ಸಂಡೂರು: ಗಣೇಶನ ಚೌತಿ ಮುಗಿಯುತ್ತಿದ್ದಂತೆ ಮೊಹರಂ ಪ್ರಾರಂಭವಾಗಿದ್ದು ಪಟ್ಟಣದಲ್ಲಿ ಎಲ್ಲೆಲ್ಲಿಯೂ ಕಳ್ಳಳ್ಳಿಗಳ ಸದ್ದು ಕಂಡು ಬರುತ್ತಿದೆ.
ಮೊಹರಂ ಕೊನೆ ದಿನದವರೆಗೆ ಅಂದರೆ ಗುದ್ದಲಿ ಹಾಕಿದ ದಿನದಿಂದ ಕಳ್ಳಳ್ಳಿ, ಹುಲಿ ವೇಷಧಾರಣೆ, ಕರಡಿ ವೇಷಧಾರಣೆಯನ್ನು ಮಾಡಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಸುತ್ತಿ ಭಕ್ತರು ಕೊಡುವ ಧಾನ್ಯ, ಹಣವನ್ನು ಸಂಗ್ರಹಮಾಡಿಕೊಂಡು ಅಂತಿಮ ದಿನ ವಿಶೇಷ ಪೂಜೆ ಸಲ್ಲಿಸಿ ತಮ್ಮ ವೇಷದಿಂದ ಹೊರಬರುವುದು ವಾಡಿಕೆ.
ಹಳ್ಳಿಗಳಲ್ಲಿ ಕೆಲವು ನಿರ್ದಿಷ್ಟ ಪಡಿಸಿದ ಕುಟುಂಬಗಳೇ ಈ ವೇಷ ಹಾಕುತ್ತಾರೆ. ಮತ್ತೆ ಕೆಲವರು ತಮ್ಮ ಅರಿಕೆ ಪೂರೈಸಿಕೊಳ್ಳಲು ನಿನ್ನ ಹಬ್ಬಕ್ಕೆ ಹುಲಿ ವೇಷ ಹಾಕಿ ಕುಣಿದು ಭಕ್ತಿಯನ್ನು ಸಮರ್ಪಿಸುತ್ತೇನೆ ಎಂದು ಬೇಡಿಕೊಳ್ಳುತ್ತಾರೆ. ಅದರಂತೆ ನಿಜವಾದ ಹುಲಿಯ ರೀತಿಯ ಬಣ್ಣವನ್ನು ಹಾಕಿಕೊಂಡು ಹಳ್ಳಿಗಳಲ್ಲಿ ಕುಣಿದು, ಹಬ್ಬದ ದಿನ ವಿಶೇಷವಾಗಿ ಕುಣಿದು ತಮ್ಮ ಹರಿಕೆ ಪೂರೈಸುತ್ತಾರೆ.
ಸಂಡೂರು ಪಟ್ಟಣಕ್ಕೆ ಕೂಡ್ಲಿಗಿ ತಾಲೂಕಿನ ಬಡ್ಲೆಕಿ ಗ್ರಾಮದಿಂದಲೇ ಕಳ್ಳಳ್ಳಿಗಳು ಬರುತ್ತವೆ. ಅವರು ಹುಲಿ ವೇಷ, ಕರಡಿ ವೇಷ ಹಾಕಿ ಓಣಿಗಳಲ್ಲಿ ಮಕ್ಕಳ ಹಿಂದೆ ಬಿದ್ದು ಅವರನ್ನು ರಂಜಿಸುತ್ತಾರೆ. ಹಿರಿಯರಿಂದ ಅವರು ಕೊಡುವ ಕಾಣಿಕೆ ಪಡೆಯುತ್ತಾರೆ. ದೂರದ ಊರಿಂದ ಇಲ್ಲಿಗೆ ಬಂದು ಕುಣಿದು, ದಣಿದು ತಮ್ಮ ಉದರ ತುಂಬಿಸಿಕೊಳ್ಳುವುದು ಒಂದು ಭಾಗವಾದರೆ, ಮತ್ತೂಂದು ಕಡೆ ದೇವರಿಗೆ ಹರಿಕೆ ಸಲ್ಲಿಸುವುದು ಬಹು ಮುಖ್ಯವಾದುದಾಗಿರುತ್ತದೆ.
ಓಣಿಗಳಲ್ಲಿ ಗೃಹಿಣಿಯರು ತಮ್ಮ ಸಣ್ಣ ಮಕ್ಕಳಿಗೆ ಇವರು ತಯಾರಿ ಮಾಡಿದ ಹಗ್ಗದ ಎಟು ಕೊಡಿಸುತ್ತಾರೆ. ಕಾರಣ ಅವರಲ್ಲಿಯ ಭಯ ದೂರವಾಗಲಿ ಎಂದು, ಹೀಗೆ ಮೊಹರಂ ಹಬ್ಬ ಹಲವಾರು ಮಹತ್ವ ಮತ್ತು ನಂಬಿಕೆಗಳನ್ನು ಹೊಂದಿ, ಬರೀ ಮುಸ್ಲಿಂ ಅಲ್ಲದೆ ಹಿಂದೂಗಳೇ ಹೆಚ್ಚಾಗಿ ಆಚರಿಸುವ ಹಬ್ಬ ಇದಾಗಿದೆ ಎನ್ನಬಹುದು.
ಕಳ್ಳಳ್ಳಿ ವೇಷದ ವಿಶೇಷತೆ: ಮುಖಕ್ಕೆ ಬಣ್ಣ, ತಲೆ ಮೇಲೆ ಬಣ್ಣದ ಕಾಗಗದ ಉದ್ದನೆಯ ಟೊಪ್ಪಿಗೆ, ಸೊಂಟಕ್ಕೆ ಗಂಟೆ ಸರ, ಕಾಲಲ್ಲಿ ಗೆಜ್ಜೆ, ಕೈಯಲ್ಲಿ ಹುಲ್ಲಿನ ಮೆತ್ತನೆಯ ದಪ್ಪದಾದ ಹಗ್ಗದ ಲಡ್ಡು, ಸದಾ ನಡುವನ್ನು ನಡುಗಿಸುತ್ತಾ, ಕಾಲನ್ನು ಕುಣಿಸುತ್ತಾ ಗೆಜ್ಜೆ ನಾದದೊಂದಿಗೆ ಓಣಿ ಓಣಿ ಓಡಿ ಹುಡುಗರನ್ನು ರಂಜಿಸುತ್ತಾರೆ.