ಮಂಗಳೂರು: ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ಉದ್ಯಮಿ ವಿ. ರವಿಕುಮಾರ್ ನಿರ್ಮಾಣದಲ್ಲಿ “ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ “ಪುರುಷೋತ್ತಮನ ಪ್ರಸಂಗ’ ಕನ್ನಡ ಚಲನಚಿತ್ರ ಮಾ. 1ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ನಿರ್ದೇಶಕ ದೇವದಾಸ್ ಕಾಪಿಕಾಡ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಸುತ್ತಮುತ್ತ ಹಾಗೂ ದುಬಾೖಯಲ್ಲಿ 7 ದಿನಗಳ ಕಾಲ ಚಿತ್ರೀ ಕರಣ ನಡೆದಿದೆ. ಉತ್ತಮ ಹಾಸ್ಯ ಕಥಾ ಹಂದರವನ್ನು ಒಳಗೊಂಡಿರುವ ಸಿನೆಮಾದಲ್ಲಿ ಪ್ರತಿಯೊಂದು ಪಾತ್ರವೂ ಕತೆಗೆ ಪೂರಕವಾಗಿ ಪ್ರಾಮುಖ್ಯ ಪಡೆದಿದೆ ಎಂದರು.
ನಾಯಕ ನಟನಾಗಿ ಮೊದಲ ಬಾರಿಗೆ ಅಜಯ್ ಪೃಥ್ವಿ, ನಾಯಕಿಯರಾಗಿ ರಿಷಿಕಾ ನಾಯ್ಕ, ದೀಪಿಕಾ ದಿನೇಶ್ ನಟಿಸಿದ್ದಾರೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ, ಭೋಜರಾಜ ವಾಮಂಜೂರು, ಶೋಭರಾಜ್ ಪಾವೂರು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ಸಾಯಿಕೃಷ್ಣ ಕುಡ್ಲ ಮೊದಲಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿದ್ದು ಜಯಂತ್ ಕಾಯ್ಕಿಣಿ, ಪ್ರೊ| ದೊಡ್ಡರಂಗೇಗೌಡ ಹಾಗೂ ದೇವದಾಸ್ ಕಾಪಿಕಾಡ್ ಸಾಹಿತ್ಯ ಬರೆದಿದ್ದಾರೆೆ ಎಂದರು.
ನಿರ್ಮಾಪಕ ವಿ. ರವಿಕುಮಾರ್ ಮಾತನಾಡಿ, ದೇವದಾಸ್ ಕಾಪಿಕಾಡ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದು ಸಿನೆಮಾ ನಿರ್ದೇಶಿಸಿದ್ದಾರೆ. ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಾಪಿಕಾಡ್ ಸಹನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. ಮನೆ ಮಂದಿ ಕುಳಿತು ನೋಡಬಹುದಾದ ಉತ್ತಮ ಚಿತ್ರ ಎಂದರು.
ನಿರ್ಮಾಪಕ ಸಂಶುದ್ದೀನ್ ಮಾತ ನಾಡಿ, ಅತ್ಯುತ್ತಮ ಕಥಾಹಂದರವುಳ್ಳ ಸಿನೆಮಾ ರಾಜ್ಯಾದ್ಯಂತ 100ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದರು.
ನಾಯಕ ನಟ ಅಜಯ್ ಪೃಥ್ವಿ, ನಾಯಕಿ ದೀಪಿಕಾ ದಿನೇಶ್, ಸಹ ನಿರ್ದೇಶಕ ಅರ್ಜುನ್ ಕಾಪಿಕಾಡ್, ಲಕ್ಷ್ಮೀಶ ಸುವರ್ಣ ಉಪಸ್ಥಿತರಿದ್ದರು.