Advertisement

Rewind 2023; ಹೊಸಬರ ಕಮಾಲ್‌ ಸ್ಟಾರ್‌ ಗಳಿಗೆ ಸವಾಲ್‌: ಬಂದಿದ್ದು ಹಲವು-ಗೆದ್ದಿದ್ದು ಕೆಲವು

12:03 PM Dec 29, 2023 | Team Udayavani |

2023 ಮುಗಿಯುತ್ತಾ ಬಂದಿದೆ. ಕನ್ನಡ ಚಿತ್ರರಂಗದ ದೃಷ್ಟಿಯಿಂದ ಈ ವರ್ಷವನ್ನು ರಿವೈಂಡ್‌ ಮಾಡಿ ನೋಡಿದರೆ 2023 ಕನ್ನಡ ಚಿತ್ರರಂಕ್ಕೆ ದೊಡ್ಡ ಅದೃಷ್ಟದ ವರ್ಷ ಎಂದು ಹೇಳುವುದು ಕಷ್ಟ. ಒಂದೇ ಮಾತಲ್ಲಿ ಹೇಳುವುದಾದರೆ ಸ್ಯಾಂಡಲ್‌ವುಡ್‌ಗೆ ಇದು ಸಾಧಾರಣ ವರ್ಷವಾಗಿ ಕಾಣುತ್ತದೆ. ಈ ವರ್ಷ ಬರೋಬ್ಬರಿ 213 ಪ್ಲಸ್‌ ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಇದರ ಜೊತೆಗೆ 10 ತುಳು ಚಿತ್ರಗಳು ಕೂಡಾ ಬಂದಿವೆ. 2023ರಲ್ಲಿ ಸ್ಯಾಂಡಲ್‌ವುಡ್‌ನ‌ ಸೂಪರ್‌ ಹಿಟ್‌ ಸಿನಿಮಾ ಯಾವುದು ಎಂದು ಕೇಳಿದರೆ ಒಮ್ಮೆಲೇ ಉತ್ತರ ಕೊಡುವುದು ಕಷ್ಟ. ಏಕೆಂದರೆ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿ, ಪರಭಾಷಾ ಚಿತ್ರರಂಗಗಳು ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿಲ್ಲ.

Advertisement

ಕಳೆದ ವರ್ಷ ವರ್ಷ ಕೇವಲ ಕರ್ನಾಟಕವಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದ್ದು ಕನ್ನಡ ಚಿತ್ರರಂಗದ ಹೆಗ್ಗಳಿಕೆಯಾಗಿತ್ತು. ಕಲೆಕ್ಷನ್‌ನಿಂದ ಹಿಡಿದು ಗುಣಮಟ್ಟದ ಸಿನಿಮಾಗಳನ್ನು ನೀಡುವ ಮೂಲಕ ಸ್ಯಾಂಡಲ್‌ವುಡ್‌ 2022ರಲ್ಲಿ ಮಿಂಚಿತ್ತು. “ಕೆಜಿಎಫ್-2’ನಿಂದ ಆರಂಭವಾದ ಕನ್ನಡ ಚಿತ್ರರಂಗ ಯಶಸ್ಸಿನ ಯಾತ್ರೆ “ಕಾಂತಾರ’ದವರೆಗೆ ಭರ್ಜರಿಯಾಗಿ ಸಾಗಿಬರುವ ಮೂಲಕ ಸಿನಿಮಾ ಮಂದಿಯ ವಿಶ್ವಾಸ ಹಾಗೂ ಚಿತ್ರರಂಗದ ಘನತೆ ಹೆಚ್ಚುವಂತಾಗಿತ್ತು. ಆದರೆ, 2023ರಲ್ಲಿ ಆ ತರಹದ ಯಾವ ಪ್ರಯತ್ನವೂ ಆಗಲಿಲ್ಲ. ಕೆಲವು ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲಿ ಬಿಡುಗಡೆಯಾದರೂ ಅದು ಸದ್ದು ಮಾಡುವಲ್ಲಿ ವಿಫ‌ಲವಾದವು.

