ಕೊಪ್ಪಳ: ಚೀನಾ ವಿರುದ್ಧ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಕೊಪ್ಪಳದಲ್ಲಿ ವಿಶ್ವದರ್ಜೆಯ ಆಟಿಕೆ ಕ್ಲಸ್ಟರ್ ಆರಂಭಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಗ್ರೀನ್ ಸಿಗ್ನಲ್ ನೀಡಿದ್ದು, 40 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರಕ್ಕೆ ಧನ್ಯವಾದ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಕೊಪ್ಪಳದ ಕಿನ್ನಾಳ ಕಲೆ ವಿಶ್ವ ಪ್ರಸಿದ್ಧಿ ಪಡೆದಿದೆ. ಆಟಿಕೆಗೆ ಭಾರತ ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ. ಆದರೆ, ಚೀನಾದ ಶೇ.80 ಆಟಿಕೆಗಳು ಮಾರುಕಟ್ಟೆ ಆವರಿಸಿಕೊಂಡಿವೆ. ಆಟಿಕೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಹಾಗೂ ದೇಸಿ ಕಲೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕುಕನೂರು ತಾಲೂಕಿನ ಭಾನಾಪುರ ಬಳಿ ಕ್ಲಸ್ಟರ್ ನಿರ್ಮಾಣವಾಗುತ್ತಿದೆ. ಈಗಾಗಲೇ 400 ಎಕರೆ ಭೂಮಿ ಖರೀದಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘಟಕ ಆರಂಭಕ್ಕೆ ಸಕಲ ಪ್ರೋತ್ಸಾಹ ನೀಡಿವೆ. ಪ್ರತಿ ಬಾರಿ ವಿಪಕ್ಷಗಳು ಪ್ರಧಾನಿ ಮೋದಿಯವರು ಎಲ್ಲಿ ಉದ್ಯೋಗ ಸೃಷ್ಟಿಸಿದ್ದಾರೆಂದು ಪ್ರಶ್ನಿಸುತ್ತಿದ್ದರು.
ಇಂದು ಹಿಂದುಳಿದ ಕೊಪ್ಪಳದಲ್ಲಿ ವಿಶ್ವದರ್ಜೆ ಆಟಿಕೆ ಕ್ಲಸ್ಟರ್ ಆರಂಭಿಸುವ ಮೂಲಕ 40 ಸಾವಿರ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಇದಕ್ಕೆ ಕಾರಣವಾದ ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ, ರಾಜ್ಯ ಮಂತ್ರಿಮಂಡಲ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹಾಗೂ ಜಿಲ್ಲೆಯ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂದಿನ ವರ್ಷ ಜೂನ್ ವೇಳೆಗೆ ಮೊದಲ ಉತ್ಪಾದನಾ ಘಟಕ ತಲೆಯೆತ್ತಲಿದ್ದು, 2023ರ ವೇಳೆಗೆ ಸಂಪೂರ್ಣ ಕಾರ್ಯಾರಂಭ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ದೇಸಿಯ ಸಂಸ್ಥೆಯಾದ ಏಕಸ್ ಕಂಪನಿ ಆಟಿಕೆ ಕ್ಲಸ್ಟರ್ ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಕೊಪ್ಪಳ ಜಿಲ್ಲಾಡಳಿತ, ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿ ಉತ್ತಮ ಕಾರ್ಯ ಮಾಡುತ್ತಿವೆ. ಹಿಂದುಳಿದ ನಮ್ಮಂತಹ ಜಿಲ್ಲೆಗಳನ್ನು ಗುರುತಿಸಿ ಉದ್ಯೋಗ ಸೃಷ್ಟಿ, ಉದ್ಯಮ ಸ್ಥಾಪನೆಗೆ ಮುಂದಾಗಿರುವ ಕೇಂದ್ರ-ರಾಜ್ಯ ಸರ್ಕಾರಗಳಿಗೆ ಜಿಲ್ಲೆಯ ಸಮಸ್ತ ಜನತೆ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಆಟಿಕೆ ತಯಾರಿಸುವ ಉದ್ಯಮ ಕೊಪ್ಪಳ ಜಿಲ್ಲೆಯಲ್ಲಿ ಆರಂಭವಾಗುವ ಮೂಲಕ ಕೊಪ್ಪಳ ದೇಶವಲ್ಲದೆ ವಿದೇಶಗಳಲ್ಲೂ ಹೆಸರುವಾಸಿಯಾಗಲಿದೆ. ಚೀನಾಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಆಟಿಕೆ ತಯಾರಿಕಾ ಘಟಕ ನಮ್ಮ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವುದು ಸಂತಸದ ವಿಷಯ
.-ಸಂಗಣ್ಣ ಕರಡಿ, ಕೊಪ್ಪಳ ಸಂಸದ