Advertisement

ಬೆಳಕಿನ ತಿಂಡಿ: ತಾರೆ ಮೆಚ್ಚಿದ ಪಾಕ ಪಟಾಕಿ

01:32 PM Apr 14, 2020 | Sharanya Alva |

ದೀಪಾವಳಿ ಎಂದರೆ ಹೊಸ ಬಟ್ಟೆ, ಸುರ್‌ಸುರ್‌ ಬತ್ತಿ, ಸಿಹಿತಿಂಡಿ- ಖಾರ. ಪ್ರತೀ ಸಾರಿ ದೀಪಾವಳಿ ಬಂದಾಗಲೂ ನಾವು ನೆನಪಿನ ಮೂಟೆಯನ್ನು ಒಮ್ಮೆ ಬಿಚ್ಚಿ ಹಳತರ ನೆನೆಕೆಯಲ್ಲಿಯೇ ಹೊಸತನ್ನೂ ಆಸ್ವಾದಿಸುತ್ತಾ ಸಾಗುತ್ತಿರುತ್ತೇವೆ. ಈ ದೀಪಾವಳಿಗೆ ನಕ್ಷತ್ರಗಳನ್ನು ಮಾತಾಡಿಸಿದ್ದೇವೆ. ರಾಜ್ಯದ ನಾನಾ ಪ್ರದೇಶಗಳಿಗೆ ಸೇರಿರುವ ಈ ನಕ್ಷತ್ರಗಳ ಕನವರಿಕೆಯಲ್ಲಿ ತಾವು ಬಿಟ್ಟ ಬಂದ ಊರಿನ ಸೊಗಡಿದೆ. ನಾನಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಈ ನಕ್ಷತ್ರಗಳು ಹುಟ್ಟಿದೂರನ್ನು ಮರೆತಿಲ್ಲ. ಇಲ್ಲಿ ತಮ್ಮ ನೆನಪಿನ ಬುತ್ತಿಯಿಂದ ಅವರು ಬರೀ ನೆನಪಷ್ಟೇ ಅಲ್ಲ, ತಮ್ಮ ಊರಿನ ಒಂದೊಂದು ತಿಂಡಿಯನ್ನೂ ಹಂಚಿಕೊಂಡಿದ್ದಾರೆ.

Advertisement

ಯಶ್‌ ಮೇಲೆ ಎಕ್ಸ್‌ಪೆರಿಮೆಂಟ್‌!
ಮದುವೆಯಾದ ಹೊಸತರಲ್ಲಿ ಯಶ್‌ ಅವ್ರನ್ನ ಅವರ ಸ್ನೇಹಿತರು ತುಂಬಾನೇ ರೇಗಿಸ್ತಿದ್ರಂತೆ “ನಿಂಗೆ ಮ್ಯಾಗೀನೇ ಗತಿ’ ಅಂತ. ಅದರಲ್ಲೇನೂ ತಪ್ಪಿಲ್ಲ. ನಾನು ಮುಂಚಿನಿಂದಲೂ ತಿಂಡಿಪೋತಿ. ಅಡುಗೆ ಮಾಡೋದಕ್ಕಿಂತ ತಿನ್ನೋದೆಂದರೇ ಖುಷಿ. ಆದ್ರೆ ಈಗೀಗ ಅಡುಗೆ ಕಲೀತಾ ಇದ್ದೀನಿ. ಯಶ್‌ಗೆ ರಾಗಿ ಮುದ್ದೆ ಅಂದ್ರೆ ಇಷ್ಟ. ಅದ್ಕೆ ಮುದ್ದೆ ಮಾಡೋದನ್ನೂ ಕಲೀತಾ ಇದ್ದೀನಿ. ಅವರು ಡಯೆಟ್‌ ಮಾಡ್ತಿರೋದರಿಂದ ಆರೋಗ್ಯಕರ, ನ್ಯಾಚುರಲ್‌ ಆಹಾರವನ್ನೇ ಕೊಡಬೇಕು. ಹೀಗಾಗಿ ನನ್ನೆಲ್ಲಾ ಅಡುಗೆ ಪ್ರಯೋಗಗಳಿಗೆ ಯಶ್‌ ಅವರೇ ಬಲಿಪಶು. ಪಾಪ, ನಾನು ಮಾಡಿದ್ದೆಲ್ಲವನ್ನೂ ತಿಂದು ಅದು ಹೇಗಿದ್ದರೂ “ಚೆನ್ನಾಗಿದೆ’ ಅಂತಾರೆ! ಈ ಸಲದ ದೀಪಾವಳಿ ನನಗೆ ತುಂಬಾನೇ ಸ್ಪೆಷಲ್‌! ಯಶ್‌ಗೆ ಬೇಸನ್‌ ಲಾಡು ಅಂದ್ರೆ ತುಂಬಾ ಇಷ್ಟ. ನಾನು ಮನೆಯಲ್ಲಿದ್ದಿದ್ದರೆ ಅಮ್ಮ ಕೊಂಕಣಿ ಸ್ವೀಟ್‌ ಮಾಂಡೆ ಮಾಡಿರೋರು. ಅವೆಲ್ಲವನ್ನೂ ಯಶ್‌ಗೋಸ್ಕರ ಮಾಡಿ ತಿನ್ನಿಸಬೇಕು ಅನ್ಕೊಂಡಿದ್ದೀನಿ.
– ರಾಧಿಕಾ ಪಂಡಿತ್‌, ಚಿತ್ರನಟಿ

