Advertisement
ಒಂದೇ ನಮೂನೆಯ ಸಾಂಪ್ರದಾಯಿಕ ಬೆಳೆ ಬೆಳೆದು ಆರ್ಥಿಕವಾಗಿ ಕೈ ಸುಟ್ಟುಕೊಳ್ಳುವ ರೈತರ ಮಧ್ಯೆ, ಇಲ್ಲಿ ರೈತರೊಬ್ಬರು ಅರಣ್ಯ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ ಸಾಹಸಕ್ಕೆ ಮುಂದಾಗಿ, ಮಾದರಿ ರೈತನಾಗಿ ಹೊರ ಹೊಮ್ಮಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಲಕ್ಷ್ಮಣಸಿಂಗ್ ಹಜೇರಿ ಎಂಬುವವರೇ ಅರಣ್ಯ ಹಾಗೂ ತೋಟಗಾರಿಕೆ ಮಿಶ್ರಬೆಳೆಗೆ ಮುಂದಾಗಿರುವ ಪ್ರಗತಿಪರ ರೈತ.
Related Articles
Advertisement
ಸಾವಯವಗೊಬ್ಬರ, ಬೆಳೆ ಅಬ್ಬರ: ಅರಣ್ಯ- ತೋಟಗಾರಿಕೆಯ ಮಿಶ್ರ ಬೆಳೆ ಬೆಳೆಯುತ್ತಿರುವ ಹಜೇರಿ ಅವರು ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಬಳಸದೇ, ಅಪ್ಪಟ ತಿಪ್ಪೆಗೊಬ್ಬರವಾದ ಸಾವಯವ ಗೊಬ್ಬರವನ್ನೇ ಬಳಸಿದ್ದಾರೆ. ಸಾವಯವ ಗೊಬ್ಬರದಿಂದ ಗಿಡಗಳು ಸಮೃದ್ಧಿಯಾಗಿ ಬೆಳೆದು ಹೆಚ್ಚು ಇಳುವರಿ ಕೊಡಲು ಸಾಧ್ಯವಾಗುತ್ತದೆ. ಅಲ್ಲದೆ ಈ ಗಿಡಗಳ ಸುತ್ತಲೂ ಬೆಳೆಯುವ ಕಸವನ್ನೇ ಮಲ್ಲಿಂಗ್ ಮಾಡಿ, ನೀರಿನೊಂದಿಗೆ ಕೊಳೆಯಿಸಿ ಅಲ್ಲೇ ಗೊಬ್ಬರವನ್ನಾಗಿ ಮಾಡಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲಾಗುತ್ತದೆ.
ಆರ್ಥಿಕ ಬಲ ನೀಡುತ್ತಿರುವ ಅಂಜೂರ, ಪೇರಲು ಫಲ: ಶ್ರೀಗಂಧದ ಜೊತೆ ಮಿಶ್ರ ಬೆಳೆಯಾಗಿ ಪೇರಲೆ, ಅಂಜೂರ, ಸೀತಾಫಲ ಆರ್ಥಿಕ ಬಲ ಹೆಚ್ಚಿಸುತ್ತಿವೆ. ಪ್ರತಿ ಅಂಜೂರ ಗಿಡದಿಂದ 10ರಿಂದ 15 ಹಣ್ಣುಗಳು ದೊರೆತರೆ, ನಾಲ್ಕು ಎಕರೆಗೆ ಒಟ್ಟು ಅಂದಾಜು 4 ಕ್ವಿಂಟಾಲ್ ಫಲ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಅಂಜೂರಕ್ಕೆ ಒಳ್ಳೆಯ ಬೇಡಿಕೆಯಿದೆ. ಕೆ.ಜಿ ಅಂಜೂರಕ್ಕೆ 80ರೂ.ಗಳ ಬೆಲೆಯಿದೆ. ಹೀಗೆ ಮೂರು ತಿಂಗಳಿಗೊಮ್ಮೆ ಅಂಜೂರದಿಂದಲೇ ಲಕ್ಷಾಂತರ ರೂ.ಗಳ ಲಾಭ ದೊರೆಯುತ್ತದೆ. ಅದೇ ರೀತಿ ಸೀತಾಫಲ, ಪೇರಲೆ ಅಧಿಕ ಫಸಲು ನೀಡುತ್ತಿದೆ. ಇದರಿಂದಾಗಿ ಶ್ರೀಗಂಧದ ಬೆಳವಣಿಗೆ ಆಗುವ ತನಕ ಉಪ ಆದಾಯ ದೊರಕುವುದು ನಿರಂತರವಾಗಿರುತ್ತದೆ.
