Advertisement

ಶ್ರೀಗಂಧ ಕಳವು ತಡೆಗೆ ಬಂದಿದೆ ಮೈಕ್ರೋಚಿಪ್‌!

06:00 AM Aug 09, 2018 | |

ಧಾರವಾಡ: ಕರುನಾಡಿನ ಹೆಸರಿನೊಂದಿಗೆ ಥಳಕು ಹಾಕಿಕೊಂಡಿರುವ ಗಂಧದ ಘಮ (ಶ್ರೀಗಂಧದ ಗಿಡ,ಮರ) ಈಗ ರಾಜ್ಯದ ಯಾವ ಜಿಲ್ಲೆಯಲ್ಲೂ ಉಳಿ ದುಕೊಂಡಿಲ್ಲ. ಹೀಗಾಗಿ ಮತ್ತೆ ಗಂಧದ ಉತ್ಪಾದನೆ ಹೆಚ್ಚಿಸಲು ನೂತನ ಸಮ್ಮಿಶ್ರ ಸರ್ಕಾರ ಸಜ್ಜಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ರೈತರು ಗಂಧ ಬೆಳೆಯುವಂತೆ ಮಾಡಲು ಹೊಸ ಯೋಜನೆ ರೂಪಿಸುತ್ತಿದೆ.

Advertisement

ಹಾಡಹಗಲೇ ಮನೆಯಂಗಳದ ಗಂಧದ ಮರವನ್ನೇ ಕದ್ದುಕೊಂಡು ಹೋಗುವ ಈ ದಿನಗಳಲ್ಲಿ ರೈತರ ಹೊಲದಲ್ಲಿ ಗಂಧ ಬೆಳೆಸುವ ಯತ್ನವನ್ನು ಸರ್ಕಾರ ಮಾಡುತ್ತಿದೆ. ಅದಕ್ಕಾಗಿ ಪ್ರತಿ ಗಂಧದ ಗಿಡಗಳಲ್ಲಿಯೂ ಮೈಕ್ರೋಚಿಪ್‌ ಮತ್ತು ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದನ್ನು ಬೆಳೆದವರಿಗೆ ಸಿಗ್ನಲ್‌ ರವಾನಿಸುವ ತಂತ್ರಜ್ಞಾನವನ್ನು ಇನ್‌ ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆ ಸಲಹೆ ಮೇರೆಗೆ ಶೀಘ್ರವೇ ರೈತರ ಹೊಲಕ್ಕೆ ಪೂರೈಸಲು ಸಜ್ಜಾಗಿದೆ.

1950ರಲ್ಲಿ ಪ್ರತಿ ಚದರ ಕಿ.ಮೀ.ಕಾಡಿನಲ್ಲಿ ಕನಿಷ್ಠ 300-400 ಗಂಧದ ಗಿಡಗಳಿದ್ದವು. ಕಳ್ಳರ ಕಾಟದಿಂದಾಗಿ ಇಂದು ಪ್ರತಿ 4 ಚ.ಕಿ.ಮೀ. ಕಾಡಿನಲ್ಲಿ ಒಂದು ಶ್ರೀಗಂಧದ ಗಿಡವಿದೆಯಷ್ಟೇ. ಹೀಗಾಗಿ ಸರ್ಕಾರ ಶ್ರೀಗಂಧವನ್ನು ಬೆಳೆಸಲು ಉತ್ತೇಜನ ನೀಡುತ್ತಿದೆ. ರೈತರಿಗೆ ಮೈಕ್ರೋಚಿಪ್‌, ಸಿಗ್ನಲ್‌ ಚಿಪ್‌, ಡಬಲ್‌ಬಾರಲ್‌ ಗನ್‌ ಮತ್ತು ಅಗತ್ಯ ಬಿದ್ದರೆ ಹತ್ತು ವರ್ಷದ ನಂತರ ಸಿ.ಸಿ. ಕ್ಯಾಮರಾಗಳನ್ನು ಪೂರೈಸುವ ಚಿಂತನೆ ನಡೆಸಿದೆ.

ಮೈಕ್ರೋಚಿಪ್‌ ಅಳವಡಿಕೆ: ಧಾರವಾಡ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಪ್ರಸಕ್ತ ವರ್ಷ 1.3 ಲಕ್ಷ ಗಂಧದ ಸಸಿಗಳನ್ನು ಬೆಳೆಸಲಾಗಿತ್ತು. ಆದರೆ ಈ ಪೈಕಿ ಅರ್ಧದಷ್ಟು ಸಸಿಗಳು ಕೂಡ ರೈತರ ಹೊಲ ಸೇರಿಲ್ಲ. ಇದನ್ನು ಅರಿತ ಅರಣ್ಯ ಇಲಾ ಖೆಯು ಆಯಾ ಜಿಲ್ಲಾ ಕೇಂದ್ರಗಳಿಗೆ
ರೈತರನ್ನು ಕರೆಯಿಸಿಕೊಂಡು ಅವರಿಗೆ ಗಂಧ ಬೆಳೆದರೆ ಆಗುವ ಉಪಯೋಗದ ಕುರಿತು ಮನವರಿಕೆ ಮಾಡುತ್ತಿದೆ. ಗಂಧದ ಬೆಳೆಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಉಚಿತವಾಗಿ ಮೈಕ್ರೋಚಿಪ್‌ ನೀಡುವ ಕುರಿತು ಕೂಡ ಅಭಯ ನೀಡುತ್ತಿದೆ.