ಕಾರಣಾಂತರಗಳಿಂದ ಬಿಡುಗಡೆ ಮುಂದಕ್ಕೆ ಹೋದ ಚಿತ್ರಗಳು, ಚಿತ್ರೀಕರಣಕ್ಕೆ ಅರ್ಧಕ್ಕೆ ನಿಲ್ಲಿಸಿದ ಸಿನಿಮಾಗಳು… ಹೀಗೆ ನಾನಾ ಸಮಸ್ಯೆಗಳನ್ನು ಎದುರಿಸಿದ ಸಿನಿಮಾಗಳೆಲ್ಲವೂ ಈ ವರ್ಷ ಬಿಡುಗಡೆಯಾಗಿವೆ. ಇದೇ ಕಾರಣದಿಂದ ಈ ವರ್ಷ ಸಿನಿಮಾ ಬಿಡುಗಡೆಯ ಸಂಖ್ಯೆಯೂ ಏರಿಕೆಯಾಗಿದೆ. ಬಿಡುಗಡೆಯಾದ ಬಹುತೇಕ ಸಿನಿಮಾಗಳು ನಿರ್ಮಾಪಕ, ನಿರ್ದೇಶಕ, ಕಲಾವಿದರಲ್ಲಿ ಮಂದಹಾಸ ಮೂಡಿಸಿದರೆ, ಇನ್ನೊಂದಿಷ್ಟು ಸಿನಿಮಾಗಳು ಹೊಸಬರ ಕನಸು ಭಗ್ನಗೊಳಿಸಿವೆ. ಹಾಗಂತ ಕನ್ನಡ ಚಿತ್ರರಂಗ ಎದೆಗುಂದಿಲ್ಲ. ದಿನದಿಂದ ದಿನಕ್ಕೆ ಹೊಸ ಹೊಸ ನಿರ್ಮಾಪಕ, ನಿರ್ದೇಶಕರು ಬರುತ್ತಲೇ ಇದ್ದಾರೆ

ಗಮನ ಸೆಳೆದವು ಹಲವು

ಪ್ರತಿ ವರ್ಷ ಸಿನಿಮಾಗಳ ಸೋಲು-ಗೆಲುವಿನ ಲೆಕ್ಕಾಚಾರದೊಂದಿಗ ಚಿತ್ರರಂಗ ಹೊಸ ವರ್ಷಕ್ಕೆ ತೆರೆದುಕೊಳ್ಳುತ್ತಿತ್ತು. ಆದರೆ, ಈ ವರ್ಷ ಆ ರೀತಿ ಲೆಕ್ಕಾಚಾರ ಹಾಕೋದು ಕಷ್ಟ. ಏಕೆಂದರೆ ಮೆಚ್ಚುಗೆ ಪಡೆದ ಅದೆಷ್ಟೋ ಸಿನಿಮಾಗಳು ಚಿತ್ರಮಂದಿರದಲ್ಲಿ ಹೆಚ್ಚು ದಿನ ನಿಲ್ಲಲಿಲ್ಲ. ಇನ್ನು ಕೆಲವು ಸಿನಿಮಾಗಳು ಚಿತ್ರಮಂದಿರದಲ್ಲಿ ಓಡದಿದ್ದರೂ ಆ ನಂತರ ಓಟಿಟಿ ಫ್ಲಾಟ್‌ಫಾರಂಗಳಲ್ಲಿ ಸೂಪರ್‌ ಹಿಟ್‌ ಆದವು. ಮತ್ತೂಂದಿಷ್ಟು ಸ್ಟಾರ್‌ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವ ಮುನ್ನವೇ ದೊಡ್ಡ ಮಟ್ಟದಲ್ಲಿ ಬಿಝಿನೆಸ್‌ ಮಾಡಿ ಸದ್ದು ಮಾಡಿದವು. ಆದರೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ ಯಾವುದು ಎಂದು ಕೇಳಿದರೆ ಉತ್ತರಿಸೋದು ಕಷ್ಟ. “ಡೇರ್‌ ಡೆವಿಲ್‌ ಮುಸ್ತಫಾ’, “ಹಾಸ್ಟೆಲ್‌ ಹುಡುಗರು’, “ಹೊಂದಿಸಿ ಬರೆಯಿರಿ’, “ಘೋಸ್ಟ್‌’, “ಸಪ್ತಸಾಗರದಾಚೆ ಎಲ್ಲೋ 1,2′, “ಕೌಸಲ್ಯ ಸುಪ್ರಜಾ ರಾಮ’ ಸೇರಿದಂತೆ ಇನ್ನು ಕೆಲವು ಬೆರಳೆಣಿಕೆಯ ಚಿತ್ರಗಳು ಮಾತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಸಿನಿಮಾದ ಆರಂಭದ ಬಿಝಿನೆಸ್‌ ವಿಚಾರದಲ್ಲಿ ಸದ್ದು ಮಾಡಿದ ಚಿತ್ರವೆಂದರೆ ಅದು ಆರ್‌.ಚಂದ್ರು ನಿರ್ದೇಶನದ “ಕಬj’ ಚಿತ್ರ. ಸ್ಯಾಟ್‌ಲೆçಟ್‌, ಓಟಿಟಿ, ಡಬ್ಬಿಂಗ್‌, ವಿತರಣಾ ಹಕ್ಕು… ಹೀಗೆ ದೊಡ್ಡ ಮಟ್ಟದಲ್ಲಿ ಬಿಝಿನೆಸ್‌ ಮಾಡಿತು.