ಹನಿ ನೀರಾವರಿ: ದ್ರಾಕ್ಷಿ, ಬಾಳೆ ಬೆಳೆಯಂತೆ ಈ ಅರಣ್ಯ- ತೋಟಗಾರಿಕೆ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುವುದಿಲ್ಲ. ಸ್ವಲ್ಪ ನೀರಿದ್ದರೆ ಸಾಕು. 2 ಇಂಚು ನೀರಿರುವ ಒಂದು ಕೊಳವೆ ಬಾವಿಯ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಬರಗಾಲದ ಭೂಮಿಗೆ ತೋಟಗಾರಿಕೆ ಕೃಷಿಗೆ ನೀರು ಹೆಚ್ಚು ಬೇಕು ಎನ್ನುವ ವಾದವನ್ನು ಈ ರೈತರು ಒಪ್ಪುವುದಿಲ್ಲ. ಅತಿಯಾದ ನೀರಿನ ಬಳಕೆಯಿಂದ ಹಾಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಹಾಳಾಗುವುದನ್ನು ತಡೆಗಟ್ಟಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಅತಿಯಾದ ನೀರಿನಿಂದ ಮಣ್ಣಿನ ಸವಕಳಿಯನ್ನು ತಪ್ಪಿಸಲು ಸಾಧ್ಯ. ತೋಟಗಾರಿಕೆ ಕೃಷಿಗೆ ಕ್ರಮಬದ್ಧ ನೀರಾವರಿಯಿಂದ ಅಧಿಕ ಫಸಲು ಮತ್ತು ಲಾಭ ಪಡೆಯುವುದು ಸಾಧ್ಯವಿದೆ ಎಂಬುದಕ್ಕೆ ಈ ರೈತರೇ ಮಾದರಿಯಾಗಿದ್ದಾರೆ.
ರೋಗ ಬಾಧೆ ಕಡಿಮೆ, ಲಾಭ ಹೆಚ್ಚು: ಶ್ರೀಗಂಧ, ಅಂಜೂರ, ಪೇರಲೆ, ಸೀತಾಫಲ ಸೇರಿದಂತೆ ಮಿಶ್ರ ಬೆಳೆಯಾಗಿ ಬೆಳೆಯುತ್ತಿರುವ ಈ ಬೆಳೆಗಳಿಗೆ ರೋಗಬಾಧೆ ಕೂಡ ಕಡಿಮೆ. ವರ್ಷಕ್ಕೆ ಎರಡು ಬಾರಿ ತಿಪ್ಪೆಗೊಬ್ಬರ ಹಾಕುತ್ತಾ ಹಾಗೂ ಹನಿ ನೀರಾವರಿಯಿಂದ ಅತಿ ಕಡಿಮೆ ಖರ್ಚಿನಲ್ಲಿ ಈ ಬೆಳೆಯನ್ನು ಬೆಳೆಯಬಹುದು. ಹೆಚ್ಚು ಕೆಲಸಗಾರರೂ ಬೇಕಿಲ್ಲದೆ, ಕೇವಲ ಒಬ್ಬರು ಮಾತ್ರ ನಾಲ್ಕು ಎಕರೆ ಜಮೀನಿನ ಬೆಳೆಯನ್ನು ನಿರ್ವಹಣೆ ಮಾಡಬಹುದು. ಸವುಳು- ಜವುಳು ಭೂಮಿ ಬಿಟ್ಟರೆ, ಉಳಿದ ಎಂಥದೇ ಭೂಮಿಯಲ್ಲಿ ಈ ರೀತಿಯ ಮಿಶ್ರ ಬೆಳೆಯನ್ನು ಬೆಳೆಯಲು ಸಾಧ್ಯ. ಶ್ರೀಗಂಧ, ಅಂಜೂರ ಸೇರಿದಂತೆ ಎಲ್ಲ ಬೆಳೆಯ ಸಸಿಗಳು, ಡ್ರಿಪ್‌ಕಿಟ್ ಹಾಗೂ ಗಿಡ ನೆಡುವ ಕಾರ್ಯ ಸೇರಿ 2 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ.
