ಕನ್ನಡ ಚಿತ್ರರಂಗದಲ್ಲಿ ಹಳೇ ತಲೆಮಾರಿನಲ್ಲಿ ನರಸಿಂಹರಾಜು, ಬಾಲಣ್ಣ, ಮುಸುರಿ ಕೃಷ್ಣಮೂರ್ತಿ, ದಿನೇಶ್, ಎನ್ ಎಸ್ ರಾವ್, ದ್ವಾರಕೀಶ್, ಉಮೇಶ್ ನಂತರದಲ್ಲಿ ಹೊನ್ನಾವಳಿ ಕೃಷ್ಣ, ಟೆನ್ನಿಸ್ ಕೃಷ್ಣ, ದೊಡ್ಡಣ್ಣ, ಜಗ್ಗೇಶ್, ಸಾಧು ಕೋಕಿಲ, ಕೋಮಲ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಚಿಕ್ಕಣ್ಣ ಹೀಗೆ ತಮ್ಮ ಹಾಸ್ಯ ಪಾತ್ರದ ಮೂಲಕ ಜನರನ್ನು ರಂಜಿಸಿ ಮನೆಮಾತಾಗಿದ್ದರು. ಇವರ ನಡುವೆ ಹಾಸ್ಯನಟರಾಗಿ ಮಿಂಚಿದವರು “ವೈಜನಾಥ್ ಬಿರದಾರ್”.
ಸಣಕಲು ದೇಹ, ಕೆದರಿದ ಕೂದಲಿನ ಬಿರದಾರ್ ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ಹಾಸ್ಯ ನಟರಾಗಿ ಎಲ್ಲರ ಮನಗೆದ್ದವರು. ಸುಮಾರು 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಬಿರದಾರ್ ಕಳೆದ ವರ್ಷವಷ್ಟೇ ಗಿರೀಶ್ ಕಾಸರವಳ್ಳಿ ನಿರ್ದೇಶನದ “ಕನಸೆಂಬ ಕುದುರೆಯನೇರಿ” ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಈ ಖುಷಿಯ ಸುದ್ದಿ ಕೇಳಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಖುದ್ದು ಕರೆ ಮಾಡಿ ಬಿರದಾರ್ ಗೆ ಶುಭಾಶಯ ತಿಳಿಸಿದ್ದರು.
3ನೇ ತರಗತಿವರೆಗೆ ಶಿಕ್ಷಣ:
ವೈಜನಾಥ್ ಬಿರದಾರ್ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ತೇಗಂಪುರ್ ಗ್ರಾಮದಲ್ಲಿ ಜನಿಸಿದ್ದರು. ಇವರದ್ದು ರೈತ ಕುಟುಂಬವಾಗಿದ್ದು, ಪೋಷಕರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದರು. 2ನೇ ತರಗತಿ ಪೂರ್ಣಗೊಳಿಸಿ ಮೂರನೇ ತರಗತಿ ಪೂರ್ಣಗೊಳಿಸಿದ್ದ ಬಿರದಾರ್ 4ನೇ ತರಗತಿಗೆ ಅರ್ಧಕ್ಕೆ ತಮ್ಮ ಶಿಕ್ಷಣ ನಿಲ್ಲಿಸಿದ್ದರು. ಅದಕ್ಕೆ ಕಾರಣ ತಂದೆಯ ಅಕಾಲಿಕ ಮರಣ. ಕುಟುಂಬದ ಹಿರಿಯ ಮಗನಾಗಿದ್ದರಿಂದ ತಾಯಿ ಶಾಲೆಗೆ ಕಳುಹಿಸಲಿಲ್ಲವಂತೆ. ತಾಯಿಯೂ ಸೋಬಾನೆ ಹಾಡು, ಬೀಸುಕಲ್ಲು ಪದ ಹಾಡುತ್ತಿದ್ದರಂತೆ. ಹೀಗೆ ಬಿರದಾರ್ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ದೊಡ್ಡಾಟ, ಕೋಲಾಟ ಹಾಗೂ ನಾಟಕಗಳಲ್ಲಿ ನಟಿಸಿತೊಡಗಿದ್ದರು.
