಸಾಯಿ, ಸಿದ್ಧಾಂತ್ ಬಂಥಿಯ ಅವರೆಲ್ಲ ಬಹಳ ಬೇಗನೆ ನಿರ್ಗಮಿಸಿದ್ದಾರೆ.