2023 ಗ್ರ್ಯಾಂಡ್ ಎಂಟ್ರಿಕೊಟ್ಟಾಗಿದೆ. ಕನ್ನಡ ಚಿತ್ರರಂಗದ ಮಟ್ಟಿಗಂತೂ ಇದು ದೊಡ್ಡ ನಿರೀಕ್ಷೆಯನ್ನು ಹೊತ್ತು ತಂದ ವರ್ಷವೆಂದರೆ ತಪ್ಪಲ್ಲ. 2022ರ ಕನ್ನಡದ ಪಾಲಿಗೆ ಅದೃಷ್ಟದ ವರ್ಷವಾದರೆ, ಈ ವರ್ಷ ಆ ಅದೃಷ್ಟ ನಿರೀಕ್ಷೆಯಾಗಿ ಪರಿವರ್ತಿತವಾಗಿದೆ. ಅದಕ್ಕೆ ಕಾರಣ ಬಿಡುಗಡೆಗೆ ಸಿದ್ಧವಾಗಿರುವ ಸಾಲು ಸಾಲು ಸಿನಿಮಾಗಳು ಹಾಗೂ ಆ ಚಿತ್ರಗಳು ಈಗಾಗಲೇ ಹುಟ್ಟಿಸಿರುವ ನಿರೀಕ್ಷೆ. ಇದೇ ಕಾರಣದಿಂದ ಕನ್ನಡ ಸಿನಿಪ್ರೇಮಿಗಳು ಈ ವರ್ಷವೂ ಭರ್ಜರಿ ಮನರಂಜನೆ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಎದುರು ನೋಡುತ್ತಿವೆ. ಈ ವರ್ಷ ಸ್ಟಾರ್ ಸಿನಿಮಾಗಳ ಜೊತೆಗೆ ಒಂದಷ್ಟು ಹೊಸಬರ ಸಿನಿಮಾಗಳು ಕೂಡಾ ಕುತೂಹಲ ಕೆರಳಿಸಿವೆ.
ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು ಒಂದಾ, ಎರಡಾ…
ಈವರ್ಷ ಬರಲಿರುವ ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ನೋಡಿದಾಗ ಅಲ್ಲಿ ಭಿನ್ನ ವಿಭಿನ್ನ ಚಿತ್ರಗಳು ಕಾಣಸಿಗುತ್ತವೆ. ದರ್ಶನ್ ನಟನೆಯ “ಕ್ರಾಂತಿ’, ಉಪೇಂದ್ರ ಅವರ “ಕಬ್ಜ’, “ಯು/ಐ’, ದುನಿಯಾ ವಿಜಯ್ “ಭೀಮ’, ಶಿವರಾಜ್‌ಕುಮಾರ್ “ಘೋಸ್ಟ್’, “ಕರಟಕ ಧಮನಕ’, ಧ್ರುವ ಸರ್ಜಾ “ಮಾರ್ಟಿನ್’, “ರಕ್ಷಿತ್ “ಸಪ್ತಸಾಗರದಾಚೆ ಎಲ್ಲೋ’, ಗಣೇಶ್ “ಬಾನದಾರಿಯಲ್ಲಿ’, ರಾಜ್ ಬಿ ಶೆಟ್ಟಿ “ಸ್ವಾತಿ ಮುತ್ತಿನ ಮಳೆ ಹನಿಯೇ’, ಕೋಮಲ್ “ಕಾಲಾಯ ನಮಃ’, ಜಗ್ಗೇಶ್ “ರಾಘವೇಂದ್ರ ಸ್ಟೋರ್’, “ತೋತಾಪುರಿ-2′, ಅಭಿಷೇಕ್ ಅಂಬರೀಶ್ “ಬ್ಯಾಡ್ ಮ್ಯಾನರ್ಸ್’, ಧನಂಜಯ್ “ಹೊಯ್ಸಳ’, “ಉತ್ತರಕಾಂಡ’, ಕೃಷ್ಣ “ಕೌಸಲ್ಯ ಸುಪ್ರಜಾ ರಾಮ’, ಅಜೇಯ್ ರಾವ್ “ಯುದ್ಧಕಾಂಡ’, “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’, ಪ್ರಜ್ವಲ್ “ಮಾಫಿಯಾ’, ಶರಣ್ “ಛೂ ಮಂತರ್’, ಚಿಕ್ಕಣ್ಣ “ಉಪಾಧ್ಯಕ ಸೇರಿದಂತೆ ಇನ್ನೂ ಒಂದಷ್ಟು ಸ್ಟಾರ್‌ಗಳ ಹಾಗೂ ಚಿತ್ರರಂಗದ ಪರಿಚಿತ ಮುಖಗಳ ಚಿತ್ರಗಳು ನಿರೀಕ್ಷೆಯ ಪಟ್ಟಿಯಲ್ಲಿವೆ. ಇದರ ಜೊತೆಗೆ ಹೊಸಬರ ಚಿತ್ರಗಳಾದ “ಥಗ್ಸ್ ಆಫ್ ರಾಮಘಡ’, “ಮಾಂಕ್ ದಿ ಯಂಗ್’, “ಸೋಮು ಸೌಂಡ್ ಇಂಜಿನಿಯರ್’, “ಅನ್‌ಲಾಕ್ ರಾಘವ’, “ಕಾಕ್ಟೆಲ್’ ಸೇರಿದಂತೆ ಅನೇಕ ಸಿನಿಮಾಗಳ ಮೇಲೆ ಸಿನಿ ಪ್ರೇಮಿಗಳು ಕಣ್ಣಿಟ್ಟಿದ್ದಾರೆ.