ಏನ್ ಓದಿದ್ದೀಯಾ,:
ಹೀಗೆ ಊರಲ್ಲಿ ನಾಟಕ, ಕೋಲಾಟಗಳಲ್ಲಿ ಭಾಗವಹಿಸುತ್ತಿದ್ದ ನನಗೆ ಕೆಲವರು ಏನ್ ಬಿರದಾರ್ ಸಿನಿಮಾ ಸೇರಬೇಕೆಂತ ಹೇಳ್ತದ್ದೀಯಾ, ನೀನು ಎಷ್ಟು ಓದಿದ್ದೀಯಾ, ನೋಡಲಿಕ್ಕೂ ಸುಂದರವಾಗಿಲ್ಲ, ದೊಡ್ಡವರ ಬೆಂಬಲವೂ ಇಲ್ಲ. ಯಾಕ್ ನೀನ್ ರಂಗಭೂಮಿಗೆ ಸೇರಬಾರದು ಎಂದು ಕೆಲವರು ಸಲಹೆ ಕೊಟ್ಟಿದ್ದರು. ಹೀಗೆ ಒಂದು ದಿನ ಪೇಟೆಗೆ ಹೋಗಿದ್ದಾಗ ಸಿನಿಮಾ ಮ್ಯಾಗಜಿನ್ ತೆಗೆದುಕೊಂಡು ಬಂದಿದ್ದು, ಅದರಲ್ಲಿ ಡಾ.ರಾಜ್ ಕುಮಾರ್ ಗೆ ಸಂಬಂಧಿಸಿದ ಕಥಾನಾಯಕನ ಕಥೆ ಎಂಬ ಲೇಖನ ಇತ್ತು. ಅದರಲ್ಲಿ ಅಣ್ಣಾವ್ರು ನಾಲ್ಕನೇ ತರಗತಿವರೆಗೆ ಓದಿ, ರಂಗಭೂಮಿ, ಸಿನಿಮಾರಂಗ ಪ್ರವೇಶಿಸಿ ನಟ ಸಾರ್ವಭೌಮರಾದ ಬಗ್ಗೆ ಬರೆದಿದ್ದರು. ಗುರಿ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂಬ ಲೇಖನ ನನ್ನ ಮನಸ್ಸಿಗೆ ನಾಟಿತ್ತು.
ಏತನ್ಮಧ್ಯೆ ಇದ್ದ ಜಮೀನು ಕೈಬಿಟ್ಟು ಹೋಗಿತ್ತು. ತಮ್ಮ, ತಂಗಿ ತೀರಿಕೊಂಡರು, ಭಾವ ಕೂಡಾ ತೀರಿಹೋಗಿದ್ದರು. ಈ ಸಮಯದಲ್ಲಿ ನಿರಾಸೆಗೊಳಗಾಗಿಬಿಟ್ಟಿದ್ದೆ. ನಂತರ ಧಾರವಾಡದ ಪಂಚಲಿಂಗೇಶ್ವರ ನಾಟಕ ಸಂಘಕ್ಕೆ ಸೇರಿಕೊಂಡಿದ್ದ ಬಿರದಾರ್ ಗೆ ನಟನೆಯಲ್ಲಿ ಹೆಚ್ಚಿನ ಅನುಭವ ಪಡೆಯಲು ನೆರವಾಗಿತ್ತು. ನಾಟಕಗಳಲ್ಲಿ ತಮ್ಮ ಅಭಿನಯದ ಮೂಲಕ ಜನರನ್ನು ಹೆಚ್ಚು ರಂಜಿಸತೊಡಗಿದ ಬಿರದಾರ್ ಗೆ ನಟನೆ ಕೈಹಿಡಿದಿತ್ತು.
