ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ಯಾವುದು ಎಂದರೆ ತಟ್ಟನೇ ಬರುವ ಉತ್ತರ ಮಾಸ್. ಅದು ಸತ್ಯ ಕೂಡಾ. ಮಾಸ್ ಸಿನಿಮಾಗಳಿಗೆ ಮಾಸ್ ಪ್ರೇಕ್ಷಕರನ್ನು ಬೇಗನೇ ಸೆಳೆಯುವ ಗುಣವಿದೆ. ಅದೇ ಕಾರಣದಿಂದ ಅಂತಹ ಸಿನಿಮಾಗಳಿಗೆ ಭರ್ಜರಿ ಓಪನಿಂಗ್ ಸಿಗುತ್ತದೆ. ಈ ಬಾರಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಗೆಲುವು ತಂದು ಕೊಟ್ಟ ಖ್ಯಾತಿ ಕೂಡಾ ಮಾಸ್ ಸಿನಿಮಾಗಳಿಗೆ ಸಲ್ಲುತ್ತದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಗೆಲುವು ತಂದುಕೊಟ್ಟಿದ್ದು ಔಟ್ ಅಂಡ್ ಔಟ್ ಮಾಸ್ ಸಿನಿಮಾವಾದ “ಭೀಮ’. ಈಗ ಮತ್ತೆರಡು ಮಾಸ್ ಸಿನಿಮಾಗಳು ಗೆಲುವಿನ ಹಾದಿ ಹಿಡಿದಿವೆ. ಅದು “ಬಘೀರ’ ಮತ್ತು “ಭೈರತಿ ರಣಗಲ್’. ಅಲ್ಲಿಗೆ “ಬಿಬಿಬಿ’ ಎಂದು ನೀವು ಕರೆಯಬಹುದು.
ಶ್ರೀಮುರಳಿ ನಾಯಕರಾಗಿರುವ “ಬಘೀರ’ ಕೂಡಾ ಈ ಬಾರಿ ಕನ್ನಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರ ಕಲೆಕ್ಷನ್ ವಿಚಾರದಲ್ಲೂ ನಿರ್ಮಾಪಕರ ಮೊಗದಲ್ಲಿ ನಗುಮೂಡಿಸಿದೆ. ಅದಕ್ಕಿಂತ ಹೆಚ್ಚಾಗಿ ಕನ್ನಡ ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳದ ನೆಟ್‌ಫ್ಲಿಕ್ಸ್ “ಬಘೀರ’ ಚಿತ್ರವನ್ನು ಖರೀದಿಸಿ ಈಗ ಪ್ರಸಾರ ಕೂಡಾ ಆರಂಭಿಸಿದೆ.
ಇನ್ನು ಶಿವರಾಜ್ ಕುಮಾರ್ ಅವರ “ಭೈರತಿ ರಣಗಲ್’ ಚಿತ್ರ ಮತ್ತೂಮ್ಮೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಗೆಲುವಿನ ರುಚಿ ತೋರಿಸಿದೆ. ಭರ್ಜರಿ ಓಪನಿಂಗ್ ಜೊತೆಗೆ ಹೌಸ್‌ಫುಲ್ ಶೋಗಳ ಮೂಲಕ “ಭೈರತಿ ರಣಗಲ್’ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಸೆಳೆದಿದೆ. “ಭೀಮ’, “ಬಘೀರ’ ಹಾಗೂ “ಭೈರತಿ’ ಈ ಮೂರು ಚಿತ್ರಗಳು ಮಾಸ್ ಸಿನಿಮಾವಾದರೂ ಕ್ಲಾಸ್ ಆಡಿಯನ್ಸ್ ಅನ್ನು ರಂಜಿಸುವಲ್ಲಿಯೂ ಯಶಸ್ವಿಯಾಗಿವೆ.