ಚಿಪ್‌ ಮತ್ತು ಸಿಗ್ನಲ್‌ ತಂತ್ರಜ್ಞಾನ: ಎಳೆಯ ಗಂಧದ ಗಿಡದಲ್ಲಿ ಮೈಕ್ರೋಚಿಪ್‌ (ಒಂದು ಇಂಚು ಚದರಳತೆ ಯದ್ದು)ಅನ್ನು ತೊಗಟೆ ಕಿತ್ತು ಅದರಡಿ ಇರಿಸಲಾಗುತ್ತದೆ. ಕೆಲವು ತಿಂಗಳಲ್ಲಿ ಅದರ ಸುತ್ತಲು ಮತ್ತೆ ಗಿಡದ ತೊಗಟೆ ಬೆಳೆದು ಗಂಧದ ಒಡಲು ಸೇರುತ್ತದೆ. ಆ ಬಳಿಕ ಆ ಗಿಡವನ್ನು ಯಾರೇ ಕತ್ತರಿಸಿಕೊಂಡು ಹೋದರೂ ಅದು ಎಲ್ಲಿದೆ ಎನ್ನುವುದನ್ನು ಸಿಗ್ನಲ್‌ ಮೂಲಕ ಪತ್ತೆ ಹಚ್ಚಬಹುದು. ಕಳ್ಳರನ್ನು ಸುಲಭವಾಗಿ ಹಿಡಿಯಬಹುದು.

Advertisement

ಆದರೆ ಇಲ್ಲಿ ಗಂಧದ ಗಿಡವನ್ನು ಕಡಿಯುವಾಗಲೇ ರಕ್ಷಣೆ ಮಾಡುವುದು ಅಸಾಧ್ಯ. ಅದಕ್ಕಾಗಿ ಇನ್‌ಸ್ಟಿಟ್ಯೂಟ್‌ ಆಫ್‌ ವುಡ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಂಧದ ಗಿಡಕ್ಕೆ ಕೊಡಲಿ ಏಟು ಬೀಳುತ್ತಿದ್ದಂತೆಯೇ ಅದರ ಮಾಲೀಕರಿಗೆ ಸಂದೇಶ ನೀಡುವ ತಂತ್ರಜ್ಞಾನ ವೃದಿಟಛಿಪಡಿಸುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಭಾರತೀಯ ವಿಜ್ಞಾನ ಸಂಸ್ಥೆ ಯೊಂದಿಗೂ ಚರ್ಚಿಸಿದ್ದು, ಕೆಲವೇ ತಿಂಗಳಲ್ಲಿ ಅತ್ಯಂತ ಅಗ್ಗದ ದರದಲ್ಲಿ ಇದನ್ನು ಗಂಧ ಬೆಳೆಯುವ ರೈತರಿಗೆ ತಲುಪಿಸಲು ಚಿಂತನೆ ನಡೆಸಿದ್ದಾರೆ.

ಗಂಧಗ್ರಾಮಕ್ಕೆ ಚಿಂತನೆ: ಇನ್ನೊಂದೆಡೆ ರೈತ ಸಮೂಹಕ್ಕೆ ಯಥೇ ಚ್ಚವಾಗಿ ಅಂದರೆ, ಇಡೀ ಗ್ರಾಮವನ್ನೇ “ಶ್ರೀಗಂಧ ಗ್ರಾಮ’ ಎಂದು ಘೋಷಣೆ ಮಾಡಿ ಎಲ್ಲರ ಹೊಲ, ಮನೆ, ಖಾಲಿ ಜಾಗದಲ್ಲಿಯೂ ಶ್ರೀಗಂಧ ಬೆಳೆಸುವ ಹೊಸ ಪ್ರಯೋಗ ಉತ್ತಮ ಎನ್ನುವ ಚಿಂತನೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳದ್ದು. ಹಿಂದೆ ಮಲೆನಾಡಿನಲ್ಲಿ ತೇಗದ ನಾಟಾ ಕಳುವು ತಡೆಯುವುದು ಕಷ್ಟವಾಗಿದ್ದಾಗ ಅರಣ್ಯ ಇಲಾಖೆ, ರೈತರ ಹೊಲದಲ್ಲಿ ಯಥೇಚ್ಚವಾಗಿ ತೇಗ ಬೆಳೆಸಿತ್ತು. ಇದೇ
ಮಾದರಿಯನ್ನು ಶ್ರೀಗಂಧಕ್ಕೆ ಅಳವಡಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಬೆಳೆಯುವಷ್ಟು ಗುಣಮಟ್ಟದ ಶ್ರೀಗಂಧ ಜಗತ್ತಿನ ಯಾವ ಭಾಗದಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇವೆ.
– ಮಂಜುನಾಥ, ಸಿಸಿಎಫ್‌, ಧಾರವಾಡ ವಿಭಾಗ

ಶ್ರೀಗಂಧ ಬೆಳೆದ ನಂತರ ಅದನ್ನು ಕಾಯುವುದು ಕಷ್ಟ. ಕದ್ದರೆ ಅದಕ್ಕೆ ವಿಮೆ ಕೊಡಿಸಬೇಕು. ಇಲ್ಲವೇ ಅದನ್ನು ಸರ್ಕಾರವೇ ಕಾಯುವ ವ್ಯವಸ್ಥೆಯಾಗಬೇಕು.
– ಈರಣ್ಣ ಕಾಳೆ, ರೈತ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next