Advertisement

ಅಶ್ವತ್ಥಾಮನಾದ ಶಿವರಾಜ್‌ಕುಮಾರ್‌

12:15 PM Nov 02, 2020 | Suhan S |

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ಅವರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡಬೇಕು ಎಂದು ಅವರ ಅಭಿಮಾನಿಗಳು ಹೇಗೆ ಬಯಸುತ್ತಾರೋ, ಅದೇ ರೀತಿ ಅವರಿಂದ ವಿಭಿನ್ನ ಪಾತ್ರಗಳನ್ನು ಮಾಡಿಸಬೇಕೆಂದು ಕನಸುಕಾಣುವ ನಿರ್ದೇಶಕ, ನಿರ್ಮಾಪಕರ ಸಂಖ್ಯೆಯೂ ದೊಡ್ಡದಿದೆ. ಅದಕ್ಕೆ ಕಾರಣ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸುವ ಸಾಮರ್ಥ್ಯ ಶಿವರಾಜ್‌ ಕುಮಾರ್‌ ಅವರಿಗಿರೋದು. ಈಗ ಯಾಕೆ ಈ ಮಾತು ಎಂದು ನೀವು ಕೇಳಬಹುದು. ಶಿವರಾಜ್‌ ಕುಮಾರ್‌ ಈಗ ಪೌರಾಣಿಕ ಪಾತ್ರವೊಂದಕ್ಕೆ ಜೀವ ತುಂಬಲು ಸಿದ್ಧರಾಗಿದ್ದಾರೆ. ಅದು ಮಹಾಭಾರತದಲ್ಲಿ ಬರುವ ಪಾತ್ರ!

Advertisement

ಹೀಗೆಂದರೆ ನಿಮಗೆ ಆಶ್ವರ್ಯವಾಗಬಹುದು, ಯಾವ ಪಾತ್ರ ಎಂಬ ಕುತೂಹಲವೂ ಹೆಚ್ಚಬಹುದು. ಮಹಾಭಾರತದಲ್ಲಿ ಬರುವ ಅಶ್ವತ್ಥಾಮ ಪಾತ್ರದಲ್ಲಿ ಶಿವರಾಜ್‌ಕುಮಾರ್‌ ಕಾಣಿಸಿಕೊಳ್ಳಲಿದ್ದಾರೆ. ಶಿವಣ್ಣ ಅವರನ್ನು ಅಶ್ವತ್ಥಾಮನಾಗಿ ತೋರಿಸಲು ಮುಂದಾಗಿರೋದು ನಿರ್ಮಾಪಕ ಪುಷ್ಕರ್‌. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಾ, ಕ್ರಿಯಾಶೀಲ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಪುಷ್ಕರ್‌ ಈಗ ಶಿವರಾಜ್‌ ಕುಮಾರ್‌ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನು ಸಚಿನ್‌ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶಿಸಿರುವ ಸಚಿನ್‌ ಈಗ ಎರಡನೇ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಅವರನ್ನು ಅಶ್ವತ್ಥಾಮನಾಗಿಸಲು ಮುಂದಾಗಿದ್ದಾರೆ.

ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುವ ಪುಷ್ಕರ್‌, “ಈ ಚಿತ್ರದ ಸ್ಕ್ರಿಪ್ಟ್ “ಅವನೇ ಶ್ರೀಮನ್ನಾರಾಯಣ’ ಸಮಯದಲ್ಲೇ ಫೈನಲ್‌ ಆಗಿತ್ತು. ಕಥೆ ತುಂಬಾ ಚೆನ್ನಾಗಿ ಬಂದಿದೆ. ಮಹಾಭಾರತದ ಅಶ್ವತ್ಥಾಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶ್ವತ್ಥಾಮ ಪಾತ್ರವನ್ನು ಪೌರಾಣಿಕ ಬ್ಯಾಕ್‌ಡ್ರಾಪ್‌ನಲ್ಲೇ ತೋರಿಸುತ್ತೇವೆ. ಆ ನಂತರ ಕಥೆ ಮತ್ತೂಂದು ಆಯಾಮಕ್ಕೆ ತೆರೆದುಕೊಳ್ಳಲಿದೆ. ನನಗೆ ಮಹಾಭಾರತ, ರಾಮಾಯಣದ ಪಾತ್ರಗಳನ್ನು ಸಿನಿಮಾಕ್ಕೆ ಅಳವಡಿಸಿಕೊಳ್ಳಬೇಕೆಂಬ ಕನಸು. ಅದರ ಒಂದು ಭಾಗವೇ ಈ ಅಶ್ವತ್ಥಾಮನ ಪಾತ್ರ. ಎಲ್ಲವೂ ಅಂದುಕೊಂಡಂತೆ ಆದರೆ ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗವಾಗಲಿದೆ’ ಎನ್ನುತ್ತಾರೆ. ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರಲಿದೆಯಂತೆ.ಪಾತ್ರವರ್ಗದಿಂದ ಹಿಡಿದು ಬಜೆಟ್‌ ಎಲ್ಲವೂ ದೊಡ್ಡದಾಗಿರಲಿದೆ. ಸದ್ಯಕ್ಕೆ ಚಿತ್ರದ ಟೈಟಲ್‌ ಅಂತಿಮವಾಗಿಲ್ಲ.

