Advertisement
ಹೊಸಬರು ಕೆಟ್ಟ ಸಿನಿಮಾ ಮಾಡುತ್ತಿದ್ದಾರಾ ಎಂದರೆ ಖಂಡಿತಾ ಇಲ್ಲ. ಸದ್ಯ ಕನ್ನಡ ಚಿತ್ರರಂಗಕ್ಕೆ ಇಂಜಿನಿಯರಿಂಗ್ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಮಂದಿ ಹೊಸ ಹೊಸ ಚಿಂತನೆಯೊಂದಿಗೆ ಬರುತ್ತಿದ್ದಾರೆ. ಅದೇ ಕಾರಣದಿಂದ ಇತ್ತೀಚೆಗೆ ಬರುತ್ತಿರುವ ಹೊಸಬರ ಸಿನಿಮಾಗಳು ರೆಗ್ಯುಲರ್ ಶೈಲಿ ಬಿಟ್ಟು, ಹೊಸತನದಿಂದ ಕೂಡಿರುತ್ತವೆ. ಆದರೆ, ಈ ಸಿನಿಮಾಗಳು ಜನರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ ಎಂಬುದು ಅನೇಕ ಹೊಸ ನಿರ್ಮಾಪಕ, ನಿರ್ದೇಶಕರಿಗೆ ಬೇಸರ ತರಿಸಿದೆ. ಇನ್ನೇನು ಬಾಯಿಮಾತಿನ ಮೂಲಕ ಸಿನಿಮಾ ತಲುಪುತ್ತಿದೆ ಎನ್ನುವಷ್ಟರಲ್ಲಿ ಆ ಸಿನಿಮಾಗಳು ಚಿತ್ರಮಂದಿರದಿಂದಲೇ ಹೊರಬಿದ್ದಿರುತ್ತವೆ.
Related Articles
Advertisement
ಸ್ಟಾರ್ ಗಳ ಪ್ರೋತ್ಸಾಹಬೇಕಿದೆ
ಒಂದು ಒಳ್ಳೆಯ ಸಿನಿಮಾವನ್ನು ಜನರಿಗೆ ತಲುಪಿಸುವಲ್ಲಿ ಇವತ್ತು ಸ್ಟಾರ್‌ಗಳ ಬೆಂಬಲದ ಅಗತ್ಯವಿದೆ. ಇತ್ತೀಚೆಗೆ “ಕಡಲತೀರ’ ಚಿತ್ರದ ನಿರ್ಮಾಪಕ ಕಂ ನಾಯಕ ಪಟೇಲ್ ವರುಣ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ನಾವು ಸಿನಿಮಾ ಚೆನ್ನಾಗಿ ಮಾಡಿದ್ದೇವೆ. ಆದರೆ, ನಮ್ಮಂತಹ ಹೊಸಬರ ಸಿನಿಮಾಗಳು ಜನರಿಗೆ ತಲುಪಲು ಸ್ಟಾರ್‌ಗಳ ಬೆಂಬಲ ಬೇಕಿದೆ. ಸಿನಿಮಾ ಚೆನ್ನಾಗಿದ್ದಾಗ ಆ ಕುರಿತು ಒಂದು ಟ್ವೀಟ್, ಒಂದು ಬೈಟ್ಸ್ ಸ್ಟಾರ್‌ಗಳಿಂದ ಸಿಕ್ಕರೆ ನಮ್ಮಂತಹ ಹೊಸಬರಿಗೆ ಅದು ಸಹಾಯವಾಗುತ್ತದೆ’ ಎಂದಿದ್ದರು. ಇದು ನಿಜ ಕೂಡಾ. ಸ್ಟಾರ್ ನಟರ ಅಭಿಮಾನಿ ವರ್ಗ ಹಾಗೂ ಅವರ ರೀಚ್ ದೊಡ್ಡದಿರುವುದರಿಂದ ಸ್ಟಾರ್‌ಗಳು ದೊಡ್ಡ ಮನಸ್ಸು ಮಾಡಿದರೆ, ಹೊಸಬರಿಗೆ ಆನೆಬಲ ಬಂದಂತಾಗುತ್ತದೆ.
ಸಕ್ಸಸ್ ರೇಟ್ ಗೆ ಸ್ಟಾರ್ ಜೊತೆ ಹೊಸಬರು ಮುಖ್ಯ
ಚಿತ್ರರಂಗದ ಸಕ್ಸಸ್ ರೇಟ್ ಗಮನದಲ್ಲಿಟ್ಟಾಗ ಕೇವಲ ಸ್ಟಾರ್ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳ ಗೆಲುವು ಕೂಡಾ ಅನಿವಾರ್ಯವಾಗುತ್ತದೆ. ವರ್ಷಕ್ಕೆ ಬಿಡುಗಡೆಯಾಗುವ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್‌ಗಳ ಸಿನಿಮಾ ಗಳೆಂದು 5-6 ಚಿತ್ರಗಳಷ್ಟೇ. ಮಿಕ್ಕಂತೆ ಹೊಸಬರದ್ದೇ ಮೆರವಣಿಗೆ. ಹೀಗಿರುವಾಗ ಹೊಸಬರ ಸಿನಿಮಾದ ಗೆಲುವು ಚಿತ್ರರಂಗದ ಸಕ್ಸಸ್ ರೇಟ್ ದೃಷ್ಟಿಯಿಂದಲೂ ಅನಿವಾರ್ಯ. ಇವತ್ತು ಹೊಸಬರು ಜನರಿಗೆ ಸಿನಿಮಾ ತಲುಪಿಸಲು ಕಷ್ಟಪಡುತ್ತಿದ್ದಾರೆ. ಸ್ಟಾರ್ ಸಿನಿಮಾ ಆದರೆ ಬೇಗನೇ ಜನರಿಗೆ ತಲುಪುತ್ತದೆ. ಪ್ರಮೋಶನ್‌ಗೆ ಹೆಚ್ಚು ಕಷ್ಟಪಡಬೇಕಿಲ್ಲ. ಆದರೆ, ನಿಜಕ್ಕೂ ಇವತ್ತು ಸಿನಿಮಾ ತಲುಪಿಸಲು ಕಷ್ಟಪಡುತ್ತಿರುವವರು ಹೊಸಬರು. ಬದಲಾದ ಪ್ರಮೋಶನ್ ಶೈಲಿಗೆ ಹೊಂದಿಕೊಳ್ಳುವುದು ಒಂದು ಕಷ್ಟವಾದರೆ, ಎರಡು ವಾರ ಚಿತ್ರಮಂದಿರದಲ್ಲಿ ಸಿನಿಮಾ ಉಳಿಸಿಕೊಳ್ಳುವುದು ಮತ್ತೂಂದು ಸವಾಲು. ಸಿನಿಮಾ ಚೆನ್ನಾಗಿದ್ದರೂ ಚಿತ್ರಮಂದಿರಕ್ಕೆ ಜನರನ್ನು ಕರೆತರುವುದು ನಿಜಕ್ಕೂ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಪ್ರೇಕ್ಷಕ ದೊಡ್ಡ ಮನಸ್ಸು ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಒಂದರೆರಡು ಹೊಸಬರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದರೆ ಹೊಸ ತಂಡಗಳ ಜೊತೆಗೆ ವಿತರಕರಿಗೆ, ಚಿತ್ರಮಂದಿರದವರಿಗೆ ಒಂದು ವಿಶ್ವಾಸ ಬರುತ್ತದೆ.
ರವಿಪ್ರಕಾಶ್ ರೈ