ಮೆಲ್ಬರ್ನ್: ಭಾರತದ ತಾರಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಗ್ರ್ಯಾನ್ಸ್ಲಾಮ್ ಅಭಿಯಾನ ಸೋಲಿನೊಂದಿಗೆ ಕೊನೆಗೊಂಡಿದೆ. ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಜೋಡಿ ಚಾಂಪಿಯನ್ ಎನಿಸಿಕೊಳ್ಳಲು ವಿಫಲವಾಯಿತು.
ತನ್ನ ಪ್ರಪ್ರಥಮ ಮಿಕ್ಸೆಡ್ ಜತೆಗಾರ ರೋಹನ್ ಬೋಪಣ್ಣ ಅವರೊಡಗೂಡಿ ಸಾನಿಯಾ ಮಿರ್ಜಾ ಕಣಕ್ಕಿಳಿದಿದ್ದರು. ಶುಕ್ರವಾರ ನಡೆದ ಫೈನಲ್ನಲ್ಲಿ ಬ್ರಝಿಲ್ನ ಲೂಸಿಯಾ ಸ್ಟೆಫಾನಿ-ರಫೆಲ್ ಮ್ಯಾಟೋಸ್ ವಿರುದ್ಧ ಭಾರತೀಯ ಜೋಡಿ 6-7 (2), 2-6 ಅಂತರದ ಸೋಲನುಭವಿಸಿತು. ಗ್ರ್ಯಾನ್ಸ್ಲಾಮ್ನಲ್ಲಿ ಸಾನಿಯಾ ಅವರ ಗೆಲುವಿನ ಸ್ಮರಣೀಯ ವಿದಾಯದ ನಿರೀಕ್ಷೆ ಹುಸಿಯಾಯಿತು.
ಭಾವುಕರಾದ ಸಾನಿಯಾ
“ನಾನೀಗ ಅಳುತ್ತಿದ್ದೇನಾದರೆ ಅದು ಸಂತೋಷದ ಕಣ್ಣೀರು ಎಂದು ಭಾವಿಸಬೇಕು. ಆದರೆ ಹಾಗೆಂದು ಸುಮ್ಮನೆ ಹೇಳಿಕೊಳ್ಳುವುದು. ನಾನಿನ್ನೂ ಒಂದೆರಡು ಟೆನಿಸ್ ಕೂಟಗಳಲ್ಲಿ ಪಾಲ್ಗೊಳ್ಳಲಿಕ್ಕಿದೆ. ಆದರೆ ವೃತ್ತಿಪರ ಟೆನಿಸ್ ಬದುಕು ಆರಂಭಗೊಂಡದ್ದು ಮೆಲ್ಬರ್ನ್ನಲ್ಲಿ. ಇಲ್ಲಿಯೇ ಒಂದು ಹಂತದ ಅಭಿಯಾನ ಕೊನೆಗೊಳ್ಳುತ್ತಿದೆ’ ಎಂದು ಸಾನಿಯಾ ಮಿರ್ಜಾ ಕಣ್ಣೀರು ತಡೆಹಿಡಿಯಲಾಗದೆ ಪ್ರತಿಕ್ರಿಯಿಸಿದರು.”ರೋಹನ್ ಬೋಪಣ್ಣ ನನ್ನ ಪ್ರಪ್ರಥಮ ಮಿಶ್ರ ಡಬಲ್ಸ್ ಜತೆಗಾರ.
ಆಗ ನನಗೆ 14 ವರ್ಷ. ನಾವಿಬ್ಬರು ನ್ಯಾಶನಲ್ ಚಾಂಪಿಯನ್ ಆಗಿ ಮೂಡಿಬಂದಿದ್ದೆವು. ಇದು 22 ವರ್ಷಗಳ ಹಿಂದಿನ ಕತೆ. ಈ ಸುದೀರ್ಘ ಅಭಿಯಾನದಲ್ಲಿ ನನಗೆ ಬೋಪಣ್ಣ ಅವರಿಗಿಂತ ಉತ್ತಮ ಜತೆಗಾರ ಸಿಕ್ಕಿಲ್ಲ. ಅವರೋರ್ವ ಉತ್ತಮ ವ್ಯಕ್ತಿ. ನನ್ನ ಅತ್ಯುತ್ತಮ ದೋಸ್ತಿ. ಅವರೊಡನೆ ನಾನು ಗ್ರ್ಯಾನ್ಸ್ಲಾಮ್ ಟೆನಿಸ್ಗೆ ವಿದಾಯ ಹೇಳುತ್ತಿರುವುದಕ್ಕೆ ಖುಷಿಯೂ ಆಗುತ್ತಿದೆ’ ಎಂಬುದಾಗಿ ಸಾನಿಯಾ ಹೇಳಿದರು.
Related Articles
“ಕಾರಾ ಬ್ಲ್ಯಾಕ್ ನನ್ನ ಅತ್ಯುತ್ತಮ ಸ್ನೇಹಿತೆ. ನನ್ನ ಅತ್ಯುತ್ತಮ ಜತೆಗಾರ್ತಿಯರಲ್ಲೊಬ್ಬರು. ಆದರೆ ಒಂದಂತೂ ಸತ್ಯ… ನಿಮ್ಮ ಸಹಕಾರವಿಲ್ಲದೆ ನನಗೆ ಏನನ್ನೂ ಸಾಧಿಸಲಾಗುತ್ತಿರಲಿಲ್ಲ…’ ಎಂದು ಸಾನಿಯಾ ಮಿರ್ಜಾ ತಮ್ಮ ಜತೆಗಾರರಿಗೆಲ್ಲ ಕೃತಜ್ಞತೆ ಸಲ್ಲಿಸಿದರು.
ಮಗನ ಎದುರಲ್ಲಿ…
ಸಾನಿಯಾ ಮಿರ್ಜಾ ಈ ಫೈನಲ್ ಪಂದ್ಯವನ್ನು 4 ವರ್ಷದ ಮಗ ಇಝಾನ್ ಎದುರು ಆಡಿದರು. ಜತೆಗೆ ಕುಟುಂಬದವರು, ಸ್ನೇಹಿತರು, ಟ್ರೇನರ್, ರೋಹನ್ ಬೋಪಣ್ಣ ಅವರ ಪತ್ನಿ ಉಪಸ್ಥಿತರಿದ್ದರು.
“ಮಗನ ಎದುರು ನಾನು ಗ್ರ್ಯಾನ್ಸ್ಲಾಮ್ ಫೈನಲ್ ಪಂದ್ಯ ಆಡುತ್ತೇನೆಂದು ಭಾವಿಸಿದವಳೇ ಅಲ್ಲ. ಇದು ನನ್ನ ಪಾಲಿನ ವಿಶೇಷ ಕ್ಷಣ.
ಆಸ್ಟ್ರೇಲಿಯದಲ್ಲಿರುವ ಕುಟುಂಬ ನನ್ನ ಪಾಲಿಗೆ ಭಾರತೀಯ ವಾತಾವರಣವನ್ನೇ ಮೂಡಿಸಿದೆ’ ಎಂದರು ಸಾನಿಯಾ.