ಎಸ್ಪಿ ಕಚೇರಿಯಲ್ಲಿ ಶ್ರೀಗಂಧ ನೋಂದಣಿ: ಜಮೀನಿನಲ್ಲಿ ನೆಟ್ಟ ಶ್ರೀಗಂಧ ಗಿಡಗಳಿಗೆ 5 ವರ್ಷಗಳಾದ ನಂತರ, ಅವುಗಳ ಸಂಖ್ಯೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಬೇಕು. ಆಗ ಈ ಗಿಡಗಳ ರಕ್ಷಣೆಗೆ ಪೊಲೀಸ್ ಇಲಾಖೆ ಸಹಕಾರ ನೀಡುತ್ತದೆ. ಬಲಿತ ಶ್ರೀಗಂಧ ಗಿಡಗಳನ್ನು ಸರ್ಕಾರದ ಅಂಗಸಂಸ್ಥೆಗಳ ಕಾರ್ಖಾನೆಗಳೇ ಬಂದು ಖರೀದಿಸುತ್ತವೆ. ಬಲಿತ ಶ್ರೀಗಂಧ ಗಿಡಕ್ಕೆ ತುಂಬಾ ಬೇಡಿಕೆ ಹಾಗೂ ಬೆಲೆ ಇದೆ.
ಶ್ರೀಗಂಧ ರಕ್ಷಣೆಗೆ ಮುಳ್ಳು ಬಿದಿರು: ಶ್ರೀಗಂಧ ಗಿಡ ತುಂಬಾ ಬೆಲೆ ಬಾಳುವುದಾಗಿದ್ದರಿಂದ ಇದಕ್ಕೆ ಕಳ್ಳ- ಕಾಕರ ಹಾವಳಿ ಹೆಚ್ಚು. ಹೀಗಾಗಿ ಈ ಗಿಡಗಳ ರಕ್ಷಣೆಗೆ ಜಮೀನಿನ ಸುತ್ತಲಿನಲ್ಲಿ ಮುಳ್ಳು ಬಿದಿರನ್ನು ನೆಡುವ ವಿಚಾರವನ್ನು ರೈತ ಹಜೇರಿಯವರು ಹೊಂದಿದ್ದಾರೆ. ಅಲ್ಲದೆ ಆಧುನಿಕ ತಂತ್ರಜ್ಞಾನದ ಮೂಲಕ ಗಿಡವೊಂದಕ್ಕೆ ಜಿಪಿಎಸ್ ಅಳವಡಿಸಿ, ಸ್ಯಾಟಲೈಟ್ ಮೂಲಕ ಗಿಡ ಕಾವಲು ಮಾಡುವ ವಿಧಾನವೂ ಸದ್ಯ ವ್ಯವಸ್ಥೆಯಲ್ಲಿದೆ ಎಂದು ಅವರು ಹೇಳುತ್ತಾರೆ.
ಸಂಪರ್ಕ: 8088409017
* ಚಿತ್ರ- ಲೇಖನ: ಪರಶುರಾಮ ಶಿವಶರಣ, ವಿಜಯಪುರ