ಮಾಂಡೆ 
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ. ಮೈದಾಹಿಟ್ಟು, 2 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಹಾಲು ಅಥವಾ ನೀರು, ಕಾಯಿತುರಿ, ಸಕ್ಕರೆ ಪುಡಿ, ಹುರಿದ ಎಳ್ಳು 2 ಚಮಚ, ಏಲಕ್ಕಿ ಪುಡಿ 2 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೈದಾಹಿಟ್ಟಿಗೆ, ಉಪ್ಪು ಮತ್ತು ಬಿಸಿ ತುಪ್ಪ ಸೇರಿಸಿ. ನಂತರ ಸ್ವಲ್ಪ ಹಾಲು ಅಥವಾ ನೀರು ಸೇರಿಸಿ ಹಿಟ್ಟನ್ನು ಚೆನ್ನಾಗಿ ಕಲೆಸಿ ಉಂಡೆ ಮಾಡಿ. ತೆಂಗಿನ ತುರಿಯನ್ನು ಸಣ್ಣ ಉರಿಯಲ್ಲಿ ಹುರಿದು, ಅದಕ್ಕೆ ಸಕ್ಕರೆ ಪುಡಿ, ಎಳ್ಳು ಹಾಗೂ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಮೈದಾಹಿಟ್ಟಿನಿಂದ ಸಣ್ಣ ಪೂರಿ ಮಾಡಿ. ಬಿಸಿ ಬಿಸಿ ಪೂರಿಯನ್ನು ಅರ್ಧ ಮಡಚಿ ಅದರೊಳಗೆ ತೆಂಗಿನ ಮಿಶ್ರಣ ಸೇರಿಸಿ. ಹಾಗೆಯೇ ಪೂರಿಯ ಮೇಲೂ ತೆಂಗಿನ ಪುಡಿ ಹಾಕಿ.

Advertisement

ಹ್ಯಾಪಿ ಮತ್ತು ಲಕ್ಕಿ ಜೊತೆ
ದೀಪಾವಳಿ ಟೈಮಲ್ಲಿ ಮನೇನಲ್ಲಿ ನಂದು ದೇವರಮನೆ ಡಿಪಾರ್ಟ್‌ಮೆಂಟ್‌. ದೇವರಿಗೆ ಅಲಂಕಾರ, ಪೂಜೆ, ದೀಪ ಎಲ್ಲವೂ ನಂದೇ ಜವಾಬ್ದಾರಿ. ಅಡುಗೆ ಮನೆ ಮಾತ್ರ ಅಮ್ಮಂದು. ನಾನು ಅಮ್ಮಂಗೆ ಹೆಲ್ಪ್ ಮಾಡ್ತೀನಿ ಅಷ್ಟೆ. ಸದಾ ಶೂಟಿಂಗ್‌, ಕಾರ್ಯಕ್ರಮ ಅಂತ ಮನೆ ಹೊರಗಡೇನೆ ಜಾಸ್ತಿ ಸಮಯ ಕಳೆಯೋದರಿಂದ ದೀಪಾವಳಿ ಹಬ್ಬದಂದು ನಾನು, ಅಣ್ಣ ಒಟ್ಟಿಗೆ ಸೇರೋದೇ ದೊಡ್ಡ ಖುಷಿ. ನಾನು ಚಿಕ್ಕೋಳಿದ್ದಾಗ ಅಕ್ಕಪಕ್ಕದ ಮನೆಯ ಹುಡುಗರ ಜೊತೆ ಸೇರಿಕೊಂಡು ಪಟಾಕಿ ಹೊಡೀತಿದ್ದೆ. ಆದರೀಗ ಹೊಡೆಯೋಲ್ಲ. ನನ್ನ ಮುದ್ದಿನ ಹ್ಯಾಪಿ ಮತ್ತು ಲಕ್ಕಿ ಭಯ ಬೀಳ್ಳೋದು ಒಂದು ಕಾರಣವಾದರೆ, ಪರಿಸರ ಸಂರಕ್ಷಣೆ ಮಾಡ್ಬೇಕು ಅನ್ನೋದು ಇನ್ನೊಂದು ಕಾರಣ. ಹಬ್ಬದ ದಿನ ಅಮ್ಮ ಥರ ಥರದ ರೈಸ್‌ ಬಾತ್‌, ಖಾರ, ಸಿಹಿ ತಿಂಡಿಗಳನ್ನ ಮಾಡ್ತಾರೆ. ನಮ್ಮ ನಮ್ಮ ಕಡೆ ಕಜ್ಜಾಯ ತುಂಬಾ ಫೇಮಸ್‌.
– ಹರಿಪ್ರಿಯಾ, ಚಿತ್ರನಟಿ 

ಕಜ್ಜಾಯ
ಬೇಕಾಗುವ ಸಾಮಗ್ರಿ: 2 ಕಪ್‌ ಅಕ್ಕಿ, 2 ಕಪ್‌ ಬೆಲ್ಲ, ಏಲಕ್ಕಿ ಪುಡಿ, ಕಾಲು ಚಮಚ ಗಸೆಗಸೆ ಕರಿಯಲು ಎಣ್ಣೆ.

ಮಾಡುವ ವಿಧಾನ: ಅಕ್ಕಿಯನ್ನು ನೆನೆಸಿ, ಬಟ್ಟೆಯ ಮೇಲೆ ಹರಡಿ ಆರಲು ಬಿಡಿ. ನಂತರ ಅದನ್ನು ಪುಡಿ ಮಾಡಿ. ಬೆಲ್ಲದ ಪಾಕ ತಯಾರಿಸಿ ಅದಕ್ಕೆ ಅಕ್ಕಿ ಹಿಟ್ಟು, ಏಲಕ್ಕಿ, ಗಸೆಗಸೆ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಪೂರಿಗಿಂತ ಸ್ವಲ್ಪ ದಪ್ಪಕ್ಕೆ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.

