Advertisement

ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆಗೆ ಬಾಗಲಕೋಟೆಯ ಶ್ರೀಗಂಧ, ಬಬಲೇಶ್ವರ ಭಕ್ತೆಯ ಬೆರಣಿ, ತುಪ್ಪ

04:03 PM Jan 03, 2023 | Team Udayavani |

ವಿಜಯಪುರ: ಸಿದ್ಧೇಶ್ವರ ಶ್ರೀಗಳ ಆಶಯದಂತೆ ಅವರ ಪಾರ್ಥಿವ ಶರೀರವನ್ನು ಹೂಳದೇ ಅಗ್ನಿಯರ್ಪಿತಕ್ಕಾಗಿ ಚಿತೆಯ ಸ್ಪರ್ಶ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಬಾಗಲಕೋಟೆಯಿಂದ ಶ್ರೀಗಂಧ ಕಟ್ಟಿಗೆ ಹಾಗೂ ಬಬಲೇಶ್ವರ ಭಕ್ತೆ ತಂದಿರುವ ಅಪ್ಪಟ ದೇಶಿ ಗೋವಿನ ತುಪ್ಪ, ಬೆರಣಿಗಳನ್ನು ಬಳಸಲಾಗುತ್ತಿದೆ.

Advertisement

ಬಾಗಲಕೋಟೆಯ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ತಮ್ಮ ಆಶ್ರಮದಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳ ಕಟ್ಟಿಗೆಯನ್ನು ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ತಂದಿದ್ದಾರೆ. ಮಂಗಳವಾರ ಬೆಳಿಗ್ಗೆಯೇ ವಾಹನದಲ್ಲಿ ಶ್ರೀಗಂಧದ ಕಟ್ಟಿಗೆಯನ್ನು ಜ್ಞಾನಯೋಗಾಶ್ರಮದಲ್ಲಿ ಚಿತಾಸ್ಪರ್ಶ ನೀಡುವ ಸ್ಥಳಕ್ಕೆ ತರಲಾಗಿದೆ.

ಇನ್ನು ಶ್ರೀಗಳ ಅಂತಿಮ ಆಶಯದಲ್ಲಿ ಚಿತಾಸ್ಪರ್ಶನದ ಮಾಹಿತಿ ತಿಳಿಯುತ್ತಲೇ ದೇಶಿಗೋವು ಸಂರಕ್ಷಕ ಕುಟುಂಬವಾದ ಶಿರಮಗೊಂಡ ಲಕ್ಷ್ಮೀ ಹಾಗೂ ಬಸಗೊಂಡ ದಂಪತಿ ತಮ್ಮ ಕೈಯಿಂದ ತಯಾರಿಸಿದ ಬೆರಣಿಗಳನ್ನು ಎರಡು ಚೀಲಗಳಲ್ಲಿ ಜ್ಞಾನಯೋಗಾಶ್ರಮಕ್ಕೆ ತಂದಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಗೌರವದ ನಂತರವೂ ಶ್ರೀಗಳ ದರ್ಶನ ಇರಲಿದೆ: ಸಿಎಂ ಬೊಮ್ಮಾಯಿ

ಯಾರದೇ ಕೋರಿಕೆ, ಮನವಿ ಇಲ್ಲದೆಯೂ ಅಪ್ಪಟ ದೇಶಿಗೋ ಸಂರಕ್ಷಕ ಈ ಕುಟುಂಬದವರು, ಬೆರಣಿಯ ಜೊತೆಗೆ ದೇಶಿಗೋವಿನ ತುಪ್ಪವನ್ನೂ ತಂದಿದ್ದಾರೆ. ಸೋಮವಾರ ಹೆಪ್ಪು ಹಾಕಿದ ಹಾಲಿನಿಂದ ಮಂಗಳವಾರ ಬೆಳಿಗ್ಗೆ ಲಭ್ಯವಾದ ಮೊಸರಿನಿಂದ ಕಡೆದ ಬೆಣ್ಣೆ ಹಾಗೂ ಬೆಣ್ಣೆಯಿಂದ ದೊರೆತ 200 ಗ್ರಾಂ. ತುಪ್ಪವನ್ನು ಶ್ರೀಗಳ ಅಂತಿಮ ಸಂಸ್ಕಾರಕ್ಕಾಗಿ ಅರ್ಪಿಸಿದ್ದಾರೆ.

Advertisement

ಶ್ರೀಗಳಿಗೆ ಚಿತಾಸ್ಪರ್ಶದ ಮೂಲಕ ಅಂತ್ಯ ಸಂಸ್ಕಾರ ಮಾಡುವ ವಿಷಯ ತಿಳಿಯಿತು. ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ನಮ್ಮ ಭಕ್ತಿ ಸಮರ್ಪಿಸಲು ಬೆರಣಿ, ಇಂದು ಒಂದೇ ದಿನ ಲಭ್ಯವಾಗಿರುವ ತಾಜಾ ತುಪ್ಪವನ್ನು ತಂದಿದ್ದೇವೆ ಎಂದು ಲಕ್ಷ್ಮಿ ಶಿರಮಗೊಂಡ ಭಾವುಕರಾಗಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next