ಬರ ಸಿನಿಮಾದಲ್ಲಿ ಪುಟ್ಟ ಪಾತ್ರ:
1979ರಲ್ಲಿ ಎಂಎಸ್ ಸತ್ಯು ನಿರ್ದೇಶನದ ಸಾಮಾಜಿಕ ಕಳಕಳಿಯ “ಬರ” ಸಿನಿಮಾದ ಚಿತ್ರೀಕರಣವಾಗುತ್ತಿದ್ದ ಸಂದರ್ಭದಲ್ಲಿ ಅನಂತನಾಗ್ ಮತ್ತು ಹೀರೋಯಿನ್ ಲವ್ಲೀನಾ ಮಧು ಮರಾಠಿಯಲ್ಲಿ ಮಾತನಾಡುತ್ತಿದ್ದರು. ಆಗ ನಟಿ ಮೊಸರು, ಮಜ್ಜಿಗೆ ಏನೂ ಇಲ್ಲ ಹೇಗೆ ಊಟ ಮಾಡೋದು ಎಂದು ಹೇಳುತ್ತಿದ್ದುದನ್ನು ಕೇಳಿ ಬಿರದಾರ್ ಮರಾಠಿಯಲ್ಲಿ ತಾನು ಮೊಸರು ತಂದುಕೊಡುತ್ತೇನೆ ಎಂದು ಹೇಳಿದ್ದರಂತೆ. ಹೀಗೆ ಶೂಟಿಂಗ್ ವೇಳೆ ಪರಿಚಯವಾಗಿದ್ದರಿಂದ ಎಂಎಸ್ ಸತ್ಯು ಅವರು ಬಿರದಾರ್ ಗೆ ಪುಟ್ಟ ಪಾತ್ರವನ್ನು ನೀಡಿದ್ದರು.
ಇದಾದ ನಂತರ ಬಿರದಾರ್ ಸಿನಿಮಾದಲ್ಲಿನ ಅವಕಾಶಕ್ಕಾಗಿ ಅಲೆಯುವಂತಾಗಿತ್ತು. ಬೆಂಗಳೂರಿಗೆ ಬರಲು ಒಂದು ತಿಂಗಳ ಕಾಲ ಹೆಣಗಾಡಿ ಹಣ ಹೊಂದಿಸಿಕೊಂಡಿದ್ದರಂತೆ. ಆಗ ಬೀದರ್ ನಿಂದ ಬೆಂಗಳೂರಿಗೆ 31 ರೂಪಾಯಿ ಟಿಕೆಟ್ ಚಾರ್ಜ. ಆ ಹಣದಲ್ಲಿಯೇ ಖರ್ಜು ಮಾಡುತ್ತಿದ್ದರಿಂದ ಕೊನೆಗೆ ಸಂಬಂಧಿಯೊಬ್ಬರ ಬಳಿ ಹೋಗಿ ಹಣ ತೆಗೆದುಕೊಂಡು ಬೆಂಗಳೂರು ತಲುಪಿದ್ದರು. ಅಲ್ಲಿಂದ ಚೆನ್ನೈಗೆ ಹೋಗಿ ಡಾ.ರಾಜ್ ಮನೆಗೆ ಹೋಗಿದ್ದರಂತೆ. ಅಲ್ಲಿ ತನಗೆ ಏನಾದರು ಕೆಲಸ ಕೊಡಿ ಎಂದು ಕೇಳಿಕೊಂಡಿದ್ದರು. ನಾನು ಬೆಂಗಳೂರಿಗೆ ಸಿನಿಮಾ ಶೂಟಿಂಗ್ ಗೆ ಕಂಠೀರವ ಸ್ಟುಡಿಯೋಕ್ಕೆ ಬರುತ್ತೇನೆ ಮೂರ್ನಾಲ್ಕು ದಿನದಲ್ಲಿ ಭೇಟಿಯಾಗುವೆ ಎಂದು ಹೇಳಿದ್ದರು. ಅಲ್ಲಿಂದ ವಾಪಸ್ ಬಂದ ಬಿರದಾರ್ ಗೆ ಕಂಠೀರವ ಸ್ಟುಡಿಯೋ ಎಲ್ಲಿ ಏನು ಎಂಬುದು ತಿಳಿಯದೇ ಉಳಿದುಬಿಟ್ಟಿದ್ದರು. ಅಂತೂ ಅರೆಹೊಟ್ಟೆ, ಉಪವಾಸ ಹೀಗೆ ಆರು ತಿಂಗಳ ಕಾಲ ಬೆಂಗಳೂರಿನಲ್ಲಿ ಕಳೆದ ಬಿರದಾರ್ ಗೆ ಕಾಶೀನಾಥ್ ಪರಿಚಯವಾಗಿ “ಅಮ್ಮಾ, ತಾಯಿ” ಎಂಬ ಭಿಕ್ಷುಕನ ಡೈಲಾಗ್ ಮೂಲಕ ಸಿನಿಮಾರಂಗದಲ್ಲಿ ನೆಲೆಯೂರುವಂತಾಗಿತ್ತು ಎಂಬುದು ಬಿರದಾರ್ ಮನದಾಳದ ಮಾತು.