ಸ್ಟವ್‌ ಹತ್ರ ಹೋಗೋಕೆ ಬಿಡಲ್ಲ!
ಇದು ನಮಗೆ ದೊಡ್ಡ ಹಬ್ಬ. ಯಾವ ಹಬ್ಬವನ್ನೂ ದೀಪಾವಳಿಯಷ್ಟು ಅದ್ಧೂರಿಯಾಗಿ ಆಚರಿಸಲ್ಲ. ಸತ್ಯ ಏನೂ ಅಂದರೆ ಅಡುಗೆಗೂ ನನಗೂ ಇರುವ ಸಂಬಂಧ ಅಷ್ಟಕ್ಕಷ್ಟೆ. ಆದರೂ ದೀಪಾವಳಿ ದಿನ ಅಡುಗೆ ಮಾಡಬೇಕು ಅಂತ ನನಗಂತೂ ಆಸೆ ಇದೆ. ಆದರೆ, ಅಮ್ಮನೇ ಬಿಡಲ್ಲ. ಬಹುಶಃ ಹಬ್ಬದ ದಿನ ನನ್ನ ಅಡುಗೆ ಪ್ರಯೋಗ ಕೆಟ್ಟರೆ ಎಂಬ ಭಯ ಇದ್ದಿರಬಹುದು. ಆದಕ್ಕೇ ಎಣ್ಣೆ, ಗ್ಯಾಸ್‌ ಹತ್ರ ಬರಲೇಬೇಡ ಅಂತ ಓಡಿಸ್ತಾರೆ. ಆದ್ರೂ ಅವರಿಗೆ ಅಲ್ಪಸ್ವಲ್ಪ ಸಹಾಯ ಮಾಡದಿದ್ದರೆ ನನಗೆ ಸಮಾಧಾನ ಇಲ್ಲ. ಬೆಳಗ್ಗೆ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಉಟ್ಟು ಪೂಜೆ ಮಾಡ್ತೀವಿ. ಆಮೇಲೆ ಬಾಳೆ ಎಲೆಯಲ್ಲಿ ಹಬ್ಬದೂಟ ಮಾಡ್ತೀವಿ. ಅದೇ ವಿಶೇಷ. ಕರಾವಳಿ ಕಡೆ ಹಲಸಿನ ಗಟ್ಟಿ ಅಂತ ಸಿಹಿತಿಂಡಿಯೊಂದನ್ನು ಮಾಡುತ್ತಾರೆ. ತುಂಬಾ ರುಚಿಯಾಗಿರುತ್ತೆ.
– ರಾಧಿಕಾ ಕುಮಾರಸ್ವಾಮಿ, ಚಿತ್ರನಟಿ.

ಹಲಸಿನ ಗಟ್ಟಿ
ಬೇಕಾಗುವ ಸಾಮಗ್ರಿ: 1 ಕಪ್‌ ಅಕ್ಕಿ, 2-3 ಕಪ್‌ ಹಲಸಿನ ಹಣ್ಣು, ತುರಿದ ಬೆಲ್ಲ ಮುಕ್ಕಾಲು ಕಪ್‌, 1 ಕಪ್‌ ಕಾಯಿತುರಿ. ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅಕ್ಕಿ ತೊಳೆದು 2-3 ಗಂಟೆಗಳ ಕಾಲ ನೆನೆಸಿಡಿ. ಹಲಸಿನ ಹಣ್ಣು, ಅಕ್ಕಿ, ಉಪ್ಪು ಮತ್ತು ಕಾಯಿತುರಿಯನ್ನು ಮಿಕ್ಸರ್‌ನಲ್ಲಿ ನೀರು ಹಾಕದೆಯೇ ತರಿತರಿಯಾಗಿ ಗೆùಂಡ್‌ ಮಾಡಿ. ಬೆಲ್ಲದ ಪಾಕ ತಯಾರಿಸಿ, ಅದಕ್ಕೆ ಗ್ರೈಂಡ್ ಮಾಡಿದ ಹಲಸಿನ ಹಣ್ಣನ್ನು ಸೇರಿಸಿ ಚೆನ್ನಾಗಿ ಕಲೆಸಿ.  ಬಾಳೆಲೆ ತೆಗೆದುಕೊಂಡು ಈ  ಹಿಟ್ಟನ್ನು ಎಲೆಯ ಮಧ್ಯೆದಲ್ಲಿಟ್ಟು ಮಡಚಿ. ನಂತರ ಅದನ್ನು ಕುಕ್ಕರ್‌ನಲ್ಲಿ ಇಟ್ಟು ಕನಿಷ್ಠ 15-20 ನಿಮಿಷಗಳ ಕಾಲ ಬೇಯಿಸಿ.  ಹಲಸಿನ ಗಟ್ಟಿಯನ್ನು ತುಪ್ಪ ಅಥವಾ ಕೆಂಪು ಚಟ್ನಿಯೊಂದಿಗೆ ಸವಿಯಿರಿ.

ನಂದು ಪೂಜೆ ಡಿಪಾರ್ಟ್‌ಮೆಂಟು

ನಮ್ದು ಜಾಯಿಂಟ್‌ ಫ್ಯಾಮಿಲಿ. ಮನೇಲಿ ಅತ್ತೆ, ಮೈದುನಂದಿರು ಎಲ್ಲರೂ ಒಟ್ಟಿಗೆ ಇರೋದರಿಂದ ಹಬ್ಬವನ್ನು ಆಚರಿಸುವುದೆಂದರೆ ಸಂಭ್ರಮ, ಸಡಗರ ಹೆಚ್ಚು. ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಮೈದುನಂದಿರಿಗೆ ಆಕಾಶಬುಟ್ಟಿ ಜವಾಬ್ದಾರಿ. ಅತ್ತೆಯವರಿಗೆ ಅಡುಗೆ ಮನೆ ಜವಾಬ್ದಾರಿ. ನನ್ನದು ಬಟ್ಟೆ, ಅಲಂಕಾರ, ಪೂಜೆ ಡಿಪಾರ್ಟ್‌ಮೆಂಟು. ಹೀಗೆ ಕೆಲಸಗಳನ್ನು ಹಂಚಿಕೊಳ್ಳುತ್ತೇವೆ. ನಾನು ಪಟಾಕಿ ಹೊಡೆಯಲ್ಲ. ಆದರೆ ಮಗಂಗೆ ಇಷ್ಟ ಅಂತ ಅವನಿಗೆ ಕೊಡಿಸ್ತೀನಿ. ಆ ದಿನ ಚೂಡಾ, ಚಟ್ನಿಪುಡಿ, ಕರ್ಜಿಕಾಯಿ, ಒಣ ತಿಂಡಿ ಇನ್ನೂ ಹತ್ತು ಹಲವು ಖಾದ್ಯಗಳನ್ನ ಅತ್ತೆಯವರು ತಯಾರಿಸುತ್ತಾರೆ. ನಾನು ಅವರಿಗೆ ತರಕಾರಿ ಕತ್ತರಿಸೋಕೆ, ಮಿಕ್ಸಿಯಲ್ಲಿ ರುಬ್ಬೊàಕೆ, ಪಲ್ಲೆ ಮಾಡೋಕೆ ಹೀಗೆ ಚಿಕ್ಕಪುಟ್ಟ ಸಹಾಯ ಮಾಡ್ತೀನಿ. ಅತ್ತೆ ಕೈಯಡುಗೆ ತುಂಬಾ ರುಚಿ. ನಮ್ಮತ್ತೆ ಹುರಕ್ಕಿ ಹೋಳಿಗೆ ತುಂಬಾ ಚೆನ್ನಾಗಿ ಮಾಡ್ತಾರೆ.
– ರಾಧಾ ಹಿರೇಗೌಡರ್‌,  ಸುದ್ದಿ ನಿರೂಪಕಿ