Advertisement

ವಿಭಿನ್ನ ಪ್ರಯತ್ನಗಳಲ್ಲಿ ಮಿಂಚಿದವರು

ಕೆಲವು ಪಾತ್ರಗಳು ತಟ್ಟನೇ ಗಮನ ಸೆಳೆದು, ಏನೋ ಬೇರೆ ರೀತಿ ಪ್ರಯತ್ನಿಸಿದ್ದಾರಲ್ಲ ಎಂಬ ಉದ್ಗಾರ ಬರುತ್ತದೆಯಲ್ಲ, ಆ ತರಹದ ಒಂದಷ್ಟು ವಿಭಿನ್ನತೆ ಈ ವರ್ಷ ತೆರೆಮೇಲೆ ಕಾಣಿಸಿಕೊಂಡಿವೆ. ಸಾಮಾನ್ಯವಾಗಿ ಹೀರೋ ಎಂದರೆ ಎಂಟು ಜನರಿಗೆ ಹೊಡೆಯುವವ, ಕಾಲಿಟ್ಟಾಗ ತರಗೆಲೆಗಳು ಹಾರುವ “ಶಕ್ತಿ’ವಂತ ಎಂದು ನಂಬಿಕೊಂಡೇ ಹೀರೋ ಇಂಟ್ರೋಡಕ್ಷನ್‌ ಆಗುವ ಸಿನಿಮಾಗಳ ಮಧ್ಯೆ ಈ ವರ್ಷ ಕೆಲವು ನಾಯಕ ನಟರು ಹೊಸ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲಿ ಮುಖ್ಯವಾಗಿ ರಾಜ್‌ ಬಿ ಶೆಟ್ಟಿ, ರಕ್ಷಿತ್‌ ಶೆಟ್ಟಿ, ನವೀನ್‌ ಶಂಕರ್‌ ಗಮನ ಸೆಳೆಯುತ್ತಾರೆ. ಡೈಲಾಗ್ಸ್‌ ಮೇಲೆ ಡೈಲಾಗ್‌ ಬಿಟ್ಟು ಶಿಳ್ಳೆ ಗಿಟ್ಟಿಸಿಕೊಳ್ಳುವ ಹೀರೋಗಳ ಮಧ್ಯೆ ರಾಜ್‌ ಬಿ ಶೆಟ್ಟಿ ತಮ್ಮ “ಟೋಬಿ’ ಚಿತ್ರದಲ್ಲಿ ಮಾತೇ ಬಾರದ, ರೆಗ್ಯುಲರ್‌ ಪ್ಯಾಟರ್ನ್ ಹೀರೋಯಿಸಂ ಇಲ್ಲದ ಪಾತ್ರದಲ್ಲಿ ನಟಿಸಿ ಗಮನ ಸೆಳೆದರು. ಇದರ ಜೊತೆಗೆ “ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿನ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.ಇನ್ನು, ನಟ ರಕ್ಷಿತ್‌ ಶೆಟ್ಟಿ ಕೂಡಾ ತಮ್ಮ “ಸಪ್ತಸಾಗರದಾಚೆ ಎಲ್ಲೋ-1,2′ ಚಿತ್ರಗಳಲ್ಲೂ ಹೊಸ ಶೈಲಿ ಹಾಗೂ ವಿಭಿನ್ನ ಶೇಡ್‌ನ‌ ಪಾತ್ರಗಳಲ್ಲಿ ಮಿಂಚಿದರೆ, “ಕ್ಷೇತ್ರಪತಿ’ ಚಿತ್ರದಲ್ಲಿ ನವೀನ್‌ ಶಂಕರ್‌ ಕೂಡಾ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ.

