Advertisement

ಶಾಂತಿಯಿಂದ ಗಣೇಶ ಹಬ್ಬ ಆಚರಿಸಿ

11:43 AM Aug 29, 2019 | Team Udayavani |

ಸಂಡೂರು: ಗಣೇಶನ ಹಬ್ಬವನ್ನು ಎಲ್ಲರೂ ಶಾಂತಿಯಿಂದ ಆಚರಿಸಬೇಕು. ಈ ವೇಳೆ ಡಿ.ಜೆ.ಗಳನ್ನು ಬಳಸಿದರೆ ಕಡ್ಡಾಯವಾಗಿ ಕೇಸು ದಾಖಲಿಸಲಾಗುವುದು ಎಂದು ಪಿಎಸ್‌ಐ ಅಶೋಕ ಬಲ್ಲದ ತಿಳಿಸಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಕರೆದಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿ, ಪರವಾನಗಿ ಇಲ್ಲದೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಾರದು. ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘಟನೆಗಳು 100 ರೂ.ಬಾಂಡ್‌ನ‌ಲ್ಲಿ ತಪ್ಪದೇ ನಿಯಮಗಳಿಗೆ ಒಪ್ಪಿಗೆ ಬರೆದುಕೊಡಬೇಕು. ಠಾಣೆಯಿಂದ, ಜೆಸ್ಕಾಂ ಇಲಾಖೆಯಿಂದ, ಪುರಸಭೆಯಿಂದ ಅಗ್ನಿಶಾಮಕ ಠಾಣೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಪರಿಸರ ಮಾಲಿನ್ಯ ತಪ್ಪಿಸಲು ಸರ್ಕಾರದ ನಿಯಮದಂತೆ ಪ್ಲಾಸ್ಟರ್‌ ಅಫ್‌ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರುವುದು, ಪ್ರತಿಷ್ಠಾಪಿಸುವುದು ಅಪರಾಧ. ಆದ್ದರಿಂದ ಅವುಗಳನ್ನು ತರಬಾರದು. ಗಣೇಶ ವಿಸರ್ಜನೆಗೆ ನಿಗದಿತ ಮಾರ್ಗದಲ್ಲಿ ಸಾಗಬೇಕು. ಅದಕ್ಕೆ ಮೊದಲೆ ದಿನಾಂಕ ಸಮಯ ತಿಳಿಸಬೇಕು. ವಿವಿಧ ಸಂಘಗಳ ಸದಸ್ಯರು ಠಾಣೆಗೆ ಸರದಿ ಪ್ರಕಾರ ಗಣೇಶನ ಸ್ಥಾಪಿಸದ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣರಾವ್‌ ಮಾತನಾಡಿ, ಯಾವುದೇ ಕಾರಣಕ್ಕೂ ಪ್ಲಾಸ್ಟರ್‌ ಅಫ್‌ ಪ್ಯಾರಿಸ್‌ ಗಣೇಶ ಪ್ರತಿಷ್ಠಾಪನೆ ಮಾಡಿದರೆ, ಮಾರಾಟ ಮಾಡಿದರು ಅವರಿಗೆ 10,000 ದಂಡ ಮತ್ತು 3 ವರ್ಷ ಜೈಲು ಶಿಕ್ಷೆಯಾಗುತ್ತದೆ. ಆದ್ದರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿ ಸ್ಥಾಪಿಸಬೇಕು. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಜಾಗಗಳ ಬಗ್ಗೆ ಮಾಹಿತಿ ನೀಡಬೇಕು. ರಸ್ತೆಗಳಲ್ಲಿ ಗಣೇಶ ಸ್ಥಾಪಿಸಲು ಅವಕಾಶ ನೀಡುವುದಿಲ್ಲ. ಇದರಿಂದ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಆಕಸ್ಮಿಕ ಬೆಂಕಿ, ಸಾವು, ನೋವು ಸಂಭವಿಸಿದಲ್ಲಿ ಆಂಬ್ಯುಲೆನ್ಸ್‌, ಅಗ್ನಿಶಾಮಕ ವಾಹನ ಅಗಮಿಸಲು ಸ್ಥಳಾವಕಾಶವಿರಬೇಕು. ಪೂಜೆಗೆ ಬಳಸುವ ವಸ್ತು, ಊಟದ ತಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

ತಹಶೀಲ್ದಾರ್‌ ಶಿವಕುಮಾರ್‌, ಅಗ್ನಿಶಾಮಕ ಠಾಣೆಯ ಅಧಿಕಾರಿ ಲಕ್ಷ್ಮೀನಾರಾಯಣ, ಪಿಎಸ್‌ಐ, ಜೆಸ್ಕಾಂ ಅಧಿಕಾರಿಗಳು, ವಿವಿಧ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next