ವಿಜಯ್‌ಗೆ ಮೆಚ್ಚುಗೆ
“ಭೀಮ’ ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ನಾಯಕ ಕಂ ನಿರ್ದೇಶಕ ವಿಜಯ್ ಕುಮಾರ್. ಆ ಚಿತ್ರಕ್ಕಾಗಿ ಅವರು ಮಾಡಿದ ಓಡಾಟ ಇದೆಯಲ್ಲ, ಅದು ದೊಡ್ಡ ಮಟ್ಟದಲ್ಲಿ ಫಲ ನೀಡಿತು. ಆ ಚಿತ್ರ ಗೆದ್ದ ನಂತರ ವಿಜಯ್, ನನ್ನ ಕೆಲಸ ಮುಗೀತು ಎಂದು ಕೂರದೇ ಹೊಸಬರ ಹಾಗೂ ಇತರ ಸಿನಿಮಾಗಳಿಗೆ ಬೆಂಬಲಿಸುತ್ತಾ ಬರುತ್ತಿದ್ದಾರೆ. ಈ ಮೂಲಕ ಗೆಲುವಿನ ಹಾದಿಯಲ್ಲಿರುವ ಚಿತ್ರಗಳಿಗೆ ಹಾಗೂ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳಿಗೆ ವಿಜಿ ಪ್ರೋತ್ಸಾಹ ನೀಡುತ್ತಿದ್ದಾರೆ. “ಲವ್‌ರೆಡ್ಡಿ’, “ಧೀರ ಭಗತ್ ರಾಯ್’, “ಭೈರತಿ’, “ಜೀಬ್ರಾ’ ಹೀಗೆ ಅನೇಕ ಸಿನಿಮಾಗಳಿಗೆ ಬೆಂಬಲಿಸುತ್ತಿದ್ದಾರೆ ವಿಜಯ್. ಒಬ್ಬ ಸ್ಟಾರ್ ನಟನ ಇಂತಹ ಪ್ರೋತ್ಸಾಹ ಇವತ್ತಿಗೆ ಅಗತ್ಯವಿದೆ. ಆ ನಿಟ್ಟಿನಲ್ಲಿ ವಿಜಯ್ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರಮಂದಿರದ ಮಾಲೀಕರು ಖುಷ್
ಮಾಸ್ ಸಿನಿಮಾಗಳು ದೊಡ್ಡ ಮಟ್ಟದ ಓಪನಿಂಗ್ ಪಡೆದಾಗ ಸ್ಟಾರ್‌ಗಳು ಹೇಗೆ ಖುಷಿಯಾಗು ತ್ತಾರೋ ಅದೇ ರೀತಿ ಚಿತ್ರಮಂದಿರದ ಮಾಲೀಕರು ಕೂಡಾ ಖುಷಿಯಾಗುತ್ತಾರೆ. ಮುಂಜಾನೆಯಿಂದಲೇ ಶೋ ಆರಂಭವಾಗುವ ಜೊತೆಗೆ ಚಿತ್ರಮಂದಿರಕ್ಕೊಂದು ಜೀವಂತಿಕೆ ಕೂಡಾ ಬಂದಂತಾಗುವುದು ಇಂತಹ ಸಂದರ್ಭದಲ್ಲೇ. ಈ ನಿಟ್ಟಿನಲ್ಲಿ “ಭೀಮ’, “ಭೈರತಿ’ಯ ಕೊಡುಗೆ ದೊಟ್ಟ ಮಟ್ಟದ್ದು. ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹವಾ ಸೃಷ್ಟಿಸಿರುವ ಮತ್ತೂಂದು ಮಾಸ್ ಸಿನಿಮಾವೆಂದರೆ ಅದು “ಪುಷ್ಪ’. ಈ ಚಿತ್ರ ಡಿಸೆಂಬರ್ 5ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೇಲೆ ಇಡೀ ಭಾರತೀಯ ಚಿತ್ರರಂಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟಿರುವುದು ಸುಳ್ಳಲ್ಲ.
ಗೆಲುವಿನ ಕೊರತೆ
ಈ ವರ್ಷ ಗೆಲುವಿನ ಕೊರತೆ ಕಾಡಿದ್ದು ಸುಳ್ಳಲ್ಲ. ಬೆರಳೆಣಿಕೆಯ ಚಿತ್ರಗಳು ಮಾತ್ರ ಗೆದ್ದಿವೆ. ಹಾಗಂತ ಅದಕ್ಕೆ ಕೊರಗಬೇಕಿಲ್ಲ. ಮನರಂಜನೆ ಸಮಾಜದ ಒಂದು ಭಾಗ. ಮನರಂಜನೆ ಇಲ್ಲದ ಜನರು ಇರಲಾರರು. ಒಳ್ಳೆಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆ ಯುವ ಪ್ರಯತ್ನವನ್ನು ಮುಂದುವರೆಸಬೇಕು. ಜೊತೆಗೆ ಇಡೀ ಚಿತ್ರರಂಗ ಜೊತೆಯಾಗಿ ಸಾಗುವ ಅನಿವಾರ್ಯತೆ ಕೂಡಾ ಇದೆ. ಒಂದು ಸಿನಿಮಾವನ್ನು ಗೆಲ್ಲಿಸುವಲ್ಲಿ ಇವತ್ತಿನ ಸಂದರ್ಭದಲ್ಲಿ ಎಲ್ಲರೂ ಕೈ ಜೋಡಿಸಬೇಕಿದೆ.
ರವಿಪ್ರಕಾಶ್ ರೈ