Advertisement
ಸಂದೀಪ್‌ನನ್ನು ಪ್ರತೀಕ್ ಓರ್ವನೇ ಕೊಲೆ ಮಾಡಿ ದುರ್ಗಮ ಕಾಡಿನಲ್ಲಿ ಹಾಕಲು ಸಾಧ್ಯವೇ ಇಲ್ಲ. ಕೊಲೆ ಪ್ರಕರಣದಲ್ಲಿ ಬೇರೆ ವ್ಯಕ್ತಿಗಳು ಇದ್ದಾರೆ. ಸಮಗ್ರ ತನಿಖೆ ನಡೆಸಿ ಇತರ ಆರೋಪಿಗಳನ್ನು ಕೂಡ ಬಂಧಿಸಬೇಕು ಎಂದು ಆಗ್ರಹಿಸುವುದರೊಂದಿಗೆ ಸಂದೀಪ್ ನಾಪತ್ತೆಯಾಗಿ ಬಳಿಕ ಕಾಡಿನಲ್ಲಿ ಆತನ ಶವ ಸಿಗುವ ತನಕ ಹಲವು ಬೆಳವಣಿಗೆಗಳು ನಡೆದರೂ, ಬಿಳಿನೆಲೆ ಗ್ರಾ.ಪಂ. ಸದಸ್ಯರು ಯಾವುದೇ ರೀತಿಯ ಸಹಕಾರ ನೀಡಿಲ್ಲ ಎನ್ನುವ ಆರೋಪ ಪ್ರತಿಭಟನಕಾರರಿಂದ ಕೇಳಿಬಂತು.
ಪ್ರಕರಣದಲ್ಲಿ ಕಡಬ ಪೋಲಿಸರ ನಡೆ ಸಂಶಯಾಸ್ಪದವಾಗಿದ್ದು, ಅವರು ಒತ್ತಡಕ್ಕೆ ಮಣಿದು ಪ್ರತೀಕ್ ಓರ್ವನೇ ಆರೋಪಿ ಎಂದು ಬಿಂಬಿಸುತ್ತಿದ್ದಾರೆ. ನಾಪತ್ತೆ ದೂರು ಸ್ವೀಕರಿಸಲು ಹಿಂದೇಟು ಹಾಕಿದ ಪೋಲಿಸರು ಬಳಿಕ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರೂ ಶವ ಪತ್ತೆ ಹಚ್ಚಲು ಮುಂದಾಗಲಿಲ್ಲ. ಗ್ರಾಮಸ್ಥರ, ಕುಟುಂಬಸ್ಥರ ಪ್ರತಿಭಟನೆಯ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕೊಲೆ ಆರೋಪಿಗಳಿಗೆ ರಕ್ಷಣೆ ನೀಡಿ, ವಿಳಂಬ ಧೋರಣೆಯಿಂದ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಮೃತ ಸಂದೀಪ್‌ನ ಕುಟುಂಬಸ್ಥರು ಆರೋಪಿಸಿದರು. ಪ್ರಕರಣ ನಡೆದು ಏಳು ದಿನಗಳಾದರೂ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಮುಂತಾದ ಘಟನೆಗಳು ನಡೆದರೂ ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಾಗಲೀ ಸದಸ್ಯರಾಗಲಿ ಯಾಕೆ ಮುಂದೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾ.ಪಂ. ಅಧ್ಯಕ್ಷೆ ಶಾರದಾ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಲಾಯಿತು. ಆರೋಪಿ ಪೊಲೀಸ್ ಕಸ್ಟಡಿಗೆ
ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದು ಕಾಡಿನಲ್ಲಿ ಬಿಸಾಕಿದ್ದ ಕೊಲೆ ಆರೋಪಿ ಬಿಳಿನೆಲೆ ಗ್ರಾಮದ ನೆಟ್ಟಣದ ಚೆಂಡೆಹಿತ್ಲು ನಿವಾಸಿ ಪ್ರತೀಕ್‌ನನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.