ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿ ಕಳವುಗೈದಿದ್ದಾರೆ. ಡಿ. 26ರ ನಸುಕಿನ ಜಾವ 2.30ರ ಸುಮಾರಿಗೆ ಘಟನೆ ಸಂಭವಿಸಿದ್ದು, ಕಳ್ಳರ ಚಲನವಲನ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕಳ್ಳರು ದೇವಸ್ಥಾನದ ಬೀಗ ಮುರಿದು ಒಳಹೊಕ್ಕು ಗರ್ಭಗುಡಿಗೆ ನುಗ್ಗಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದೆ, ಬಳಿಕ ಹೊರಗಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಹಣವನ್ನು ಕೊಂಡೊಯ್ದಿದ್ದಾರೆ.
ಇದೇ ದೇಗುಲದ ಆವರಣದಲ್ಲಿರುವ ಶ್ರೀ ಮಹಮ್ಮಾಯಿ ದೇವಸ್ಥಾನದ ಹಂಚು ತೆಗೆದು ಒಳ ಬಂದಿದ್ದ ಕಳ್ಳರು ಅಲ್ಲಿಯೂ ಗರ್ಭಗುಡಿಗೆ ನುಗ್ಗಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗದಾಗ ಹೊರಗಿದ್ದ ದೊಡ್ಡ ಕಾಣಿಕೆ ಡಬ್ಬಿಯನ್ನು ಒಯ್ದಿದ್ದಾರೆ. ಈ ಡಬ್ಬಿಯನ್ನು ವಾಹನದ ಮೂಲಕವೇ ಸಾಗಿ ಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಳಗ್ಗೆ ಅರ್ಚಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅವರು ದೇವಸ್ಥಾನದ ಗುರಿಕಾರ ಚಂದ್ರಹಾಸ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಂಟ್ವಾಳ ಸಿಐ ಟಿ. ಡಿ.ನಾಗರಾಜ್, ಗ್ರಾಮಾಂತರ ಎಸ್.ಐ. ಪ್ರಸನ್ನ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.