ಪ್ಯಾನ್ ಇಂಡಿಯಾ ಹವಾ ಜೋರು
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅದು 2023ರಲ್ಲೂ ಮುಂದುವರೆಯಲಿದೆ. ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿ “ಕ್ರಾಂತಿ’ ತೆರೆಕಾಣಲಿದೆ. ಇದಲ್ಲದೇ ಉಪೇಂದ್ರ ನಟನೆಯ “ಕಬ್ಜ’ ಚಿತ್ರ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಜತೆಗೆ ಉಪೇಂದ್ರ ನಟನೆಯ “ಯು/ಐ’, ಧ್ರುವ “ಮಾರ್ಟಿನ್’, ಶಿವಣ್ಣ “ಘೋಸ್ಟ್’ ಚಿತ್ರಗಳು ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿವೆ. ಮುಂದೆ ಇದಕ್ಕೆ ಇನ್ನೊಂದಿಷ್ಟು ಸ್ಟಾರ್‌ಗಳ ಸಿನಿಮಾಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ.
ರಿಚರ್ಡ್, ಕೆಡಿ ಬರ್ತಾರ?
ರಕ್ಷಿತ್ ಶೆಟ್ಟಿ ನಿರ್ದೇಶನದ “ರಿಚರ್ಡ್ ಆಂಟೋನಿ’ ಹಾಗೂ ಪ್ರೇಮ್-ಧ್ರುವ ಕಾಂಬಿನೇಶನ್‌ನ “ಕೆಡಿ’ ಚಿತ್ರಗಳು ಈಗಾಗಲೇ ಅನೌನ್ಸ್ ಆಗಿವೆ. ಆರಂಭದಿಂದಲೇ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರಗಳು ಈ ವರ್ಷ ಬರುತ್ತಾ ಅಥವಾ ಮುಂದಿನ ವರ್ಷನಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಪರಭಾಷೆಯಲ್ಲಿ ಕನ್ನಡ ನಟರು
ಈಗಾಗಲೇ ಪರಭಾಷೆಗಳಲ್ಲಿ ಕನ್ನಡದ ಅನೇಕ ನಟರು ನಟಿಸಿದ್ದಾರೆ. ಈ ವರ್ಷವೂ ಅದು ಮುಂದುವರೆಯಲಿದೆ. ಈಗಾಗಲೇ ಶಿವರಾಜ್‌ಕುಮಾರ್, ರಜನಿಕಾಂತ್ ನಟನೆಯ “ಜೈಲರ್’ನಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಇನ್ನು, ನಟ ವಿಜಯ್ “ವೀರಸಿಂಹರೆಡ್ಡಿ ‘ಯಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಇದಲ್ಲದೇ ಧನಂಜಯ್, ವಸಿಷ್ಠ ಕೂಡಾ ಬೇರೆ ಭಾಷೆಗಳಲ್ಲಿ ನಟಿಸಿದ್ದು, ಆ ಚಿತ್ರಗಳು ಈ ವರ್ಷವೇ ರಿಲೀಸ್ ಆಗಲಿದೆ. ಇದರ ಜೊತೆಗೆ ಆಶಿಕಾ, ಶ್ರೀಲೀಲಾ ಸೇರಿದಂತೆ ಕೆಲವು ನಟಿಯರು ಕೂಡಾ ಪರಭಾಷೆಯಲ್ಲಿ ಮಿಂಚಲಿದ್ದಾರೆ.
ಅನೌನ್ಸ್‌ಮೆಂಟ್ ಕುತೂಹಲ
ಸಿನಿಮಾ ಬಿಡುಗಡೆಯಾಗಿ ಹಿಟ್ ಆದ ಕೆಲವು ಸ್ಟಾರ್ ನಟರು ತಮ್ಮ ಹೊಸ ಸಿನಿಮಾದ ಘೋಷಣೆಯನ್ನು ಇನ್ನೂ ಮಾಡಿಲ್ಲ. “ಕೆಜಿಎಫ್-2′ ಬಳಿಕ ಯಶ್, “ಕಾಂತಾರ’ ಬಳಿಕ ರಿಷಭ್, “ವಿಕ್ರಾಂತ್ ರೋಣ’ ಬಳಿಕ ಸುದೀಪ್ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಹಾಗೂ ಕುತೂಹಲ ಅಭಿಮಾನಿಗಳಲ್ಲಿದೆ. ಆ ಪ್ರಶ್ನೆಗೆ ಈ ವರ್ಷ ಉತ್ತರ ಸಿಗಲಿದೆ. ಈ ನಟರ ಸಿನಿಮಾ ಈ ವರ್ಷ ಅನೌನ್ಸ್ ಆದರೂ 2023ರಲ್ಲೇ ಬಿಡುಗಡೆ ಕಾಣುತ್ತದೆ ಎಂದು ನಿಖರವಾಗಿ ಹೇಳುವಂತಿಲ್ಲ.
ರವಿಪ್ರಕಾಶ್ ರೈ