ಶಿವಣ್ಣ ನೀವು ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳಿ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ…’ – ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ಮಾಪಕ, ನಿರ್ದೇಶಕರಿಂದ ಆಗಾಗ ಕೇಳಿಬರುತ್ತಿ ರುವ ಬೇಡಿಕೆ ಇದು. ಆದರೆ, ಶಿವಣ್ಣ ಮಾತ್ರ,”ನನಗೆ ಲೀಡರ್‌ಶಿಪ್ ಬೇಡ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎನ್ನುತ್ತಲೇ ಬರುತ್ತಿದ್ದಾರೆ.
ಈಗ ಮತ್ತೂಮ್ಮೆ ಶಿವಣ್ಣ ನಾಯಕತ್ವ ವಹಿಸಿಕೊಳ್ಳಬೇಕೆಂಬ ಪ್ರೀತಿಯ ಆಗ್ರಹ ಕೇಳಿಬಂದಿದೆ. ಕನ್ನಡ ಚಿತ್ರರಂಗದ ಮುಂಚೂಣಿ ನಟರೆಲ್ಲಾ ಶಿವಣ್ಣನನ್ನು ಈ ರೀತಿ ಆಗ್ರಹಿಸಿದ್ದಾರೆ. ಅದಕ್ಕೆ ವೇದಿಕೆಯಾಗಿದ್ದು “ಬಡವ ರಾಸ್ಕಲ್’ ಚಿತ್ರದ ಪ್ರೀ ರಿಲೀಸ್ ಇವೆಂಟ್. ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದುನಿಯಾ ವಿಜಯ್, ರಂಗಾಯಣ ರಘು, ನೀನಾಸಂ ಸತೀಶ್, ಯೋಗಿ, ಧನಂಜಯ್, ತಾರಾ … ಹೀಗೆ ಪ್ರತಿಯೊಬ್ಬರು ಶಿವರಾಜ್‌ಕುಮಾರ್ ಚಿತ್ರರಂಗದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಮತ್ತೆ ಈ ನಾಯಕತ್ವದ ಕೂಗು ಕೇಳಿಬರಲು ಕಾರಣ, ಕನ್ನಡದ ಮೇಲೆ ಅನ್ಯ ಭಾಷಿಗರಿಂದ ನಡೆಯುತ್ತಿರುವ ದೌರ್ಜನ್ಯ. ಇತ್ತೀಚೆಗಷ್ಟೇ ಕರ್ನಾಟಕದ ಬಾವುಟವನ್ನು ಸುಟ್ಟುಹಾಕಿರುವ ಪುಂಡರ ಕ್ರಮವನ್ನು ಇಡೀ ಚಿತ್ರರಂಗ ತೀವ್ರವಾಗಿ ಖಂಡಿಸಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಯಾವುದೇ ಹೋರಾಟಕ್ಕಾದರೂ ಕನ್ನಡ ಚಿತ್ರರಂಗದ ಸದಾ ಸಿದ್ಧ ಇದ್ದು, ಇದರ ನೇತೃತ್ವವನ್ನು ಶಿವಣ್ಣ ವಹಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬಂತು.
ಇದನ್ನೂ ಓದಿ:ಆಗಸದಲ್ಲಿ ಬೆಳಕಿನ ಸರಮಾಲೆ: ಏನಿದು ಸ್ಟಾರ್ ಲಿಂಕ್ ಸ್ಯಾಟಲೈಟ್?
ಈ ಬಗ್ಗೆ ಮಾತನಾಡಿದ ದುನಿಯಾ ವಿಜಯ್, “ಶಿವಣ್ಣ ಜೊತೆ ನಾವೆಲ್ಲರೂ ಇದ್ದೇವೆ. ನಾವು ಯಾವತ್ತೂ ಅವರನ್ನು ಬಿಟ್ಟುಕೊಡುವುದಿಲ್ಲ. ಯಾವುದೇ ಹೋರಾಟಕ್ಕಾದರೂ ನಾವು ಶಿವಣ್ಣ ಜೊತೆ ನಿಲ್ಲುತ್ತೇವೆ’ ಎಂದು ವಿಜಯ್, “ನೀವು ಒಮ್ಮೆ ನಾನಿದ್ದೇನೆ ಎಂದು ಹೇಳಿ, ಉಳಿದಂತೆ ನಾವು ನಿಮ್ಮ ಜೊತೆಯಲ್ಲಿರುತ್ತೇವೆ’ ಎಂದರು. ನಟ ರಂಗಾಯಣ ರಘು ಕೂಡಾ, ನೀನಾಸಂ ಸತೀಶ್ ಕೂಡಾ ಇದೇ ಮಾತಿಗೆ ಧ್ವನಿಗೂಡಿಸಿದರು.