ಹುರಕ್ಕಿ ಹೋಳಿಗೆ
ಬೇಕಾಗುವ ಸಾಮಗ್ರಿ:
1 ಕಪ್‌ ನವಣೆ ಅಕ್ಕಿ, ಅರ್ಧ ಕಪ್‌ ಕಡಲೆ ಬೇಳೆ, ಕಾಲು ಕಪ್‌ ಅಕ್ಕಿ, ಒಂದು ಹಿಡಿ ಬೆಲ್ಲ, ಏಲಕ್ಕಿ ಮತ್ತು ಜಾಯಿಕಾಯಿ ಪುಡಿ, ಮೈದಾ ಮತ್ತು ರವೆ ಸ್ವಲ್ಪ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ನವಣೆ, ಕಡಲೆಬೇಳೆ, ಅಕ್ಕಿಯನ್ನು ಬೇರೆಬೇರೆಯಾಗಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಹಿಟ್ಟು ಮಾಡಿ. ಬೆಲ್ಲಕ್ಕೆ ನೀರು ಹಾಕಿ ಹದವಾಗಿ ಪಾಕ ಮಾಡಿ. ಪಾಕ ಮತ್ತು ಮಾಡಿಟ್ಟುಕೊಂಡ ಹಿಟ್ಟು ಸೇರಿಸಿ, ಅದಕ್ಕೆ ಏಲಕ್ಕಿ, ಜಾಯಿಕಾಯಿ ಪುಡಿ ಹಾಕಿ ಕಲೆಸಿ. ಮೈದಾ, ರವೆ, ಉಪ್ಪು, ಸ್ವಲ್ಪ ಎಣ್ಣೆ ಹಾಕಿ ಕಲೆಸಿಟ್ಟುಕೊಂಡ ಕಣಕದಲ್ಲಿ ತುಂಬಿ ಪೂರಿಯಂತೆ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ. ಕರಿದ ಮೇಲೆ ಕೊಬ್ಬರಿ ತುರಿಯನ್ನು ಉದುರಿಸಿ. ಹುರಕ್ಕಿ ಹೋಳಿಗೆ ಸವಿಯಲು ರೆಡಿ.

ತಮ್ಮ ಬರ್ತಿದ್ದಾನೆ…

ದೀಪಾವಳಿ ಅಂದ್ರೇನೇ ಹೊಸ ಬಟ್ಟೆ ಮತ್ತು ಹಬ್ಬದೂಟ. ಕೆಲಸದೋರಿಗೆಲ್ಲಾ ಹೊಸ ಬಟ್ಟೆ ಕೊಡಿಸ್ತೀನಿ, ಜೊತೆಗೆ ಅವರ ಖುಷಿ ಹೆಚ್ಚಿಸಲು ಬೋನಸ್‌ ಕೂಡಾ ಕೊಡ್ತೀವಿ. ಅಮ್ಮನ ಕೈಯ ಒಬ್ಬಟ್ಟು ಅಂದ್ರೆ ತುಂಬಾ ಇಷ್ಟ. ಅದರ ಜೊತೆ ಚೂಡಾ, ಶಂಕರಪೋಳಿ, ಮೈಸೂರ್‌ ಪಾಕನ್ನೂ ಮಾಡ್ತೀವಿ. ಸಾಮಾನ್ಯವಾಗಿ ನನಗೆ ಅಡುಗೆ ಮಾಡೋಕೆ ಟೈಮ್‌ ಸಿಗಲ್ಲ. ಆದರೆ ಅಪರೂಪಕ್ಕೆ ಮಾಡ್ತೀನಿ. ಮಕ್ಕಳಿಗಂತೂ ನನ್ನ ಅಡುಗೆ ತುಂಬಾ ಇಷ್ಟ. ಈ ಬಾರಿಯ ದೀಪಾವಳಿ ನನಗಂತೂ ಮೆಮೊರೇಬಲ್‌. ನಾಲ್ಕೈದು ವರ್ಷಗಳಿಂದ ತಮ್ಮನಿಗೆ ಮಕ್ಕಳಾಗಿರಲಿಲ್ಲ. ಮೊನ್ನೆ ತಾನೇ ಆಗಿದೆ. ದೀಪಾವಳಿ ಆಚರಿಸಲು ಅವನೂ ಕುಟುಂಬ ಸಮೇತ ನಮ್ಮನೆಗೆ ಬರಿ¤ದ್ದಾನೆ. ಅದೇ ಖುಷಿ. ಅಡುಗೆಯಲ್ಲಿ ಸಿಹಿ ಕಮ್ಮಿಯಾಗಬಹುದು, ಖಾರ ಜಾಸ್ತಿಯಾಗಬಹುದು, ಆದರೆ ಸ್ವಂತದವರ ಜೊತೆ ಸಮಯ ಕಳೆಯುವುದರ ಮುಂದೆ ಅವೆಲ್ಲವೂ ನಗಣ್ಯ.
– ಲಕ್ಷ್ಮಿ ಹೆಬ್ಬಾಳ್ಕರ್‌, ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ

ಶಂಕರಪೋಳಿ 
ಬೇಕಾಗುವ ಸಾಮಗ್ರಿ: 1 ಕಪ್‌ ಮೈದಾ, 2 ಚಮಚ ತುಪ್ಪ, ಕಾಲು ಕಪ್‌ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, ನೀರು, ಏಲಕ್ಕಿ ಪುಡಿ, ಕರಿಯಲು ಎಣ್ಣೆ

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಮೈದಾ, ಉಪ್ಪು ಮತ್ತು ಏಲಕ್ಕಿಯನ್ನು ಹಾಕಿ. ಇನ್ನೊಂದರಲ್ಲಿ ನೀರು, ತುಪ್ಪ, ಸಕ್ಕರೆ ಹಾಕಿ ಸಕ್ಕರೆ ಕರಗುವವರೆಗೆ ಬಿಸಿ ಮಾಡಿ. ಇದನ್ನು ಮೈದಾ ಹಿಟ್ಟಿನ ಜೊತೆ ಸೇರಿಸಿ ಚೆನ್ನಾಗಿ ನಾದಿ. ನಂತರ ಆ ಹಿಟ್ಟನ್ನು ವೃತ್ತಾಕಾರವಾಗಿ ಲಟ್ಟಿಸಿಕೊಳ್ಳಿ. ಚಾಕುವಿನಿಂದ ಡೈಮಂಡ್‌ ಶೇಪ್‌ನಲ್ಲಿ ಕತ್ತರಿಸಿ. ಪ್ರತಿ ತುಂಡನ್ನೂ ಬಿಡಿಬಿಡಿಯಾಗಿ ತೆಗೆದು ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.

ಸಗಣಿ ಉಂಡೆ ಕಟ್ಟಲು ಊರಿಡೀ ಓಡಾಟ

ಮೂರು ದಿನಗಳ ಕಾಲ ದೀಪಾವಳಿ ಆಚರಿಸ್ತಿದ್ವಿ. ಬೆಳಗ್ಗೆ ಐದಕ್ಕೇನೇ ಅಮ್ಮ ಏಳಿಸುತ್ತಿದ್ದರು. ಸೀಗೇಪುಡಿ ಸ್ನಾನ, ಪೂಜೆ, ಆಮೇಲೆ ತಿಂಡಿ. ಈಗ ಅಷ್ಟು ಬೇಗ ಏಳ್ಳೋಕೇ ಮನಸ್ಸಾಗಲ್ಲ. ಚಿಕ್ಕಂದಿನಲ್ಲಿ ಲಕ್ಷಿ ಪೂಜೆಯೊಂದನ್ನು ಬಿಟ್ಟು ಎಲ್ಲವನ್ನೂ ಶಾಸ್ತ್ರ ಪ್ರಕಾರವಾಗಿ ಮಾಡ್ತಿದ್ವಿ. ಹಾಗನ್ನೋದಕ್ಕಿಂತ ಅಮ್ಮ  ಮಾಡಿಸುತ್ತಿದ್ದರು ಅನ್ನೋದು ಹೆಚ್ಚು ಸೂಕ್ತ. ಸಗಣಿ ಉಂಡೆ ಕಟ್ಟಿ ಮನೆ ಮುಂದೆ ಇಟ್ಟು ಪೂಜೆ ಮಾಡೋದು ಪದ್ಧತಿ. ಅದಕ್ಕಾಗಿ ಸಗಣಿ ಉಂಡೆ ತರಲು ಅಮ್ಮ ನನ್ನನ್ನು ಅಟ್ಟುತ್ತಿದ್ದಳು. ನಾನು ಊರಿಡೀ ಅಲೆದು, ಹುಡುಕಿ, ಸೆಗಣಿ ಉಂಡೆಯನ್ನು ಕಟ್ಟಿ ತರುತ್ತಿದ್ದೆ. ಆಮೇಲೆ ಪಟಾಕಿ ಅಂದರೆ ಅಷ್ಟಕ್ಕಷ್ಟೆ. ಬರೀ ಶಾಸ್ತ್ರಕ್ಕಷ್ಟೇ ಪಟಾಕಿ ಹೊಡೀತಿದ್ದೆ. ಆ ದಿನಗಳೆಲ್ಲಾ ಈಗ ನೆನಪು. ಜೀವನ ಯಾವತ್ತೂ ಒಂದೇ ಥರ ಇರೋದಿಲ್ಲ ಅಲ್ವಾ? ಈಗ ಇದ್ದ ಸಮಯದಲ್ಲೇ ದೀಪಾವಳಿ ಆಚರಿಸ್ತೀನಿ. ತಕ್ಕ ಮಟ್ಟಿಗೆ ಅಡುಗೆಯನ್ನೂ ಮಾಡ್ತೀನಿ.
– ರೂಪಾ ಡಿ., ಐಪಿ ಎಸ್‌ ಅಧಿಕಾರಿ

ಗಸೆಗಸೆ ಪಾಯಸ 
ಬೇಕಾಗುವ ಸಾಮಗ್ರಿ: 3 ಚಮಚ ಗಸಗಸೆ, 1 ಚಮಚ ಅಕ್ಕಿ, ಅರ್ಧ ಕಪ್‌ ಕಾಯಿತುರಿ, 2 ಕಪ್‌ ನೀರು, 1 ಕಪ್‌ ಬೆಲ್ಲ, ಕೇಸರಿ, ಅರ್ಧ ಚಮಚ ಏಲಕ್ಕಿ ಪುಡಿ, 3 ಚಮಚ ಬಾದಾಮಿ.

ಮಾಡುವ ವಿಧಾನ: ಅಕ್ಕಿ, ಗಸಗಸೆ ಮತ್ತು ಬಾದಾಮಿಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಕಾಯಿತುರಿಯೊಂದಿಗೆ ಸೇರಿಸಿ ಗ್ರೈಂಡ್ ಮಾಡಿ. ನಂತರ ಬೆಲ್ಲದ ಪಾಕ ತಯಾರಿಸಿ ಅದಕ್ಕೆ ಗೆùಂಡ್‌ ಮಾಡಿದ ಮಿಶ್ರಣ ಮತ್ತು ಕೇಸರಿ ಸೇರಿಸಿ ಸ್ವಲ್ಪ ದಪ್ಪಗಾಗುವರೆಗೂ ಕುದಿಯಲು ಬಿಡಿ. ಜಪತೆಗೆ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಬಹುದು.