ಇನ್ನು ನಟ ಶಿವರಾಜ್‌ ಕುಮಾರ್‌ “ಘೋಸ್ಟ್‌’ನಲ್ಲಿ ರೆಗ್ಯುಲರ್‌ ಶೈಲಿಯ ಹಾಡು, ಫೈಟ್‌, ಡ್ಯಾನ್ಸ್‌ ಬಿಟ್ಟ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದ್ದರು. ಇದರ ಜೊತೆಗೆ ತಮಿಳಿನ “ಜೈಲರ್‌’ ಪಾತ್ರ ಶಿವಣ್ಣನಿಗೆ ಒಳ್ಳೆಯ ಮೈಲೇಜ್‌ ಕೊಟ್ಟಿದ್ದು ಸುಳ್ಳಲ್ಲ. ಡಾರ್ಲಿಂಗ್‌ ಕೃಷ್ಣ ಅವರ “ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಪಾತ್ರವನ್ನು ಜನ ಇಷ್ಟಪಟ್ಟಿದ್ದರು.ಉಳಿದಂತೆ ನಾಯಕಿಯರಾದ ಚೈತ್ರಾ ಆಚಾರ್‌, ರುಕ್ಮಿಣಿ ವಸಂತ್‌, ಬೃಂದಾ, ಮಿಲನಾ ನಾಗರಾಜ್‌ ಕೂಡಾ ಈ ವರ್ಷ ತಮ್ಮ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ.

ನವತಂಡಗಳ ಭರ್ಜರಿ ಶೋ

2023ರಲ್ಲಿ 186ಕ್ಕೂ ಹೆಚ್ಚು ಹೊಸಬರ ಚಿತ್ರಗಳು ಬಿಡುಗಡೆಯಾಗಿರೋದು ಸ್ಪಷ್ಟ. ಅಲ್ಲಿಗೆ ಒಂದು ಸಾಬೀತಾಗಿದೆ, ಪ್ರತಿ ವರ್ಷದಂತೆ ಈ ವರ್ಷವೂ ಕನ್ನಡ ಚಿತ್ರರಂಗವನ್ನು ಸದಾ ಚಟುವಟಿಕೆಯಲ್ಲಿ ಇಟ್ಟಿರೋದು ಹೊಸಬರೇ. ಇಲ್ಲಿ ಲವ್‌ಸ್ಟೋರಿ, ಆ್ಯಕ್ಷನ್‌, ಹಾರರ್‌, ಥ್ರಿಲ್ಲರ್‌, ಸಸ್ಪೆನ್ಸ್‌, ಸೇರಿದಂತೆ ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸಿದ್ದಾರೆ. ಬಹುತೇಕ ಸಿನಿಮಾಗಳು ಅನುಭವದ ಹಾಗೂ ಪೂರ್ವತ ಯಾರಿಯ ಕೊರತೆಯಿಂದ ಸದ್ದಿಲ್ಲದೇ ಚಿತ್ರಮಂದಿರದಿಂದ ಮಾಯವಾದರೆ, ಒಂದಷ್ಟು ಚಿತ್ರಗಳು ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ, ಮೊದಲ ಗೆಲುವು ಸಾಧಿಸಿದ್ದು, ದೊಡ್ಡ ಬಿಝಿನೆಸ್‌ ಮಾಡಿದ ಮೊದಲ ಈ ವರ್ಷ ಹೊಸಬರಿಗೆ ಸಲ್ಲುತ್ತದೆ

ರವಿಪ್ರಕಾಶ್ ರೈ

Advertisement

Udayavani is now on Telegram. Click here to join our channel and stay updated with the latest news.

Next