ಅರಂಗಂ ಅಂದರೆ ವೇದಿಕೆ. ಇಟ್ರಂ ಅಂದರೆ ಏರುವಿಕೆ. ಇದು ಅರಂಗೇಟ್ರಂ ಪದಕ್ಕಿರುವ ಶಬ್ದಾರ್ಥ. ಸಾಮಾನ್ಯವಾಗಿ ನೃತ್ಯಗಳ ಪ್ರಥಮ ಸಾರ್ವಜನಿಕ ವೇದಿಕೆ ಪ್ರದರ್ಶನಕ್ಕೆ ಈ ಪದವನ್ನು ಬಳಸುವುದು ವಾಡಿಕೆ. ಆದರೆ ಇಲ್ಲಿ ಸಂಗೀತ ಕಚೇರಿಯ ಚೊಚ್ಚಲ ವೇದಿಕೆಯ ಕಾರ್ಯಕ್ರಮವೊಂದಕ್ಕೆ ಬಳಸುತ್ತಿದ್ದೇನೆ. ಅದು ಜು.21ರ ಸಂಜೆ ಅಂಬಲಪಾಡಿ ಕಪ್ಪೆಟ್ಟಿನಲ್ಲಿರುವ ಡಾ| ಮೋಹನದಾಸ ರಾವ್ ಮನೆಯಲ್ಲಿ ನಡೆದ ಚೊಚ್ಚಲ ಸಂಗೀತ ಕಛೇರಿ. ಅದು ಕಪ್ಪೆಟ್ಟು ಅಂಬಲಪಾಡಿಯಲ್ಲಿ ನಡೆದ ಮೊದಲ ಗೃಹ ಸಂಗೀತ ಕಚೇರಿಯೂ ಹೌದು. ಪ್ರಥಮ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಾಡುಗಾರಿಕೆಯನ್ನು ಅಳಕಿಲ್ಲದೆ ನಡೆಸಿಕೊಟ್ಟವರು ಕು| ನಂದಿತಾ ಭಟ್. ಗಡಹದ್ ಮನೆತನದ ಅರುಣಕಾಂತ ಭಟ್ ಅವರ ಪುತ್ರಿ 15ರ ನಂದಿತಾ. ಶಾಲಾ ವ್ಯಾಸಂಗ ಅಮೆರಿಕದಲ್ಲಿಯಾದರೂ ನಂದಿತಾ, ಕಳೆದ ಐದು ವರ್ಷಗಳಿಂದ ಆನ್‌ಲೈನ್ ಸಂಗೀತ ಪಾಠವನ್ನು ಬೆಂಗಳೂರಿನ ವಿ|ಅರುಣಾ ರಾಜಗೋಪಾಲ್‌ರಿಂದ ಕಲಿಯುತ್ತಿದ್ದಾರೆ. ಸ್ವದೇಶಕ್ಕೆ ಬಂದಾಗಲೆಲ್ಲಾ ಬೆಂಗಳೂರಿಗೆ ಹೋಗಿ ಗುರುಮುಖೇನ ಪ್ರತ್ಯಕ್ಷ ಪಾಠವನ್ನು ಕಲಿಯುತ್ತಿದ್ದಾರೆ. ಚೊಚ್ಚಲ ವೇದಿಕೆ ಕಚೇರಿಯಲ್ಲಿ ನಂದಿತಾ, ಪುರಂದರದಾಸರು, ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರು, ರಾಘವೇಂದ್ರಸ್ವಾಮಿಗಳ ಕೀರ್ತನೆಗಳನ್ನು ಹಾಡಿ ನೆರೆದಿದ್ದ ರಂಜಿಸಿದರು. ಪಿಟೀಲಿನಲ್ಲಿ ಶರ್ಮಿಳಾ ರಾವ್ ಮತ್ತು ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಸಹಕರಿಸಿದರು.
ಜಲಂಚಾರು ರಘುಪತಿ ತಂತ್ರಿ