ಮಿಸ್‌ ಮಾಡ್ಕೊತಿದ್ದೀನಿ…

ಮುಂಚಿನಿಂದಲೂ, ಯಾವ ಹಬ್ಬವನ್ನೂ ನಮ್ಮ ಮನೇಲಿ ಗ್ರ್ಯಾಂಡ್ ಆಗೇನೂ ಆಚರಿಸುವುದಿಲ್ಲ. ನಮ್ಮ ಹಬ್ಬದ ಆಚರಣೆಗಳು ತುಂಬಾ ಸಿಂಪಲ್‌ ಆಗಿರುತ್ತವೆ. ಮಧ್ಯಮ ವರ್ಗದ ಕುಟುಂಬವಾದ್ದರಿಂದ ಎಲ್ಲರ ಮನೆಯಲ್ಲೂ ಹೇಗೆ ಆಚರಿಸುತ್ತಾರೋ, ನಮ್ಮದೂ ಅಷ್ಟೇ. ವಿಶೇಷವೇನಿಲ್ಲ. ಈಗ ಕ್ರಿಕೆಟ್‌ ತರಬೇತಿ, ಮ್ಯಾಚ್‌ ಅಂತ ಯಾವ ಹಬ್ಬಕ್ಕೂ ಊರಿಗೆ ಹೋಗೋಕೆ ಆಗ್ತಾ ಇಲ್ಲ. ಕುಟುಂಬದ ಜೊತೆ ಹಬ್ಬ ಆಚರಿಸಿ ತುಂಬ ಸಮಯವೇ ಆಯಿತು. ನಾವು ಚಿಕ್ಕವರಿದ್ದಾಗ ಹಬ್ಬಕ್ಕೆ ನಮ್ಮ ತಂದೆ ಎಲ್ಲರಿಗೂ ಹೊಸ ಬಟ್ಟೆ ತರುತ್ತಿದ್ದರು. ಆಗ ಅದೇ ದೊಡ್ಡ ಖುಷಿ ನಮಗೆ. ಹಬ್ಬದ ದಿನ ಮನೆ- ಮಂದಿಯೆಲ್ಲ ಪಟಾಕಿ ಸಿಡಿಸಿ ಮಜಾ ಮಾಡ್ತಿದ್ವಿ. ಈಗ ಅದೆಲ್ಲಾ ಮಿಸ್‌ ಮಾಡ್ಕೊತಿದ್ದೀನಿ. ದೀಪಾವಳಿಗೆ ಅಮ್ಮ ಮಾಡುವ ಹೂರಣದ ಹೋಳಿಗೆ ಅಂದ್ರೆ ನನಗೆ ತುಂಬಾ ಇಷ್ಟ.
– ರಾಜೇಶ್ವರಿ ಗಾಯಕ್ವಾಡ್‌, ಕ್ರಿಕೆಟ್‌ ಪಟು

ಕಡಲೆ ಬೇಳೆ ಹೋಳಿಗೆ 
ಬೇಕಾಗುವ ಸಾಮಗ್ರಿ: 1 ಕಪ್‌ ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಅರಿಶಿಣ, 3 ಚಮಚ ಕೊಬ್ಬರಿ ಎಣ್ಣೆ. ಹೂರಣ ತಯಾರಿಸಲು- 1 ಕಪ್‌ ಕಡಲೆಬೇಳೆ, 1 ಕಪ್‌ ಸಕ್ಕರೆ, ಏಲಕ್ಕಿ.

ಮಾಡುವ ವಿಧಾನ: ಕಡಲೆಬೇಳೆಯನ್ನು ತೊಳೆದು ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಳ್ಳಿ. ಮೈದಾಹಿಟ್ಟು, ಉಪ್ಪು ಮತ್ತು ಅರಿಶಿಣವನ್ನು ಬೌಲ್‌ಗೆ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಕಲೆಸಿ. ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಕಲೆಸಿ 20 ನಿಮಿಷ ಹಾಗೇ ಬಿಡಿ. ಬೇಯಿಸಿದ ಕಡಲೆಬೇಳೆಯನ್ನು ಸಕ್ಕರೆಯ ಜೊತೆ ಸೇರಿಸಿ ನೀರು ಹಾಕದೇ ಗ್ರೈಂಡ್ ಮಾಡಿ. ಹೂರಣದ ಈ ಮಿಶ್ರಣ ಉಂಡೆ ಮಾಡುವಷ್ಟು ಗಟ್ಟಿಯಾಗಿರಲಿ. ನಂತರ ಏಲಕ್ಕಿ ಪುಡಿ ಸೇರಿಸಿ ಉಂಡೆ ಕಟ್ಟಿ. ನಂತರ ಮೈದಾ ಹಿಟ್ಟಿನ ಉಂಡೆ ಮಾಡಿ, ಅದರ ಮಧ್ಯದಲ್ಲಿ ಹೂರಣದ ಉಂಡೆ ಸೇರಿಸಿ ಲಟ್ಟಿಸಿ. ಲಟ್ಟಿಸಿದ ಹೋಳಿಗೆಯನ್ನು ಮಧ್ಯ ಉರಿಯಲ್ಲಿ ಕಾವಲಿಯ ಮೇಲೆ ಹಾಕಿ ಬಿಸಿ ಮಾಡಿ.

