ಬ್ರಹ್ಮಾವರ: ಈ ಹಿಂದೆ ಅವ್ಯಾಹತ ಮರಳುಗಾರಿಕೆ ನಡೆಸಿದ್ದರಿಂದಲೇ ಮರಳುಗಾರಿಕೆ ಸ್ಥಗಿತಗೊಂಡಿತು ಈಗ ಮತ್ತೆ ಸಿಆರ್‌ಝಡ್ ವ್ಯಾಪ್ತಿಯಲ್ಲಿ ನಿಯಮ ಮೀರಿ ಮರಳುಗಾರಿಕೆ ನಡೆಸುತ್ತಿರುವ ದೂರು ಬರುತ್ತಿದ್ದು, ಮುಂದೆ ಮರಳುಗಾರಿಕೆಗೆ ತೊಂದರೆಯಾದರೆ ಪರವಾನಿಗೆದಾರರೇ ಹೊಣೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯ ಪಟ್ಟರು. ಅವರು ಸೋಮ ವಾರ ಬ್ರಹ್ಮಾವರದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿ ದರು.
ಕೆಲವು ಮರಳು ಪರವಾನಿಗೆದಾರರ ದುರಾಸೆಯಿಂದ ಸಮಸ್ತ ನಾಗರಿಕರಿಗೆ ತೊಂದರೆಯಾಗುತ್ತದೆ. ಮರಳುಗಾರಿಕೆ ಅಕ್ರಮದಿಂದಾಗಿ ಮತ್ತೆ ನಿಂತರೆ ಉಡುಪಿ ಜಿಲ್ಲೆಯ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು.
ಪರಿಸರ ಸೂಕ್ಷ್ಮ ವಲಯ ಘೋಷಣೆ ಪರಿಣಾಮ ಗಡಿಯಿಂದ 10 ಕಿ.ಮೀ. ವರೆಗೆ ಆಗುತ್ತದೆ. ಆ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ. ಕ್ರಷರ್ ಕೂಡ ಬಂದ್ ಮಾಡಬೇಕಾಗುತ್ತದೆ. ಇದರಿಂದ ಮುಂದೆ ಮರಳು ಸಿಕ್ಕರೂ ಜಲ್ಲಿ ಸಿಗುವುದಿಲ್ಲ. ಈ ಉದ್ದೇಶಕ್ಕಾಗಿ ಕೇಂದ್ರ ಸಚಿವರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಕರಡು ಅಧಿ ಸೂಚನೆ ಪರಾಮರ್ಶೆ ಬಳಿಕ ಅ ಧಿಕೃತ ಅಧಿ ಸೂಚನೆ ಹೊರಡಲಿದೆ. ಆ ಬಳಿಕ ಪರಿಸರ ಸೂಕ್ಷ್ಮ ವಲಯದಿಂದ 1 ಕಿ.ಮೀ. ವರೆಗೆ ಮಾತ್ರ ನಿಷೇಧ ಇರುತ್ತದೆ ಎಂದರು.
ಕುಂದಾಪುರ ಫ್ಲೈ ಓವರ್ ವಿಳಂಬ ಕುರಿತು ನವಯುಗ ಕಂಪೆನಿಯನ್ನು ಸಂಪರ್ಕಿಸಿದ್ದು, ಶೀಘ್ರ ಕಾರ್ಯ ಆರಂಭಿಸುವುದಾಗಿ ತಿಳಿಸಿರುವುದಾಗಿ ಹೆಗ್ಡೆ ಹೇಳಿದರು.