ಪುಷ್ಕರ್‌ ಬ್ಯಾನರ್‌ನಿಂದ ಮುಂದಿನ ವರ್ಷ 5ಕ್ಕೂ ಹೆಚ್ಚು ಚಿತ್ರ ರಿಲೀಸ್‌ :  ನಿರ್ಮಾಪಕ ಪುಷ್ಕರ್‌ ಸದ್ಯ ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಅವರ ನಿರ್ಮಾಣದಲ್ಲಿ “ಅವತಾರ್‌ ಪುರುಷ’, “ಟೆನ್‌’, “ಚಾರ್ಲಿ’ ಚಿತ್ರಗಳು ಬಹುತೇಕ ಚಿತ್ರೀಕರಣ ಮುಗಿಸಿವೆ. ಇನ್ನು, ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತ ಸಾಗರದಾಚೆ ಎಲ್ಲೋ’ ಜನವರಿಯಲ್ಲಿ ಆರಂಭವಾಗಿ ಮಾರ್ಚ್‌ ವೇಳೆಗೆ ಚಿತ್ರೀಕರಣ ಮುಗಿಸುವ ಯೋಚನೆ ಇದೆ. ಇದರ ಜೊತೆಗೆ ಮಲಯಾಳಂ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ. ಇವೆಲ್ಲವನ್ನು ಲೆಕ್ಕ ಹಾಕಿದರೆ ಮುಂದಿನ ವರ್ಷ ಪುಷ್ಕರ್‌ ಬ್ಯಾನರ್‌ನಿಂದ ಐದಕ್ಕೂ ಹೆಚ್ಚು ಚಿತ್ರಗಳು ತೆರೆಗೆ ಬರುವ ಸಾಧ್ಯತೆ ಇದೆ. ಶಿವಣ್ಣ ನಟನೆಯ ಸಿನಿಮಾವೂ 2021ರ ವರ್ಷಾಂತ್ಯಕ್ಕೆ ತೆರೆಗೆ ಬರಬಹುದು. ಇದರ ಜೊತೆಗೆ “ರಾಬಿನ್‌ಹುಡ್‌’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದಲ್ಲದೇ ತಾವೇ ಹೀರೋ ಆಗಿ ನಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಶ್ವತ್ಥಾಮ ಟೈಟಲ್‌ನಲ್ಲಿ ಕಿಚ್ಚ ಸುದೀಪ್‌ ನಟನೆ :  ಪುಷ್ಕರ್‌ ನಿರ್ಮಾಣದ ಹೊಸ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅಶ್ವತ್ಥಾಮ ಪಾತ್ರ ಮಾಡಿದರೆ, “ಅಶ್ವತ್ಥಾಮ’ ಟೈಟಲ್‌ನಲ್ಲಿ ಸುದೀಪ್‌ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಟೈಟಲ್‌ ಅನೌನ್ಸ್‌ ಮಾಡಿರುವ ಸುದೀಪ್‌, ನಿರ್ದೇಶಕ ಅನೂಪ್‌ ಭಂಡಾರಿಗೆ “ಅಶ್ವತ್ಥಾಮ’ ನಿರ್ದೇಶಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಈ ಚಿತ್ರ ಕಿಚ್ಚ ಕ್ರಿಯೇಶನ್ಸ್‌ನಡಿಯಲ್ಲಿ ನಿರ್ಮಾಣವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next