ದೇವರ ಚಿತ್ರಾನ್ನ ಬಲು ರುಚಿ
ದೀಪಾವಳಿಯಂದು ನಾವು ಹುಬ್ಬಳ್ಳಿ ಕಡೆಯ ಸಂಪ್ರದಾಯವನ್ನು ಫಾಲೋ ಮಾಡ್ತೀವಿ. ಮನೆ ತುಂಬಾ ದೀಪ, ಕಳ ಇಡ್ತೀವಿ, ಮನೆದೇವ್ರು ಕದ್ರಿಮಣೆ ಹನುಮಂತಪ್ಪ, ಲಕ್ಷಿ ದೇವರ ಫೋಟೋಗೆ ಪೂಜೆ ಮಾಡ್ತೀವಿ. ಮುತ್ತೈದೆಯರನ್ನ ಕರೆಸ್ತೀವಿ. ಅಪ್ಪ ತೀರಿಕೊಂಡಿದ್ದರಿಂದ ಕಳೆದ ಸಲ ದೀಪಾವಳಿ ಆಚರಿಸಿರಲಿಲ್ಲ. ಆದರೆ ಈ ಬಾರಿ ಆಚರಿಸ್ತೀವಿ. ದೀಪಾವಳಿಯಂದು ಮಾಡುವ ಅಡುಗೆ ಮೊದಲು ದೇವರಿಗೆ ಸಲ್ಲಬೇಕು. ನಂತರ ನಮಗೆ. ಅದಕ್ಕೇ ದೇವರಿಗೆಂದೇ ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಿದ ಅಡುಗೆಯನ್ನು ಬಡಿಸ್ತೀವಿ. ಇಲ್ಲೊಂದು ವಿಷಯ ಹೇಳಲೇಬೇಕು. ನಾರ್ಮಲಿ ಹೇಗೆ ಚಿತ್ರಾನ್ನ ಮಾಡ್ತೀವೋ ಅವೇ ಪದಾರ್ಥಾನ ಬಳಸಿ ದೇವರಿಗೆ ಅಂತ ಮಾಡ್ತೀವಿ. ಆದರೆ ದೇವರಿಗೆ ಅಂತ ಮಾಡಿದ ಚಿತ್ರಾನ್ನ ತುಂಬಾ ಚೆನ್ನಾಗಿರುತ್ತೆ. ಆಶ್ಚರ್ಯ ಅಲ್ವಾ? ನಮ್ಮನೆಗೆ ಪುಟ್ಟಮ್ಮ ಬರ್ತಾಳೆ ಕೆಲಸಕ್ಕೆ. ಅವರಿಗೆ ಟೀ ಮಾಡಿಕೊಡೋದು ಬಿಟ್ರೆ ಅಡುಗೆ ಮನೆಗೆ ಕಾಲಿಡೋದಿಲ್ಲ. ಹಬ್ಬದ್‌ ಟೈಮಲ್ಲಿ ಅಮ್ಮನಿಗೆ ಅಷ್ಟಿಷ್ಟು ಸಹಾಯ ಮಾಡ್ತೀನಷ್ಟೆ. ಅಮ್ಮನ ಕೈಯ ಚಿರೋಟಿ ಅಂದ್ರೆ ತುಂಬಾ ಇಷ್ಟ.
– ಮಯೂರಿ, ಚಿತ್ರನಟಿ 

ಚಿರೋಟಿ
ಬೇಕಾಗುವ ಸಾಮಗ್ರಿ: 2 ಕಪ್‌ ಮೈದಾ, 2 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಮುಕ್ಕಾಲು ಕಪ್‌ ಸಕ್ಕರೆ ಪುಡಿ,  ಏಲಕ್ಕಿ ಪುಡಿ,  ರುಚಿಗೆ 2 ಚಮಚ ಅಕ್ಕಿ ಹಿಟ್ಟು, ಸಕ್ಕರೆ ಪಾಕ (ಬೇಕಾದರೆ ಮಾತ್ರ)  ತಯಾರಿಸಲು 1 ಕಪ್‌ ಸಕ್ಕರೆ, 1 ಕಪ್‌ ನೀರು.

ಮಾಡುವ ವಿಧಾನ: ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು, ತುಪ್ಪ ಹಾಕಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಸಕ್ಕರೆ ಪುಡಿಗೆ ಏಲಕ್ಕಿ ಪುಡಿ ಸೇರಿಸಿ ಇಡಿ. ಕರಿದ ಚಿರೋಟಿಯನ್ನು ಸಕ್ಕರೆಪಾಕದಲ್ಲಿ ಮುಳುಗಿಸುವುದಾದರೆ ಒಂದೆಳೆ ಹದದಲ್ಲಿ ಪಾಕ ತಯಾರಿಸಿ, ಅದಕ್ಕೆ ಏಲಕ್ಕಿ ಪುಡಿ ಸೇರಿಸಿ. ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟಿಗೆ ತುಪ್ಪ ಸೇರಿಸಿಟ್ಟುಕೊಳ್ಳಿ.

ಮೈದಾಹಿಟ್ಟನ್ನು ಲಿಂಬೆಹಣ್ಣಿನ ಗಾತ್ರದ ಉಂಡೆಗಳನ್ನಾಗಿ ಮಾಡಿ, ರೊಟ್ಟಿಯಂತೆ ಲಟ್ಟಿಸಿ. ರೊಟ್ಟಿಯ ಮೇಲೆ ಅಕ್ಕಿಹಿಟ್ಟು-ತುಪ್ಪದ ಮಿಶ್ರಣ ಸವರಿ, ಮೇಲೆ ಮತ್ತೂಂದು ರೊಟ್ಟಿ ಹಾಕಿ. ಹೀಗೆ ಒಂದರ ಮೇಲೊಂದರಂತೆ ಮೂರರಿಂದ ನಾಲ್ಕು ರೊಟ್ಟಿಗಳನ್ನು ರೋಲ್‌ ಮಾಡಿ ನಂತರ ಚಾಕುವಿನಿಂದ ವೃತ್ತಾಕಾರದಲ್ಲಿ ಕತ್ತರಿಸಿ.

ಹಾಗೆ ಕತ್ತರಿಸಿದ ಹಿಟ್ಟನ್ನು ಲಟ್ಟಣಿಗೆಯಿಂದ ಪೂರಿಯಂತೆ ಲಟ್ಟಿಸಿ. ನಂತರ ಅದನ್ನು ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಬಿಸಿ ಬಿಸಿ ಇರುವಾಗಲೇ ಅದರ ಮೇಲೆ ಸಕ್ಕರೆ ಪುಡಿಯನ್ನು ಉದುರಿಸಿ. ಚಿರೋಟಿಯನ್ನು ಸಕ್ಕರೆಪಾಕದಲ್ಲಿ ಮುಳುಗಿಸುವುದಾದರೆ, ಸಕ್ಕರೆ ಪುಡಿ ಉದುರಿಸುವುದರ ಬದಲು ಚಿರೋಟಿಯನ್ನು ಪಾಕದಲ್ಲಿ ಹಾಕಿ. ನಂತರ ಅದನ್ನು ಪಾಕದಿಂದ ಎತ್ತಿ ವಾರ-ಹತ್ತು ದಿನಗಳವರೆಗೂ ಸ್ಟೋರ್‌ ಮಾಡಬಹುದು.

