ಹಾಸನ : ಜಿಲ್ಲೆಯ ಶಾಂತಿ ಗ್ರಾಮದ ದೇವಿಹಳ್ಳಿಯ ಯೋಧ ಸಂದೀಪ್ ಶೆಟ್ಟಿ ಅವರು ಬುಧವಾರ ಜಮ್ಮು ಮತ್ತು ಕಾಶ್ಮೀರದ ಗಾಂಧರ್ಬಲ್ನಲ್ಲಿ ನಡೆದ ಹಿಮಪಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಸೇನಾ ಕ್ಯಾಂಪ್ನ ಮೇಲೆ ಹಿಮ ಬಂಡೆ ಉರುಳಿ ಸಂದೀಪ್ ಶೆಟ್ಟಿ ಅವರು ಮೃತಪಟ್ಟಿರುವುದಾಗಿ ಸೇನಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಮುಂದಿನ ತಿಂಗಳು ಮದುವೆ
ಸಂದೀಪ್ಗೆ ಹತ್ತಿರದ ಸಂಬಂಧಿ ಯುವತಿಯೊಂದಿಗೆ ಈಗಾಗಲೇ ನಿಶ್ಚಿತಾರ್ಥವಾಗಿದ್ದು, ಫೆಬ್ರವರಿ 22 ಕ್ಕೆ ವಿವಾಹ ನೆರವೇರಬೇಕಿತ್ತು. ಪುಟ್ಟರಾಜು ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರನಾಗಿರುವ ಸಂದೀಪ್ ಅವರ ನಿಧನದಿಂದ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ವಿಶೇಷ ವಿಮಾನದಲ್ಲಿ ವೀರಯೋಧನ ಪಾರ್ಥೀವ ಶರೀರವನ್ನು ಕರ್ನಾಟಕಕ್ಕೆ ರವಾನಿಸಲಾಗಿದ್ದು, ನಾಳೆ ಹಾಸನ ತಲುಪುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕಳೆದ ವರ್ಷ ಹಿಮಪಾತದಲ್ಲಿ ಹಾಸನದ ವೀರಯೋಧ ಸುಬೇದಾರ್ ನಾಗೇಶ್ ಅವರು ಮೃತಪಟ್ಟಿದ್ದನ್ನು ಸ್ಮರಿಸಬಹುದು.