ಹನೂರು: ಶ್ರೀಗಂಧದ ಮರವನ್ನು ಕಡಿದು ತುಂಡುಗಳಾಗಿ ಪರಿವರ್ತಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 13 ಕೆ.ಜಿ ತೂಕದ ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಘಟನೆ ವಿವರ
ಹನೂರು ತಾಲೂಕಿನ ಬೂದಿಪಡುಗ ಗ್ರಾಮದ ಸಿದ್ದೇಗೌಡ (38) ಮತ್ತು ಕೊಳ್ಳೇಗಾಲ ತಾಲೂಕಿನ ಕರಳೆಕಟ್ಟೆ ಗ್ರಾಮದ ರುದ್ರ (30) ಈ ಇಬ್ಬರು ಆರೋಪಿಗಳು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ಆಂಡಿಪಾಳ್ಯ ಗಸ್ತಿನ ಚಿಕ್ಮಮ್ಮನ ಕೆರೆ ಅರಣ್ಯ ಪ್ರದೇಶದಲ್ಲಿ ಗಂಧದ ಮರವನ್ನು ಕಡಿದು ತುಂಡುಗಳಾಗಿ ಪರಿವರ್ತಸುತ್ತಿರುವುದಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ದೊರೆತಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳ ತಂಡ ಡಿಎಫ್‍ಓ ಏಡುಕೊಂಡಲು ಮತ್ತು ಎಸಿಎಫ್ ವನಿತಾ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ರುದ್ರ ಎಂಬಾತ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾನೆ. ಮತ್ತೋರ್ವ ಆರೋಪಿ ಸಿದ್ದೇಗೌಡನನ್ನು ವಶಕ್ಕೆ ಪಡೆದು ಬಂಧಿತನಿಂದ 13 ಕೆ.ಜಿ ತೂಕದ 1 ಹಸಿ ಗಂಧದ ತುಂಡುಗಳು, 1 ಚಿಕ್ಕ ಗರಗಸ, 1 ಮಚ್ಚು, ಮತ್ತು 1 ಕೊಡಲಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಪಿ.ಜಿ.ಪಾಳ್ಯ ಅರಣ್ಯ ವಲಯದಲ್ಲಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿ, ರುದ್ರನ ಪತ್ತೆಗೆ ಬಲೆ ಬೀಸಲಾಗಿದೆ.
ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಸೈಯದ ಸಾಬ್ ನಧಾಫ್, ಉಪ ವಲಯ ಅರಣ್ಯಾಧಿಕಾರಿ ನವೀನ್‍ಕುಮಾರ್.ವಿ, ಅರಣ್ಯ ರಕ್ಷಕ ವಿಠ್ಠಲ ಬೀರಪ್ಪ ಶಿರಗಾಂವಿ, ಹೊರಗುತ್ತಿಗೆ ನೌಕರರಾದ ಮುರುಗೇಶ್, ನಂದೀಶ್, ಮಾದೇಶ್, ವಾಹನ ಚಾಲಕ ಶಿವಕುಮಾರ್ ಇದ್ದರು.