ಢಂ ಅನ್ನೋ ಪಟಾಕಿ ಹೊಡೆಯಲ್ಲ!

ಅಣ್ಣ- ನಾನು ಕೆಲಸದಲ್ಲಿರೋದರಿಂದ ಹಬ್ಬಕ್ಕೆ ಹೋದಾಗ ಕೆಲ ಸರ್ತಿ ನಾನು ಬಂದರೆ ಅವನಿರಲ್ಲ, ಅವ್ನು ಬಂದಿದ್ರೆ ನಾನು ಹೋಗಿರಲ್ಲ. ಹಿಂಗಾಗಿರುತ್ತೆ. ಎಲ್ಲರೂ ಸೇರಿದಾಗ ಖುಷಿ ದುಪ್ಪಟ್ಟು. ತೀರ್ಥಹಳ್ಳಿ ಹತ್ರ ಇರೋ ತೂದೂರು ನಮ್ಮೂರು. ನಮ್ಮ ಮಲಾ°ಡ್‌ ಕಡೆ ದೀಪಾವಳಿ ಅಂದ್ರೆ ವಿಶೇಷ. ನಾನಾ ಥರದ ಪದ್ಧತಿಗಳನ್ನ ಆಚರಿಸ್ತೀವಿ. ಲಕ್ಷಿ ಪೂಜೆ, ಗೋಪೂಜೆಯನ್ನೂ ಮಾಡ್ತೀವಿ. ಪಟಾಕೀನೂ ಹೊಡೀತೀನಿ ಆದರೆ ಢಂ ಅನ್ನೋಂಥದ್ದಲ್ಲ, ಚಿಕ್‌ ಚಿಕ್‌ದು! ಸಪ್ಪೆ ರೊಟ್ಟಿ ಮಾಡಿ ದನದ ಕುತ್ತಿಗೆಗೆ ಕಟಾ¤ರೆ. ಆಮೇಲೆ ಅದನ್ನು ಯಾರಾದರೂ ಮುರಿದುಕೊಂಡು ತಿನ್ನುತ್ತಾರೆ. ಅದು ಬಿಟ್ರೆ ದೀಪದ ಕೋಲಿನ ಶಾಸ್ತ್ರ ಅಂತ ಮಾಡ್ತೀವಿ. ಕೋಲಿಗೆ ಬಟ್ಟೆ ಕಟ್ಟಿ ಎಣ್ಣೇನಲ್ಲಿ ಅದ್ದಿ ಬೆಂಕಿ ಹಚ್ಚಿ ಮನೆ ಹತ್ರ ನಿಲ್ಲಿಸ್ತಾರೆ. ಇವೆಲ್ಲಾ ಭೂಮಿ ಋಣ ತೀರಿಸೋಕೆ ಅಂತ ಮಾಡೋ ಶಾಸ್ತ್ರಗಳಂತೆ. ಇನ್ನು ಅಮ್ಮ ಮಾಡೋ ಹಬ್ಬದಡುಗೆ ರುಚಿ ನೆನೆಸಿಕೊಂಡೇ ಬಾಯಲ್ಲಿ ನೀರೂರುತ್ತಿದೆ. ನಮ್‌ ಕಡೆ ಚಟ್ಟಂಬಡೆ ತುಂಬಾ ಫೇಮಸ್‌.
– ಶರ್ಮಿತಾ ಶೆಟ್ಟಿ, ಸುದ್ದಿ ನಿರೂಪಕಿ 

ಚಟ್ಟಂಬಡೆ
ಬೇಕಾಗುವ ಸಾಮಗ್ರಿ:  1 ಕಪ್‌ ಕಡಲೆಬೇಳೆ, 2 ಹಿಡಿ ಕೊತ್ತಂಬರಿ ಸೊಪ್ಪು, 1 ಹಿಡಿ ಕರಿಬೇವು, 2-3 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ರವೆ (ಬೇಕಾದರೆ ಮಾತ್ರ), ಕರಿಯಲು ಎಣ್ಣೆ.

ಮಾಡುವ ವಿಧಾನ: ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೆನೆಸಿ, ನೀರು ಬಸಿದು ಇಟ್ಟುಕೊಳ್ಳಿ. ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪನ್ನು ಸಣ್ಣಕ್ಕೆ ಕತ್ತರಿಸಿ. ಹಸಿಮೆಣಸಿನ ಕಾಯಿ ಮತ್ತು ಕಡಲೆಬೇಳೆಯನ್ನು ಮಿಕ್ಸರ್‌ನಲ್ಲಿ ಹಾಕಿ, ನೀರು ಹಾಕದೆ ತರಿತರಿಯಾಗಿ ಗ್ರೈಂಡ್ ಮಾಡಿ. ಆ ಹಿಟ್ಟಿಗೆ ಕರಿಬೇವು, ಕೊತ್ತಂಬರಿ ಸೊಪ್ಪು, ರವೆ ಮತ್ತು ಉಪ್ಪು ಸೇರಿಸಿ ಕಲೆಸಿ ಉಂಡೆ ಮಾಡಿ. ನಂತರ ಅದನ್ನು ಸ್ವಲ್ಪ ಚಪ್ಪಟೆಯಾಗಿ ಒತ್ತಿ ಎಣ್ಣೆಯಲ್ಲಿ ಕರಿಯಿರಿ.

*ನಿರೂಪಣೆ:ಹರ್ಷವರ್ಧನ್ ಸುಳ್ಯ 

Advertisement

Udayavani is now on Telegram. Click here to join our channel and stay updated with the latest news.

Next